ನವದೆಹಲಿ(ಮಾ.30): ಕೊರೋನಾ ಲಾಕ್‌ಡೌನ್‌ನಿಂದ ಕಂಗೆಟ್ಟು ಸಾವಿರಾರು ಪ್ರಮಾಣದಲ್ಲಿ ಸಾಮೂಹಿಕ ಗುಳೆ ಹೊರಟಿದ್ದ ಕಾರ್ಮಿಕರನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಅಂತಾರಾಜ್ಯ ಮತ್ತು ಅಂತರ್‌ಜಿಲ್ಲಾ ಗಡಿಗಳನ್ನು ತಕ್ಷಣದಿಂದ ಮುಚ್ಚುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಅಲ್ಲದೆ ಆದೇಶ ಮೀರಿ ತವರು ರಾಜ್ಯಗಳಿಗೆ ವಲಸೆ ಹೊರಟ ಕಾರ್ಮಿಕರನ್ನು 14 ದಿನಗಳ ಕಾಲ ಕ್ವಾರಂಟೈನ್‌ಗೆ ಗುರಿಪಡಿಸುವುದಾಗಿ ಎಚ್ಚರಿಸುವ ಮೂಲಕ, ಕೊರೋನಾ ಸೋಂಕು ಕೂಡಾ ವಲಸೆ ಹೋಗುವುದನ್ನು ತಪ್ಪಿಸುವ ಯತ್ನ ಮಾಡಿದೆ.

ಇಂಥ ಎಚ್ಚರಿಕೆಯ ಜೊತೆಜೊತೆಗೆ ತವರಿಗೆ ಹೋಗುವ ಭರದಲ್ಲಿ ಅಥವಾ ಹೋಗಲಾಗದೇ ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡ ಸಾವಿರಾರು ವಲಸೆ ಕಾರ್ಮಿಕರ ನೆರವಿಗೆ ಹಲವು ಕ್ರಮಗಳನ್ನೂ ಘೋಷಿಸುವ ಮೂಲಕ ಅವರ ನೆರವಿಗೆ ಸರ್ಕಾರ ಧಾವಿಸಿದೆ.

ಕಟ್ಟಪ್ಪಣೆ:

ಭಾನುವಾರ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಮಹಾನಿರ್ದೇಶಕರ ಜೊತೆ ವಿಡಿಯೋ ಕಾನ್ಫರೆನ್ಸ್‌ ಸಭೆ ನಡೆಸಿದ ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ಮತ್ತು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್‌ ಭಲ್ಲಾ ಕಾರ್ಮಿಕರ ವಲಸೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಅದರನ್ವಯ ತಕ್ಷಣವೇ ಎಲ್ಲಾ ರಾಜ್ಯಗಳು ತಮ್ಮ ತಮ್ಮ ವ್ಯಾಪ್ತಿಯ ಜಿಲ್ಲಾಗಡಿ ಮತ್ತು ಅಂತಾರಾಜ್ಯ ಗಡಿಗಳನ್ನು ಮುಚ್ಚಬೇಕು. ಈ ಮೂಲಕ ಕಾರ್ಮಿಕರ ವಲಸೆ ತಡೆಯಬೇಕು. ಇಂಥ ಕಾರ್ಮಿಕರಿಗೆ ಅವರ ಕರ್ತವ್ಯ ಸ್ಥಳದಲ್ಲೇ ಪರಿಹಾರ ಶಿಬಿರ ನಿರ್ಮಿಸಿ ಅವರಿಗೆ ವಸತಿ, ಆಹಾರ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಲಾಯ್ತು.

ಒಂದು ವೇಳೆ ಯಾವುದೇ ಕಾರ್ಮಿಕ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಬೇರೆ ರಾಜ್ಯಗಳಿಗೆ ತೆರಳಿದ್ದರೆ ಅಥವಾ ತೆರಳಲು ಯತ್ನಿಸಿದರೆ ಅವರನ್ನು ಆಯಾ ರಾಜ್ಯ ಸರ್ಕಾರಗಳು ಸೂಕ್ತ ತಪಾಸಣೆ ನಡೆಸಿ ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ಗೆ ಗುರಿಪಡಿಸಬೇಕು. ಅಲ್ಲದೆ ಈ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠರ ಹೊಣೆ ಎಂದು ಸರ್ಕಾರ ಸಭೆಯಲ್ಲಿ ಎಚ್ಚರಿಸಿದೆ.

ಇದೇ ವೇಳೆ ಭೂಮಾಲೀಕರು, ತಮ್ಮ ಕಾರ್ಮಿಕರಿಂದ ಲಾಕ್‌ಡೌನ್‌ ಅವಧಿಗೆ ಮನೆ ಬಾಡಿಗೆ ಪಡೆಯಬಾರದು, ಮನೆ ಖಾಲಿ ಮಾಡಿಸಬಾರದು, ಅವರ ವೇತನ ಕಡಿತ ಮಾಡಬಾರದು. ಕಾಲಕಾಲಕ್ಕೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ವಿದ್ಯಾರ್ಥಿಗಳನ್ನೂ ತಮ್ಮ ವಾಸಸ್ಥಳ ತೆರವು ಮಾಡುವಂತೆ ಯಾರೂ ಸೂಚಿಸಬಾರದು. ಈ ನಿಯಮ ಮೀರಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.