ನವದೆಹಲಿ(ಮಾ.24): ಕಂಡು ಕೇಳರಿಯದ ಕ್ರಮವೊಂದರಲ್ಲಿ ಎಲ್ಲ ದೇಶೀಯ ವಿಮಾನ ಸಂಚಾರಗಳನ್ನು ಮಂಗಳವಾರ ಮಧ್ಯರಾತ್ರಿಯಿಂದ ಮಾಚ್‌ರ್‍ 31ರವರೆಗೆ ನಿರ್ಬಂಧಿಸಲಾಗಿದೆ. ಕೊರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ದೇಶೀ ವಿಮಾನ ಸಂಚಾರವನ್ನು ಸಂಪೂರ್ಣ ಬಂದ್‌ ಮಾಡುತ್ತಿರುವುದು ಇದೇ ಮೊದಲು.

ಭಾನುವಾರದಿಂದ ಜಾರಿ ಆಗುವಂತೆ ವಿದೇಶೀ ವಿಮಾನಗಳು ಕೂಡ ಭಾರತಕ್ಕೆ ಬರುವುದನ್ನು ನಿರ್ಬಂಧಿಸಲಾಗಿತ್ತು.

ಕೊರೋನಾಪೀಡಿತ ಪ್ರದೇಶಗಳ ಪ್ರಯಾಣಿಕರು ಇತರೆಡೆ ಸಂಚರಿಸಿದರೆ ಆ ಪ್ರದೇಶಗಳಲ್ಲಿ ಅಥವಾ ಅವರ ಸಹಪ್ರಯಾಣಿಕರಿಗೆ ವೈರಾಣು ಹರಡುವ ಸಾಧ್ಯತೆ ವ್ಯಾಪಕ ಆಗಿರುವ ಕಾರಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಕೇಂದ್ರ ವಿಮಾನಯಾನ ಸಚಿವಾಲಯದ ವಕ್ತಾರರು ಈ ಕುರಿತು ವಿವರ ನೀಡಿದ್ದು, ‘ಮಾಚ್‌ರ್‍ 24ರ ರಾತ್ರಿ 11.59ಕ್ಕೆ ಮುನ್ನ ಲ್ಯಾಂಡ್‌ ಆಗುವ ದೇಶೀ ವಿಮಾನಗಳಿಗೆ ಅವಕಾಶ ನೀಡಲಾಗುವುದು. ನಂತರದ ವಿಮಾನಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಮಾ.31ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ’ ಎಂದು ಹೇಳಿದ್ದಾರೆ.

ಸಚಿವಾಲಯ ಪ್ರತ್ಯೇಕ ಹೇಳಿಕೆ ಕೂಡ ಬಿಡುಗಡೆ ಮಾಡಿದೆ. ‘ಸರಕು ಸಾಗಣೆ ವಿಮಾನಗಳು, ಏರ್‌ ಆ್ಯಂಬುಲೆನ್ಸ್‌ಗಳು, ಸಾಗರದಾಚೆ ಸಂಚರಿಸುವ ಹೆಲಿಕಾಪ್ಟರ್‌ಗಳು, ವಿಮಾನಯಾನ ಪ್ರಾಧಿಕಾರದ ವಿಶೇಷ ಅನುಮತಿ ಪಡೆದ ವಿಮಾನಗಳು ಹಾಗೂ ರಾಜ್ಯ ಸರ್ಕಾರದ ಪರವಾಗಿ ಹಾರಾಡುತ್ತಿರುವ ವಿಮಾನ ಅಥವಾ ಹೆಲಿಕಾಪ್ಟರ್‌ಗಳಿಗೆ ನಿರ್ಬಂಧ ಅನ್ವಯಿಸದು’ ಎಂದು ಸ್ಪಷ್ಟಪಡಿಸಿದೆ.

ಕೊರೋನಾ ವೈರಾಣು ಹರಡುವಿಕೆ ಕಾರಣ ಈಗಾಗಲೇ ಅನೇಕ ವಿಮಾನಗಳು ಸಂಚಾರ ರದ್ದುಗೊಳಿಸಿದ್ದವು ಹಾಗೂ ಪ್ರಯಾಣಿಕರ ಕೊರತೆಯ ಬಿಸಿ ವಿಮಾನಯಾನ ಕಂಪನಿಗಳನ್ನು ಬಾಧಿಸಿತ್ತು. ಈ ಕಾರಣ ಗೋ ಏರ್‌ ಕಂಪನಿ ಕೆಲವು ಪೈಲಟ್‌ಗಳಿಗೆ ವೇತನ ರಹಿತ ರಜೆ ಮಂಜೂರು ಮಾಡಿತ್ತು ಹಾಗೂ ಉನ್ನತ ಅಧಿಕಾರಿಗಳ ವೇತನಕ್ಕೆ ಕತ್ತರಿ ಹಾಕಿತ್ತು. ಏರ್‌ ಇಂಡಿಯಾ ತನ್ನ ಉದ್ಯೋಗಿಗಳ ಭತ್ಯೆಯನ್ನು ಶೇ.10ರಷ್ಟುಕಡಿತಗೊಳಿಸಿತ್ತು. ಗೋ ಏರ್‌ ಕೂಡ ವೇತನವನ್ನು ಶೇ.25ರಷ್ಟುಕಡಿತ ಮಾಡಿತ್ತು.

ಮಾ.31ರ ನಂತರವೂ ಮುಂದುವರಿಕೆ?:

ಈ ನಡುವೆ, ಕೊರೋನಾ ವೈರಸ್‌ ಭೀತಿಯ ಕಾರಣ ಮಾಚ್‌ರ್‍ 31ರ ನಂತರವೂ ದೇಶೀ ವಿಮಾನ ಸಂಚಾರದ ಮೇಲಿನ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಮಾನಯಾನ ಸಲಹಾ ಸಂಸ್ಥೆಯಾದ ‘ಸಿಎಪಿಎ’ ಹೇಳಿದೆ.