ನವದೆಹಲಿ (ಮಾ. 29):  ದೇಶದಲ್ಲಿ ಕೊರೋನಾ ಸೋಂಕು ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ, ಭಾರತದಲ್ಲಿ ರೋಗ ಹರಡುವಿಕೆ ಮಾದರಿಯನ್ನು ವಿಶ್ಲೇಷಿಸಲಾಗಿದ್ದು, ಈ ವೇಳೆ ಭಾರತದಲ್ಲಿ ಕಂಡುಬಂದ ಪ್ರಕರಣಗಳ ಪೈಕಿ ಹೆಚ್ಚಿನ ಪ್ರಕರಣಗಳ ಮೂಲ ದುಬೈ ಎಂದು ಕಂಡುಬಂದಿದೆ.

ಉತ್ತರಪ್ರದೇಶದ ಗಾಜಿಯಾಬಾದ್‌ನ ಸಂತೋಷ್‌ ಇನ್ಸಿಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ಸ್‌ನ ಆರೋಗ್ಯ ಸಂಶೋಧಕ ಡಾ. ಅನುಪಮ್‌ ಸಿಂಗ್‌ ಮತ್ತು ಅವರ ತಂಡ ಈ ವಿಶ್ಲೇಷಣೆ ಮಾಡಿದೆ.

ಏಪ್ರಿಲ್‌ ಅಂತ್ಯಕ್ಕೆ ಗರಿಷ್ಠ ಕಂಟಕ? ದೇಶದಲ್ಲಿ 24 ಕೋಟಿ ಮಂದಿಗೆ ಕೊರೋನಾ ತಗಲುವ ಭೀತಿ!

ಈವರೆಗೆ ಭಾರತದಲ್ಲಿ ಬೆಳಕಿಗೆ ಬಂದ ಪ್ರಕರಣಗಳ ಪೈಕಿ 720 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದ ವೇಳೆ, ಈ ಪೈಕಿ 100 ಕ್ಕೂ ಹೆಚ್ಚು ಮಂದಿ ದುಬೈನಿಂದ ಆಗಮಿಸಿದವರು ಎಂದು ಕಂಡುಬಂದಿದೆ. ದುಬೈನಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಉದ್ಯೋಗಿಗಳು ತವರಿಗೆ ಮರಳಿರುವುದರ ಜೊತೆಗೆ, ಯುರೋಪ್‌ ಮತ್ತು ಅಮೆರಿಕದಿಂದ ತವರಿಗೆ ಮರಳುವ ಹೆಚ್ಚಿನ ಭಾರತೀಯರು ದುಬೈ ಮೂಲಕವೇ ಆಗಮಿಸುತ್ತಾರೆ ಎಂಬುದು ಗಮನಾರ್ಹ.

ಭಾರತದಲ್ಲಿನ ಕೇಸುಗಳಿಗೆ ಮೂಲವಾಗಿರುವ ದೇಶಗಳ ಪೈಕಿ ದುಬೈ ನಂತದಲ್ಲಿರುವ ದೇಶಗಳೆಂದರೆ ಬ್ರಿಟನ್‌, ಇಟಲಿ, ಸೌದಿ ಅರೇಬಿಯಾ ಮತ್ತು ಅಮೆರಿಕ.

ಪುರುಷರೇ ಹೆಚ್ಚು ತುತ್ತು: ಜಾಗತಿಕ ಮಟ್ಟದಂತೆ ಭಾರತದಲ್ಲೂ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಸೋಂಕಿಗೆ ತುತ್ತಾಗಿರುವುದು ಕಂಡುಬಂದಿದೆ. ಭಾರತದಲ್ಲಿ ಬೆಳಕಿಗೆ ಬಂದ ಒಟ್ಟು ಸೋಂಕಿನ ಪೈಕಿ ಶೇ.65 ರಷ್ಟುಪುರುಷರಲ್ಲಿ ಶೇ.35 ರಷ್ಟುಮಹಿಳೆಯರದ್ದು. ಜಾಗತಿಕ ಮಟ್ಟದಲ್ಲಿ ಈ ಅನುಪಾತ ಶೇ.60:40ರಷ್ಟಿದೆ. ಇನ್ನು ಭಾರತದಲ್ಲಿ ಸಾವನ್ನಪ್ಪಿದ ಪೈಕಿ ಬಹುತೇಕರು 60 ವರ್ಷ ಆಸುಪಾಸಿನವರು.

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಭಾರತಕ್ಕೆ ಕಂಟಕವಾದ ದೇಶಗಳು

ದುಬೈ, ಬ್ರಿಟನ್‌, ಇಟಲಿ, ಸೌದಿ ಅರೇಬಿಯಾ, ಅಮೆರಿಕ

ಯಾರಿಗೆ ಹೆಚ್ಚು ಸೋಂಕು

ಜಾಗತಿಕ ಅನುಪಾತ

ಪುರುಷರು ಶೇ.60 ಮಹಿಳೆಯರು ಶೇ.40

ಭಾರತೀಯ ಅನುಪಾತ

ಪುರುಷರು ಶೇ.65 ಮಹಿಳೆಯರು ಶೇ.35

ಆರೋಗ್ಯಕಾರ್ಯಕರ್ತರಿಗೆ ಸೋಂಕು

ಭಾರತದಲ್ಲಿ ಶೇ.3.6 ರಷ್ಟು(26 ಜನ) ಆರೋಗ್ಯ ಕಾರ್ಯಕರ್ತರು ಸೋಂಕಿಗೆ ತುತ್ತಾಗಿದ್ದಾರೆ.

ಒಬ್ಬನಿಂದ ಎಷ್ಟು ಜನರಿಗೆ ಸೋಂಕು

ಭಾರತದಲ್ಲಿ ಪ್ರತಿ ಸೋಂಕಿತ 2.7 ಜನರಿಗೆ ಸೋಂಕು ಹಬ್ಬಿಸುತ್ತಿದ್ದಾನೆ.