ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತವರಿಗೆ; ನಗರದಿಂದ ಹಳ್ಳಿಗೆ ವಲಸಿಗರ ಪ್ರವಾಹ!
ನಗರದಿಂದ ಹಳ್ಳಿಗೆ ವಲಸಿಗರ ಪ್ರವಾಹ! ಲಾಕ್‌ಡೌನ್‌ನಿಂದಾಗಿ ಕಾರ್ಮಿಕರು ತವರಿಗೆ | ನೂರಾರು ಕಿ.ಮೀ ನಡೆದೇ ಪ್ರಯಾಣ | ಆಹಾರ, ಆರೋಗ್ಯ ಸಮಸ್ಯೆ | ಜೊತೆಗೆ, ಇವರಿಂದಲೇ ಕೊರೋನಾ ಹಬ್ಬುವ ಆತಂಕ
ನವದೆಹಲಿ (ಮಾ. 29): ಕೊರೋನಾ ಹಬ್ಬುವುದನ್ನು ತಡೆಯಲು ಕೇಂದ್ರ ಸರ್ಕಾರ ಘೋಷಿಸಿದ 21 ದಿನಗಳ ದೇಶವ್ಯಾಪಿ ಲಾಕ್‌ಡೌನ್, ಸಾವಿರಾರು ವಲಸಿಗ ಕಾರ್ಮಿಕರನ್ನು ಹೈರಾಣಾಗಿಸಿದೆ. ಉದ್ಯೋಗ ಅರಸಿ ಸಾವಿರಾರು ಕಿ.ಮೀ ದೂರದ ಪ್ರದೇಶಗಳಿಗೆ ತೆರಳಿದ್ದ ಕಾರ್ಮಿಕರು, ಇದೀಗ ತವರಿಗೆ ಮರಳಲು ರೈಲು, ಬಸ್ ಸೇರಿದಂತೆ ಯಾವುದೇ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ಮುಂದೇನು ಎಂದು ಹಸಿದ ಹೊಟ್ಟೆಯಲ್ಲೇ ಚಿಂತೆಗೆ ಬೀಳುವಂತಾಗಿದೆ.
ಈ ಪೈಕಿ ಹತ್ತಾರು ಸಾವಿರ ಕಾರ್ಮಿಕರು 100- 200 ಕಿ.ಮೀ ವ್ಯಾಪ್ತಿಯ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುತ್ತಿದ್ದಾರೆ. ಇನ್ನು ಕೆಲ ಕೆಲವು ಕಡೆ ಅಂತಾರಾಜ್ಯ ಬಸ ಟರ್ಮಿನಲ್‌ಗಳಲ್ಲಿ ಕಾರ್ಮಿಕರು ಸಂಚಾರಕ್ಕೆ ಯಾವುದಾದರೂ ವ್ಯವಸ್ಥೆ ಆಗಬಹುದೇ ಎಂದು ಕಾದು ಕುಳಿತಿದ್ದಾರೆ.
ಏಪ್ರಿಲ್ ಅಂತ್ಯಕ್ಕೆ ಗರಿಷ್ಠ ಕಂಟಕ? ದೇಶದಲ್ಲಿ 24 ಕೋಟಿ ಮಂದಿಗೆ ಕೊರೋನಾ ತಗಲುವ ಭೀತಿ!
ಆದರೆ ವಲಸಿಗ ಕಾರ್ಮಿಕರ ಈ ಸಮಸ್ಯೆ, ಮತ್ತೊಂದು ಸಮಸ್ಯೆಗೆ ಕಾರಣವಾಗುವ ಭೀತಿ ಹುಟ್ಟುಹಾಕಿದೆ. ಕಾರಣ, ಕಾರ್ಮಿಕರು ತಾವು ನಡೆದುಹೋಗುವ ಯಾವುದೇ ಸ್ಥಳದಲ್ಲಿ ತಾವೇ ಕೊರೋನಾ ಸೋಂಕಿಗೆ ತುತ್ತಾಗುವ ಜೊತೆಜೊತೆಗೇ, ತಮ್ಮಿಂದ ಬೇರೆಯವರಿಗೂ ಸೋಂಕು ಹಬ್ಬಿಸುವ ಆತಂಕವೊಂದು ಎದುರಾಗಿದೆ.
ಹೀಗಾಗಿಯೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಕಾರ್ಮಿಕರ ವಲಸೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಜೊತೆಗೆ ವಲಸೆ ಕಾರ್ಮಿಕರ ಆಹಾರ ಮತ್ತು ವಸತಿಗಾಗಿ ರಾಜ್ಯ ವಿಪತ್ತು ಪರಿಹಾರ ನಿಧಿಯ 29 ಸಾವಿರ ಕೋಟಿ ರು. ಬಳಕೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ಹೇಳಿದೆ.
