ಮುಂಬೈ(ಏ.06): ಕೊರೋನಾ ವೈರಸ್ ಮಹಾಮಾರಿ ಭಾರತದಲ್ಲಿ ಆತಂಕ ಹೆಚ್ಚಿಸುತ್ತಿದೆ. ವೈರಸ್ ತೀವ್ರಗತಿಯಲ್ಲಿ ಹರಡುತ್ತಿದೆ. ಇದೀಗ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಮುಂಬೈನ ವೋಕಾರ್ಡ್ ಆಸ್ಪತ್ರೆ 26 ನರ್ಸ್ ಹಾಗೂ ಮೂವರು ವೈದ್ಯರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಮುಂಬೈ ಮಹಾನಗರ ಪಾಲಿಕೆ ಆಸ್ಪತ್ರೆಯ ಸಾರ್ವಜನಿಕೆ ಸೇವೆಯನ್ನು ಸ್ಥಗಿತಗೊಳಿಸಿದೆ.

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದರೂ ವೋಕಾರ್ಡ್ ಆಸ್ಪತ್ರೆ ತನ್ನ ಸಿಬ್ಬಂದಿಗಳನ್ನು ಕುರಿತು ನಿರ್ಲಕ್ಷ್ಯವಹಿಸಿರುವುದೇ ಈ ಸ್ಥಿತಿಗೆ ಕಾರಣ ಎಂದು ಮುಂಬೈ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿ 300 ಸಿಬ್ಬಂದಿಗಳಿದ್ದಾರೆ. ಆದರೆ ಯಾವುದೇ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ. ಹೀಗಾಗಿ ವೈರಸ್ ತಗುಲಿದೆ ಎಂದಿದ್ದಾರೆ.

ಇದೀಗ ಆಸ್ಪತ್ರೆಯನ್ನು ಸೀಝ್ ಮಾಡಲಾಗಿದೆ.  300 ಸಿಬ್ಬಂದಿಗಳು ಆಸ್ಪತ್ರೆಯೊಳಗೆ ಬಂಧಿಯಾಗಿದ್ದಾರೆ. ಕೊರೋನಾ ವೈರಸ್ ಇಲ್ಲ ಎಂದು ದೃಢಪಟ್ಟವರು ಮಾತ್ರ ಹೊರಗೆ ಹೋಗಬಹುದು ಎಂದು ಮುಂಬೈ ಮಹಾನಗರ ಪಾಲಿಕೆ ಹೇಳಿದೆ. 

ಮಾರ್ಚ್ 20 ರಂದು ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಆಗಲೇ ವೋಕಾರ್ಡ್ ಆಸ್ಪತ್ರೆ ಆಡಳಿತ ಮಂಡಳಿ  ಮುಂಜಾಗ್ರತ ಕ್ರಮ ತೆಗೆದುಕೊಂಡಿದ್ದರೆ ಈ ಪರಿಸ್ಛಿತಿ ಬರುತ್ತಿರಲಿಲ್ಲ ಎಂದು ಮುಂಬೆ ಮಹಾನಗರ ಪಾಲಿಗೆ ಹೇಳಿದೆ.