ಮುಂಬೈ(ಮಾ.28): ಮೊಬೈಲ್‌ನಲ್ಲಿ ಬರುವ ಕೊರೋನಾ ಕುರಿತ ಮಾಹಿತಿಗಳಿಗಾಗಿ ಜನ ಬೆನ್ನುಬಿದ್ದಿರುವಾಗಲೇ ಹ್ಯಾಕರ್‌ಗಳು, ಕೊರೋನಾ ಹೆಸರಿನಲ್ಲೇ ಮಾಲ್‌ವೇರ್‌ಗಳನ್ನು ಸೃಷ್ಟಿಸಿ, ಮಾಹಿತಿ ಕದಿಯುತ್ತಿರುವ ಆಘಾತಕಾರಿ ಬೆಳವಣಿಗೆ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಹೀಗಾಗಿ ಇಂಥ ಮಾಹಿತಿ ಕದಿಯುವ ಲಿಂಕ್‌ಗಳ ಬಗ್ಗೆ ಎಚ್ಚರವಾಗಿರಿ ಎಂದು ಮಹಾರಾಷ್ಟ್ರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕೊರೋನಾ ಸೋಂಕು ದೇಶವ್ಯಾಪಿಯಾದ ಬೆನ್ನಲ್ಲೇ, ಎಲ್ಲೆಲ್ಲಿ ರೋಗಿಗಳು ಮತ್ತು ಹೋಮ್‌ ಕ್ವಾರಂಟೈನ್‌ಗೆ ಸೂಚಿಸಲ್ಪಟ್ಟವ್ಯಕ್ತಿಗಳು ಇದ್ದಾರೆ ಎಂಬ ಬಗ್ಗೆ ತಾಜಾ ಮಾಹಿತಿ ನೀಡುವ ಹಲವು ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ಜೊತೆಗೆ ಕೊರೋನಾ ನಿಗ್ರಹಕ್ಕೆ ಹಲವು ಉಪಾಯಗಳನ್ನು ಸೂಚಿಸುವ ಸುದ್ದಿಗಳು ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಜನ ಕೂಡಾ ಇಂಥ ಲಿಂಕ್‌ಗಳಿಗಾಗಿ ಮುಗಿ ಬೀಳುತ್ತಿದ್ದಾರೆ.

ಇಂಥ ಸನ್ನಿವೇಶವನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು, ಕೊರೋನಾ ವೈರಸ್‌ ಮ್ಯಾಪ್‌ ಹೆಸರಲ್ಲಿ ಮಾಲ್‌ವೇರ್‌ಗಳÜನ್ನು ಮೊಬೈಲ್‌ಗೆ ರವಾನಿಸುತ್ತಿದ್ದಾರೆ. ಇವುಗಳನ್ನು ಬಳಕೆದಾರರು ಓಪನ್‌ ಮಾಡುತ್ತಲೇ, ಅದು ಮೊಬೈಲ್‌ನಲ್ಲಿ ಗ್ರಾಹಕರ ರಹಸ್ಯ ಮಾಹಿತಿಯನ್ನು ದೋಚುತ್ತಿವೆ ಎಂಬ ವಿಷಯವನ್ನು ಮಹಾರಾಷ್ಟ್ರದ ಧುಲೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಇಂಥ ಸುದ್ದಿಗಳು, ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.