ಅಲ್ಲದೆ, ನಗರ ಪ್ರದೇಶಗಳಲ್ಲಿ ಅವರ ಕೂಲಿ ಕಾರ್ಮಿಕರಿಗಾಗಿ ಶಿಬಿರ ಸ್ಥಾಪನೆ ಮಾಡಿ, ಆರೋಗ್ಯ ಪರೀಕ್ಷೆ ನಡೆಸುವಂತೆ ನಿರ್ದೇಶಿಸಿದೆ. ಮತ್ತೊಂದೆಡೆ ನಡೆದೇ ಊರು ಸೇರುತ್ತಿರುವ ಕಾರ್ಮಿಕರಿಗೆ ಆಹಾರ, ನೀರು ಸಿಗುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ರಾಷ್ಟ್ರೀಯ ಹೆದ್ದಾರಿ ಮುಖ್ಯಸ್ಥರು ಹಾಗೂ ಎಲ್ಲಾ ಟೋಲ್ ನಿರ್ವಹರಿಗೆ ಸೂಚನೆ ನೀಡಿದ್ದಾರೆ.
ಜಿಡಿಪಿ ಇಳಿದರೂ ಭಾರತವೇ ಅತಿ ವೇಗದಲ್ಲಿ ಬೆಳೆಯುವ ಆರ್ಥಿಕತೆ
ಗಡಿಯಲ್ಲಿ ಸಂಕಷ್ಟ:
ವಲಸೆ ಹೋಗಿದ್ದ ಸ್ಥಳದಲ್ಲಿ ಉದ್ಯೋಗ, ಆಹಾರ, ವಾಸ್ತವ್ಯಕ್ಕೆ ಸಂಕಷ್ಟಎದುರಾದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಗೆ ತೆರಳಿದ್ದ ಹತ್ತಾರು ಸಾವಿರ ಕಾರ್ಮಿಕರು ತವರಿನತ್ತ ಮುಖ ಮಾಡಿದ್ದಾರೆ. ಅದರಲ್ಲೂ ಉತ್ತರಪ್ರದೇಶ, ಬಿಹಾರ, ಒಡಿಶಾ, ಆಂಧ್ರ,ತೆಲಂಗಾಣದ ಗಡಿಭಾಗಗಳಲ್ಲಿ ಸಾವಿರಾರು ಕಾರ್ಮಿಕರು ಬೀಡುಬಿಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಈ ಕಾರ್ಮಿಕರಿಗೆ ರಾಜ್ಯ ಪ್ರವೇಶಕ್ಕೆ ಮಾಡಿಕೊಡದೇ ಇರುವುದು ಹೊಸ ಸಮಸ್ಯೆಗೆ ಕಾರಣವಾಗಿದೆ.
ಅದರಲ್ಲೂ ಉತ್ತರಪ್ರದೇಶದೊಂದಿಗೆ ಗಡಿ ಹಂಚಿಕೊಂಡಿರುವ ಹಲವು ರಾಜ್ಯಗಳಲ್ಲಿ ಈ ಸಮಸ್ಯೆ ಭಾರೀ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಉ.ಪ್ರದೇಶದ ವಿವಿಧ ಗಡಿಭಾಗಗಳಲ್ಲಿ ಸಾವಿರಾರು ಕಾರ್ಮಿಕರು ರಾಜ್ಯ ಪ್ರವೇಶಕ್ಕೆ ಕಾದು ಕುಳಿತಿದ್ದಾರೆ.
ಆದರೆ ಏಕಾಏಕಿ ಇಷ್ಟು ಜನರನ್ನು ತಪಾಸಣೆ ಮಾಡದೇ ಒಳಗೆ ಬಿಟ್ಟುಕೊಳ್ಳುವುದು ಯುಪಿ ಸರ್ಕಾರಕ್ಕೆ ಸಮಸ್ಯೆ ತಂದೊಡ್ಡಿದೆ. ಮತ್ತೊಂದೆಡೆ ಇತರೆ ರಾಜ್ಯಗಳು ಈ ಕಾರ್ಮಿಕರ ಸಂಚಾರಕ್ಕೆ ಅಡ್ಡಿ ಮಾಡುತ್ತಿರುವುದು ಸಮಸ್ಯೆ ಮತ್ತಷ್ಟುಬಿಗಡಾಯಿಸುವಂತೆ ಮಾಡಿದೆ.
1000 ಬಸ್: ಈ ನಡುವೆ ರಾಜ್ಯದ ಗಡಿ ಭಾಗಕ್ಕೆ ಬಂದಿರುವ ವಲಸೆ ಕಾರ್ಮಿಕರನ್ನು ಸ್ವಂತ ಊರಿಗೆ ಕರೆದುಕೊಂಡು ಹೋಗಲು ಉತ್ತರ ಪ್ರದೇಶ ಸರ್ಕಾರ ಗಡಿ ಜಿಲ್ಲೆಗಳಲ್ಲಿ 1000 ಬಸ್‌ಗಳ ವ್ಯವಸ್ಥೆ ಮಾಡಿದೆ. ಅಲ್ಲದೆ ರಾಜ್ಯಕ್ಕೆ ಆಗಮಿಸುವ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವುದಾಗಿ ಘೋಷಿಸಿದೆ.