14ರ ಬಳಿಕ ಹಾಟ್‌ಸ್ಪಾಟ್ ಮಾತ್ರ ಲಾಕ್‌ಡೌನ್?| ಸೋಂಕು ಇಲ್ಲದೆಡೆ ನಿರ್ಬಂಧ ಸಡಿಲ ಸಾಧ್ಯತೆ| ಸಾಧ್ಯಾಸಾಧ್ಯತೆ ಪರಿಶೀಲಿಸುತ್ತಿರುವ ಸರ್ಕಾರ
ನವದೆಹಲಿ(ಏ.04): ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ನ ಅವಧಿ ಏ.14ರಂದು ಮುಗಿದ ಮೇಲೆ ಏನು ಮಾಡಬೇಕು ಎಂಬ ಚಿಂತೆಯಲ್ಲಿ ಕೇಂದ್ರ ಸರ್ಕಾರ ಮುಳುಗಿದೆ. ಏಕೆಂದರೆ ಅಷ್ಟರಲ್ಲಿ ಕೊರೋನಾ ವೈರಸ್ ಸಂಪೂರ್ಣ ಹತೋಟಿಗೆ ಬಂದಿರುವುದಿಲ್ಲ. ಹಾಗಂತ ಲಾಕ್‌ಡೌನ್ ಮುಂದುವರೆಸಿದರೆ ಅದರ ಆರ್ಥಿಕ ನಷ್ಟಹಾಗೂ ಇನ್ನಿತರ ಸಂಕಷ್ಟಗಳನ್ನು ಎದುರಿಸುವ ಶಕ್ತಿ ದೇಶಕ್ಕಿಲ್ಲ. ಹೀಗಾಗಿ ವೈರಸ್ ಸಮಸ್ಯೆ ನಿಯಂತ್ರಣದಲ್ಲಿರುವ ಸ್ಥಳಗಳಲ್ಲಿ ಮಾತ್ರ ನಿರ್ಬಂಧ ತೆರವುಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಆರೋಗ್ಯ ತಜ್ಞರು ಇನ್ನೂ ಎರಡು ವಾರ ಲಾಕ್‌ಡೌನ್ ಮುಂದುವರೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರಿಗಳು ಲಾಕ್‌ಡೌನ್ ಮುಂದುವರೆಸುವುದು ಸರಿಯಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಗುರುವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಎಲ್ಲರೂ ಚರ್ಚಿಸಿ ