ನವದೆಹಲಿ(ಏ.02): ದೆಹಲಿಯ ತಬ್ಲೀಘಿ ಜಮಾತ್‌ ಧರ್ಮಪ್ರಚಾರ ಸಮ್ಮೇಳನದಲ್ಲಿ ಭಾಗಿಯಾಗಿದ್ದವರಿಂದ ದೇಶವ್ಯಾಪಿ ಕೊರೋನಾ ಸೋಂಕು ಹಬ್ಬುವ ಭೀತಿ ಎದುರಾಗಿರುವಾಗಲೇ, ಈ ಕಾರ್ಯಕ್ರಮಕ್ಕೆ ಬಂದಿದ್ದ ಹಲವು ಸ್ವದೇಶಿ ಮತ್ತು ವಿದೇಶಿ ಪ್ರಜೆಗಳು ದೇಶದ ವಿವಿಧ ರಾಜ್ಯಗಳ ಮಸೀದಿಗಳಿಗೆ ಭೇಟಿ ನೀಡಿರುವ ಮತ್ತು ಅಲ್ಲಿ ಅವಿತುಕೊಂಡಿದ್ದ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ಬೆಳವಣಿಗೆ ಕೊರೋನಾ ನಿಗ್ರಹಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳನ್ನು ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಮಾಡುವ ಎಲ್ಲಾ ಸಾಧ್ಯತೆಗಳಿವೆ.

ಮಾ.1ರಿಂದ ಮರ್ಕಜ್‌ ನಿಜಾಮುದ್ದೀನ್‌ ಮಸೀದಿಯಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ದೇಶ- ವಿದೇಶಗಳ 8000ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಆದರೆ ಈ ನಡುವೆ ದೇಶದಲ್ಲಿ ಕೊರೋನಾ ಭೀತಿ ಹೆಚ್ಚಿದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ದೆಹಲಿ ಸರ್ಕಾರ ದೊಡ್ಡ ಕಾರ್ಯಕ್ರಮಗಳಿಗೆ ನಿಷೇಧ ಹೇರಿತ್ತು. 5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರಬಾರದು ಎಂದು ಆದೇಶಿಸಿತ್ತು. ಆದರೂ ಮಸೀದಿಯಲ್ಲಿ ಕಾರ್ಯಕ್ರಮ ಎಂದಿನಂತೆ ಮುಂದುವರೆಸಲಾಗಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವ್ಯಾಪಿ ಲಾಕ್‌ಡೌನ್‌ ಘೋಷಿಸಿದ್ದರು.

ಜಮಾತ್ ಖಾಲಿ ಮಾಡಿಸಲು ರಾತ್ರೋ ರಾತ್ರಿ ಮಸೀದಿ ಆವರಣ ತಲುಪಿದ್ದ ಧೋವಲ್!

ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಹಲವು ಸ್ವದೇಶಿಯರು ಮತ್ತು ವಿದೇಶಿಯರು ದೆಹಲಿ ಸುತ್ತಮುತ್ತಲಿನ ಹಲವು ಮಸೀದಿಗಳಿಗೆ ತೆರಳಿ ಅಲ್ಲಿ ಆಶ್ರಯ ಪಡೆದುಕೊಂಡಿರುವ ವಿಷಯ ಇದೀಗ ಬೆಳಕಿಗೆ ಬಂದಿದೆ. ಪ್ರವಾಸಿ ವೀಸಾದಲ್ಲಿ ಬಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇವರ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡುವುದು ಮಸೀದಿಗಳ ಮುಖ್ಯಸ್ಥರ ಕರ್ತವ್ಯವಾಗಿದ್ದರೂ, ಈ ಕುರಿತು ಅವರಾರ‍ಯರು ಸ್ಥಳೀಯ ಆಢಳಿತಕ್ಕೆ ಮಾಹಿತಿಯೇ ನೀಡಿಲ್ಲ.

ಇದರ ಮಾಹಿತಿ ಪಡೆದ ಪೊಲೀಸರು, ಕಳೆದ 4-5 ದಿನಗಳ ಅವಧಿಯಲ್ಲಿ ದೆಹಲಿ 15ಕ್ಕೂ ಹೆಚ್ಚು, ಉತ್ತರಪ್ರದೇಶದ ಬಿಜ್ನೋರ್‌, ಲಖನೌ, ಮೇರಠ್‌, ಜಾರ್ಖಂಡ್‌ನ ರಾಂಚಿ, ಮಹಾರಾಷ್ಟ್ರದ ಅಹಮದ್‌ನಗರ್‌ದ ಹಲವು ಮಸೀದಿಗಳ ಮೇಲೆ ದಾಳಿ ನಡೆಸಿದ ವೇಳೆ ಅಲ್ಲಿ ನೂರಾರು ಸ್ವದೇಶಿ ಮತ್ತು ವಿದೇಶಿಯರು ಅವಿತುಕೊಂಡಿದ್ದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯಗಳ ಪೊಲೀಸರು ಇವರೆನ್ನೆಲ್ಲಾ ಕೊರೋನಾ ಸೋಂಕಿನ ಪರೀಕ್ಷೆಗೆ ಒಳಪಡಿಸಿದ್ದು, ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.

ನಿಜಾಮುದ್ದೀನ್‌ಗೆ ತೆರಳಿದ್ದವರು ಕೂಡಲೇ ತಿಳಿಸಿ, ಇಲ್ಲಿದೆ ಸಹಾಯವಾಣಿ ಸಂಖ್ಯೆ

ಈ ನಡುವೆ ಜಮಾತ್‌ ಕಾರ್ಯಕ್ರಮಕ್ಕೆ ಬಂದಿದ್ದ ಪ್ರತಿನಿಧಿಗಳು ದೆಹಲಿಯ ವಿವಿಧ ಭಾಗದ 16 ಮಸೀದಿಗಳಲ್ಲಿ ತಂಗಿದ್ದರು ಎನ್ನುವ ಮಾಹಿತಿಯನ್ನು ದೆಹಲಿ ಪೊಲೀಸರು ಸರ್ಕಾರಕ್ಕೆ ನೀಡಿದ್ದಾರೆ. ವಿದೇಶಿ ಪ್ರಜೆಗಳು ಕೂಡ ಅಲ್ಲಿ ತಂಗಿದ್ದು ಅವರ ವಿರುದ್ಧ ತಕ್ಷಣ ಕ್ರಮಕ್ಕೆ ಸಲಹೆ ನೀಡಿದೆ. ಹೀಗೆ ತಂಗಿದ್ದವರಲ್ಲಿ ಇಂಡೋನೇಷ್ಯಾದ 94, ಕಿರ್ಗಿಸ್ಥಾನದ 13, ಬಾಂಗ್ಲಾದೇಶದ 9, ಮಲೇಷ್ಯಾದ 8, ಅಲ್ಜೀರಿಯಾದ 7, ಟ್ಯುನೇಷಿಯಾ, ಬೆಲ್ಜಿಯಂ ಹಾಗೂ ಇಟಲಿಯಿಂದ ತಲಾ ಓರ್ವ ಪ್ರತಿನಿಧಿಗಳು ಸೇರಿ 157 ಮಂದಿ ಸೇರಿದ್ದಾರೆ ಎಂದು ಪೊಲೀಸರು ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.