48 ಗಂಟೆಯಲ್ಲಿ 7500ರು.ನ ವೆಂಟಿಲೇಟರ್ ಮಾದರಿ ತಯಾರಿಸಿದ ಮಹೀಂದ್ರಾ!
ಕೊರೋನಾ ವಿರುದ್ಧದ ಹೋರಾಟಕ್ಕೆ ಕಡಿಮೆ ಬೆಲೆಯ ವೆಂಟಿಲೇಟರ್| ಮಹೀಂದ್ರಾ ಕಂಪನಿಯಿಂದ ಅತಿ ಕಡಿಮೆ ಬೆಲೆಯ ವೆಂಟಿಲೇಟರ್ ತಯಾರಿಕೆ| ಕೇಂದ್ರದ ಮಂಜೂರು ನಂತರ ಉತ್ಪಾದನೆಗೆ ಮುಂದಾಗಲಿರೋ ಮಹೀಂದ್ರಾ ಕಂಪನಿ
ಮುಂಬೈ(ಮಾ.26): ಭಾರತಕ್ಕೆ ಎಂಟ್ರಿ ನೀಡಿರುವ ಕೊರೋನಾಗೆ ಭಾರತದಲ್ಲಿ ಹದಿನೈದಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 600ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹೀಗಿರುವಾಗ ಕೊರೋನಾ ನಿಯಂತ್ರಿಸಲು ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದೆ. ಹೀಗಿದ್ದರೂ ಸೋಂಕಿತರ ಸಂಖ್ಯೆ ಇಳಿಮುಖವಾಗಿಲ್ಲ. ಸದ್ಯ ಕೊರೋನಾ ವಿರುದ್ಧದ ಹೋರಾಟಕ್ಕೆ ಮಹೀಂದ್ರಾ ಕಂಪನಿ ಸಾಥ್ ನೀಡಿದೆ.
ಹೌದು ಕೆಲ ದಿನಗಳ ಹಿಂದೆ ಆನಂದ್ ಮಹೀಂದ್ರ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ತಾವು ಸರ್ಕಾರಕ್ಕೆ ಸಹಾಯ ಮಾಡಲು ಸಿದ್ದರಿರುವುದಾಗಿ ತಿಳಿಸಿದ್ದರು. ಅಲ್ಲದೇ ವೆಂಟಿಲೇಟರ್ ತಯಾರಿಸುವಲ್ಲೂ ಸರ್ಕಾರಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದ್ದರು. ಅರ ಈ ಟ್ವೀಟ್‌ಗೆ ಭಾರೀ ಶ್ಲಾಘನೆ ವ್ಯಕ್ತವಾಗಿತ್ತು. ಆದರೀಗ ಈ ಟ್ವೀಟ್ ಮಾಡಿದ್ದ ಕೇವಲ 48 ಗಂಟೆಯೊಳಗೆ ಮಹೀಂದ್ರಾ ಕಂಪನಿ ಅತಿ ಕಡಿಮೆ ಬೆಲೆಯ ವೆಂಟಿಲೇಸರ್ ತಯಾರಿಸಿದೆ.
ಹೌದು ಖುದ್ದು ಆನಂದ್ ಮಹೀಂದ್ರ ಈ ಕುರಿತು ಟ್ವೀಟ್ ಮಾಡಿದ್ದು, ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ. ಮಹೀಂದ್ರಾ ಕಂಪನಿಯಿಂದ ಅತಿ ಕಡಿಮೆ ಬೆಲೆಯ ವೆಂಟಿಲೇಟರ್ ತಯಾರಿಸಲಾಗಿದೆ. ವಿದೇಶದಿಂದ ಆಮದಾಗುವ ವೆಂಟಿಲೇಟರ್ ಬೆಲೆ 5 ರಿಂದ 10 ಲಕ್ಷ ರೂ ತಗುಲುತ್ತದೆ. ಆಧರೆ ಮಹೀಂದ್ರಾ ಕಂಪನಿ ಅಭಿವೃದ್ಧಿಪಡಿಸಿರುವ ವೆಂಟಿಲೇಸರ್‌ಗೆ ಕೇವಲ 7,500 ರೂಪಾಯಿ ತಗುಲುತ್ತದೆ.
ಇನ್ನು ಕೆಲವೇ ದಿನಗಳಲ್ಲಿ ಈ ವೆಂಟಿಲೇಟರ್ ಉತ್ಪಾದನೆಗೆ ಕೇಂದ್ರದಿಂದ ಅಧಿಕೃತ ಒಪ್ಪಿಗೆ ಸಿಗುವ ಭರವಸೆ ಇದೆ. ಹೀಗಾದಲ್ಲಿ ಸ್ವದೇಶದಲ್ಲೇ ಅತಿ ಕಡಿಮೆ ಬೆಲೆಗೆ ವೆಂಟಿಲೇಟರ್‌ಗಳು ತಯಾರಾಗಲಿವೆ.