ನವದೆಹಲಿ(ಏ.10): ಕೊರೋನಾ ವೈರಸ್‌ ಲಾಕ್‌ಡೌನ್‌ ಕಾರಣ ಉದ್ಯಮ ವಲಯ ಸಂಕಷ್ಟಕ್ಕೀಡಾಗಿದೆ. ಅದರಲ್ಲೂ ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸಂಕಟದಲ್ಲಿವೆ. ಹೀಗಾಗಿ ಇವನ್ನು ಸಂಕಷ್ಟದಿಂದ ಮೇಲೆತ್ತಲು ಕೇಂದ್ರ ಸರ್ಕಾರ 50 ಸಾವಿರ ಕೋಟಿಯಿಂದ 75 ಸಾವಿರ ಕೋಟಿ ರು.ವರೆಗಿನ ನಿಧಿ ತೆಗೆದಿರಿಸುವ ಸಾಧ್ಯತೆ ಇದೆ.

ಆದರೆ, ಈ ಪ್ಯಾಕೇಜ್‌ಗಾಗಿ ಹಣ ಕ್ರೋಢೀಕರಿಸಲು ಸರ್ಕಾರವು ಪೆಟ್ರೋಲ್‌, ಡೀಸೆಲ್‌ನಂತಹ ಕೆಲವು ಸರಕುಗಳ ಮೇಲೆ ಸೆಸ್‌ (ಅಧಿಭಾರ) ಹೇರುವ ಸಾಧ್ಯತೆ ಇದೆ. ಇದರಿಂದ ಸಂಗ್ರಹವಾದ ಹಣ ಹಾಗೂ ಕೆಲ ಮಟ್ಟಿಗೆ ಬಜೆಟ್‌ ಹಣ ಬಳಸಿಕೊಂಡು ಪ್ಯಾಕೇಜ್‌ ನೀಡುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಪ್ರಿಯರಿಗೆ ಗುಡ್‌ನ್ಯೂಸ್: ಹೋಮ್ ಡೆಲಿವರಿಗೆ ಸರಕಾರ ಅನುಮತಿ..?

"

‘ನಿರ್ದಿಷ್ಟವಾಗಿ ಎಷ್ಟು ಹಣವನ್ನು ನಿಧಿಗಾಗಿ ಮೀಸಲಿರಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇದು ಕೊರೋನಾ ಕಾರಣ ಘೋಷಣೆಯಾಗಿರುವ ಉತ್ತೇಜಕ ಪ್ಯಾಕೇಜ್‌ನ ಭಾಗವಾಗಲಿದೆ’ ಎಂದು ಅವರು ಹೇಳಿದ್ದಾರೆ. ‘ಈ ನಿಧಿಯನ್ನು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ನೀಡಲಾಗುತ್ತದೆ. ಹೀಗಾಗಿ ಲಾಕ್‌ಡೌನ್‌ನಲ್ಲಿರುವ ನಷ್ಟದಿಂದ ಅವು ಹೊರಬಂದು ತಕ್ಷಣವೇ ತಮ್ಮ ಬಾಕಿ ಕೆಲಸಗಳನ್ನು ಅವು ಗ್ರಾಹಕರಿಗೆ ಪೂರೈಸಬಹುದು. ಇದರಿಂದಾಗಿ, ಹಳಿತಪ್ಪಿದ ಆರ್ಥಿಕತೆ ಸರಿದಾರಿಗೆ ಬರಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಏ.14ರ ನಂತರ ಲಾಕ್‌ಡೌನ್‌ ಮುಂದುವರಿಸಬೇಕೇ ಬೇಡವೇ ಎಂಬ ತೀರ್ಮಾನ ಆದ ನಂತರ ಈ ಪ್ಯಾಕೇಜ್‌ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.