ನವದೆಹಲಿ(ಜೂ.26): ಜನಪ್ರಿಯ ಫೇರ್‌ನೆಸ್‌ ಕ್ರೀಮ್‌ ‘ಫೇರ್‌ ಆ್ಯಂಡ್‌ ಲವ್ಲಿ’ ಹೆಸರಿನಿಂದ ‘ಫೇರ್‌’ ಎಂಬುದನ್ನು ತೆಗೆದುಹಾಕಲು ಹಿಂದುಸ್ತಾನ್‌ ಯೂನಿಲಿವರ್‌ (ಎಚ್‌ಯುಎಲ್‌) ಕಂಪನಿ ನಿರ್ಧರಿಸಿದೆ. ಆದರೆ, ಕ್ರೀಮ್‌ನ ಹೊಸ ಹೆಸರು ಏನಿರುತ್ತದೆ ಎಂಬುದನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ಸರ್ಕಾರದ ಒಪ್ಪಿಗೆಯ ನಂತರ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ಬ್ಲ್ಯಾಕ್‌ ಲೈವ್‌್ಸ ಮ್ಯಾಟರ್‌’ ಹೋರಾಟ ಹಾಗೂ ಜಗತ್ತಿನಾದ್ಯಂತ ಕಾಸ್ಮೆಟಿಕ್ಸ್‌ ಕಂಪನಿಗಳು ‘ಕಪ್ಪಗಿರುವುದು ತಪ್ಪು’ ಎಂಬ ಭಾವನೆ ಬಿತ್ತುತ್ತಿವೆಯೆಂದು ವ್ಯಕ್ತವಾಗುತ್ತಿರುವ ಅಭಿಪ್ರಾಯದಿಂದಾಗಿ ಎಚ್‌ಯುಎಲ್‌ ಈ ನಿರ್ಧಾರಕ್ಕೆ ಬಂದಿದೆ.

ಜಾರ್ಖಂಡ್ ಗ್ರಾಮದ ಮಕ್ಕಳಿಗೆ ಮೈಕ್‌ನಲ್ಲಿ ಪಾಠ..!

‘ನಾವು ನಮ್ಮ ಸ್ಕಿನ್‌ ಕೇರ್‌ ಉತ್ಪನ್ನಗಳನ್ನು ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಬ್ರ್ಯಾಂಡ್‌ ಮಾಡಲು ನಿರ್ಧರಿಸಿದ್ದೇವೆ. ಫೇರ್‌ನೆಸ್‌ ಕ್ರೀಮ್‌ಗಳ ಹೆಸರಿನಲ್ಲಿ ಫೇರ್‌, ವೈಟ್‌, ಲೈಟ್‌ ಇತ್ಯಾದಿ ಪದಗಳನ್ನು ಬಳಸುವುದರಿಂದ ಬೆಳ್ಳಗಿರುವುದೇ ಸೌಂದರ್ಯ ಎಂಬ ಭಾವನೆ ಮೂಡಬಹುದು. ಅದರಿಂದ ಕಪ್ಪಗಿರುವವರ ಬಗ್ಗೆ ಋುಣಾತ್ಮಕ ಭಾವನೆ ಉಂಟಾಗಬಹುದು. ಇಂತಹ ಅಭಿಪ್ರಾಯವನ್ನು ದೂರ ಮಾಡಬೇಕಿದೆ’ ಎಂದು ಎಚ್‌ಯುಎಲ್‌ ಪ್ರಕಟಣೆ ತಿಳಿಸಿದೆ.

ಇನ್ನು, ಇದೇ ರೀತಿಯ ಉತ್ಪನ್ನಗಳನ್ನು ಹೊಂದಿರುವ ಲೋರಿಯಲ್‌, ಪ್ರಾಕ್ಟರ್‌ ಆ್ಯಂಡ್‌ ಗ್ಯಾಂಬಲ್‌, ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕೂಡ ತಮ್ಮ ಫೇರ್‌ನೆಸ್‌ ಕ್ರೀಮ್‌ಗಳ ಪ್ರಚಾರದಿಂದ ಫೇರ್‌, ಬಿಳಿ, ಲೈಟ್‌ ಇತ್ಯಾದಿ ಪದಗಳನ್ನು ಕೈಬಿಡಲು ಮುಂದಾಗಿವೆ. ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪನಿ ಈ ತಿಂಗಳಿನಿಂದ ‘ಚರ್ಮ ಬಿಳಿ ಮಾಡುವ’ ತನ್ನ ಉತ್ಪನ್ನದ ಮಾರಾಟವನ್ನೇ ನಿಲ್ಲಿಸಲಿದೆ ಎಂದು ತಿಳಿದುಬಂದಿದೆ.