ಮಹಾರಾಷ್ಟ್ರ(ಮಾ.26): ಸೋಷಿಯಲ್ ಡಿಸ್ಟೆಂನ್ಸಿಂಗ್ ಒಂದೇ ಕೊರೋನಾ ತಡೆಯಲು ಹಾದಿ ಎಂಬ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ್ದಾರೆ. ಹೀಗಿದ್ದರೂ ಇಂತಹ ಲಾಕ್‌ಡೌನ್ ಸ್ಥಿತಿಯಲ್ಲಿ ವೈದ್ಯರು, ಪೊಲೀಸರು, ನರ್ಸ್‌ಗಳು, ಮಾಧ್ಯಮ ಮಂದಿ ಹಾಗೂ ಇತರ ಅಗತ್ಯ ಸೇವೆ ಸಲ್ಲಿಸುವ ಸಿಬಬ್ಬಂದಿ ಮನೆಯಿಂದ ಹೊರ ಬರಲೇಬೇಕು. ಬಹುತೇಕ ಮಂದಿ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕುಳಿತಿರುವಾಗ ಇವರು ಮನೆಯಿಂದ ಹೊರಬಂದು ಲಾಕ್‌ಡೌನ್‌ ಸರಿಯಾಗಿ ಪಾಲಿಸಲಾಗುತ್ತಿದೆಯಾ ಎಂದು ಪರಿಶೀಲಿಸಲೇಬೇಕು. 

ನೆಮ್ಮದಿಯಾಗಿದ್ದ ಈ ಪುಟ್ಟ ರಾಷ್ಟ್ರಕ್ಕೂ ಲಗ್ಗೆಯಿಟ್ಟ ಕೊರೋನಾ: ದಾಖಲಾಯ್ತು ಮೊದಲ ಪ್ರಕರಣ!

ಹೀಗಿದ್ದರೂ ಅನೇಕ ಮಂದಿ ಲಾಕ್‌ಡೌನ್ ಸರಿಯಾಗಿ ಪಾಲಿಸುತ್ತಿಲ್ಲ. ಕೊರೋನಾ ಅಪಾಯವೆಷ್ಟು ಎಂಬುವುದನ್ನು ಗಂಭಿರವಾಗಿ ಪರಿಗಣಿಸದ ಅನೇಕ ಮಂದಿ ರಾಜಾರೋಷವಾಗಿ ಹೊರಗೆ ತಿರುಗಾಡಲು ಅನುವಾಗುತ್ತಾರೆ. ಈ ಮೂಲಕ ತಾವೂ ಕೆಡುವುದಲ್ಲದೇ, ಸಮಾಜವನ್ನೂ ಕೆಡಿಸುತ್ತಾರೆ. ಇಂತಹವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಲಾಕ್‌ಡೌನ್ ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಮನೆಯಲ್ಲಿ ಬಿಟ್ಟು ಅವರು ದೇಶದ ಸೇವೆಗಾಗಿ ಹೊರಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಿರುವಾಗ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್‌ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಕೊರೋನಾವನ್ನು ಸಾಮಾನ್ಯವಾಗಿ ಪರಿಗಣಿಸಿ, ರಾಜಾರೋಷವಾಗಿ ಹೊರಗೋಗುವವರು 31 ಸೆಕೆಂಡ್ ವಿಡಿಯೋವನ್ನು ತಪ್ಪದೇ ನೋಡಬೇಕು. ಪೊಲೀಸ್ ಸಿಬ್ಬಂದಿಯ ಮಗುವೊಂದು ತಂದೆ ಕರ್ತವ್ಯಕ್ಕೆ ಹೊರಡುವಾಗ ಮುಗ್ಧತೆಯಿಂದ ಹೊರಗೋಗಬೇಡಪ್ಪಾ, ಕೊರೋನಾ ಇದೆ ಎಂದು ಅಳುವ ವಿಡಿಯೋ ಇದು. 

ಹೀಗಿರುವಾಗ ಪೊಲೀಸ್ ಸಿಬ್ಬಂದಿ ಮಗುವನ್ನು ಸಮಾಧಾನಪಡಿಸುತ್ತಾ ಅಧಿಕಾರಿಗಳಿಂದ ಕರೆ ಬಂದಿದೆ. ಎರಡು ನಿಮಿಷದಲ್ಲಿ ಹೋಗಿ ಬರ್ತೀನಿ ಎನ್ನುತ್ತಾರೆ.

ಹೆಣಗಳ ರಾಶಿಯೇ ಬಿದ್ದ ಇಟಲಿಯಲ್ಲಿ ಲಾಕ್‌ಡೌನ್‌ ನಂತ್ರ ಕೊರೋನಾ ಪ್ರಕರಣ ಇಳಿಕೆ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕೊರೋನಾ ವಿರುದ್ಧ ಸಮರ ಸಾರಿರುವ ವೈದ್ಯರು, ಪೊಲೀಸರು, ಮಾಧ್ಯಮ ಮಂದಿ ಹಾಗೂ ಅಗತ್ಯ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸಲಾಂ ಎನ್ನುತ್ತಿದ್ದಾರೆ.

ಇನ್ನು ಕೊರೋನಾವನ್ನು ಕಡೆಗಣಿಸಿ ಮನೆ ಹೊರಗೆ ಕಾಲಿಡುವವರು ಸರ್ಕಾರ ಸಾರ್ವಜನಿಕರ ಹಿತಕ್ಕಾಗಿ ಈ ಲಾಕ್‌ಡೌನ್‌ ತಂದಿದೆ. ಹೊರಗೆ ಹೋಗೋದು ಸುಲಭ ಆದರೆ ಎದುರಾಗುವ ಅಪಾಯದಿಂದ ಪರಿತಪಿಸಬೇಕಾದವರು ಹಲವರು ಎಂಬುವುದನ್ನು ನೆನಪಿಡಲೇಬೇಕು. ಕೊರೋನಾ ಯೋಧರು ನಮಗಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿರುವಾಗ ಅವರ ರಕ್ಷಣೆ ಕೂಡಾ ನಮ್ಮ ಹೆಗಲ ಮೇಲಿದೆ. ಮನೆಯಲ್ಲಿದ್ದು, ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳುವುದರೊಂದಿಗೆ ಸಮಾಜವನ್ನೂ ಕಾಪಾಡೋಣ. ಈ ಮೂಲಕ ಕೊರೋನಾ ಯೋಧರಿಗೆ ನಮ್ಮ ಬೆಂಬಲ ನೀಡೋಣ.