ಕೊರೋನಾ ಪೀಡಿತರಿಗೆಂದೇ ಆಸ್ಪತ್ರೆಗಳು ಮೀಸಲು| ರಾಜ್ಯಗಳು ಈ ಕ್ರಮ ಜರುಗಿಸುತ್ತಿವೆ|  ಹರ್ಯಾಣದಲ್ಲಿ ಕೊರೋನಾಗೆಂದೇ 800 ಹಾಸಿಗೆಯ ಆಸ್ಪತ್ರೆ| ಪರೀಕ್ಷೆ ಮಾಡಲು 60 ಖಾಸಗಿ ಲ್ಯಾಬ್‌ಗಳ ನೋಂದಣಿ| ಪೀಡಿತರಿಗಾಗಿ 1200 ಹೊಸ ವೆಂಟಿಲೇಟರ್‌ಗಳಿಗೆ ಆರ್ಡರ್‌| ಕೇಂದ್ರ ಸರ್ಕಾರದ ಹೇಳಿಕೆ

ನವದೆಹಲಿ(ಮಾ.23): ಕೊರೋನಾ ವೈರಸ್‌ ಹೆಚ್ಚಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ಭಾನುವಾರ ಮತ್ತಷ್ಟು ಕ್ರಮಗಳನ್ನು ಪ್ರಕಟಿಸಿದೆ. ಕೊರೋನಾ ರೋಗಿಗಳ ಚಿಕಿತ್ಸೆಗಾಗಿಯೇ ರಾಜ್ಯ ಸರ್ಕಾರಗಳು ಕೆಲವು ಆಸ್ಪತ್ರೆಗಳನ್ನು ಮೀಸಲು ಇರಿಸುತ್ತವೆ ಎಂದು ಘೋಷಿಸಿದೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ನಿರ್ದೇಶಕ ಬಲರಾಂ ಭಾರ್ಗವ, ‘ಪ್ರತಿ ರಾಜ್ಯವೂ ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಮೀಸಲಾಗಿರಿಸಲಾಗುತ್ತದೆ ಎಂದು ವಾಗ್ದಾನ ಮಾಡಿವೆ. ಇದಕ್ಕೆ ಉದಾಹರಣೆಯಾಗಿ ಹರ್ಯಾಣದ ಝಾಜ್ಜರ್‌ನಲ್ಲಿ ಏಮ್ಸ್‌ ಆಸ್ಪತ್ರೆಯ ವಿಭಾಗವಾದ ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಯ 800 ಹಾಸಿಗೆಗಳ ಆಸ್ಪತ್ರೆ ಇದ್ದು, ಅದನ್ನು ಕೇವಲ ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಮೀಸಲಿರಿಸಲು ನಿರ್ಧರಿಸಲಾಗಿದೆ’ ಎಂದರು.

‘ಕೊರೋನಾ ವೈರಸ್‌ ಪರೀಕ್ಷೆ ನಡೆಸಲು ಈವರೆಗೆ 60 ಖಾಸಗಿ ಲ್ಯಾಬ್‌ಗಳು ನೋಂದಣಿ ಮಾಡಿಸಿಕೊಂಡಿವೆ’ ಎಂದ ಅವರು ಹೇಳಿದರು.

‘ನೆಗಡಿ-ಜ್ವರದಿಂದ ಬಳಲುವ ಶೇ.80 ಜನರು ಗುಣವಾಗುತ್ತಾರೆ. ಅವರು ಆತಂಕ ಪಡಬೇಕಿಲ್ಲ. ಕೆಮ್ಮು-ನೆಗಡಿ-ಜ್ವರ ಇದ್ದವರಲ್ಲಿ ಕೆಲವರು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಅವರಿಗೆ ಸಕಲ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ವಾರ ದೇಶಕ್ಕೆ 60 ಸಾವಿರ ಕೊರೋನಾ ಪ್ರಕರಣಗಳನ್ನು ಪರೀಕ್ಷಿಸುವ ಸಾಮರ್ಥ್ಯ ಇದೆ’ ಎಂದರು.

ಈ ನಡುವೆ, ಕೊರೋನಾ ಪೀಡಿತರಿಗಾಗಿ 1200 ಹೊಸ ವೆಂಟಿಲೇಟರ್‌ಗಳಿಗಾಗಿ ಆರ್ಡರ್‌ ಮಾಡಲಾಗಿದೆ ಎಂದು ಇದೇ ಸುದ್ದಿಗೋಷ್ಠಿಯಲ್ಲಿದ್ದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್‌ ಅಗರ್‌ವಾಲ್‌ ಹೇಳಿದರು.

ಮೂಲಗಳ ಪ್ರಕಾರ, ಕೊರೋನಾ ಪ್ರಕರಣಗಳ ಪರೀಕ್ಷೆಗೆ 111 ಸರ್ಕಾರಿ ಲ್ಯಾಬ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ. 3 ಖಾಸಗಿ ಲ್ಯಾಬ್‌ಗಳಿಗೂ ಅನುಮತಿ ನೀಡಲಾಗಿದೆ.