ನವದೆಹಲಿ(ಮಾ.24): ಕೊರೋನಾ ಸೋಂಕು ಭಾನುವಾರ ದೇಶದಲ್ಲಿ ಮತ್ತಿಬ್ಬರನ್ನು ಬಲಿ ಪಡೆದಿದೆ. ಇದರೊಂದಿಗೆ ಭಾರತದಲ್ಲಿ ವೈರಸ್‌ಗೆ ಬಲಿಯಾದವರ ಸಂಖ್ಯೆ 9ಕ್ಕೆ ಏರಿದೆ. ಈ ಹಿಂದೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಬಿಹಾರ, ದೆಹಲಿ, ಪಂಜಾಬ್‌ನಲ್ಲಿ ಒಟ್ಟು 7 ಜನ ಸಾವನ್ನಪ್ಪಿದ್ದರು. ಈ ನಡುವೆ ಸೋಮವಾರ ಮತ್ತೆ 75 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗುವುದರೊಂದಿಗೆ, ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 471ಕ್ಕೆ ಏರಿದೆ.

2 ಸಾವು: ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶದಲ್ಲಿ ಸೋಮವಾರ ತಲಾ ಒಬ್ಬರು ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ 57 ವರ್ಷದ ವ್ಯಕ್ತಿಯೊಬ್ಬರು ಫೆ.16ರಂದು ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ವಿದೇಶಕ್ಕೆ ಹೋಗಿದ್ದ ಯಾವುದೇ ಉದಾಹರಣೆ ಹೊಂದಿರಲಿಲ್ಲ, ಆದರೆ ಇತ್ತೀಚೆಗೆ ಛತ್ತೀಸ್‌ಗಢಕ್ಕೆ ಹೋಗಿಬಂದಿದ್ದರು.

ಇನ್ನು ಹಿಮಾಚಲ ಪ್ರದೇಶದಲ್ಲಿ 24 ವರ್ಷದ ಮಹಿಳೆಯೊಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ. ಇವರು ಇತ್ತೀಚೆಗಷ್ಟೇ ಅಮೆರಿಕದಿಂದ ಮರಳಿದ್ದರು.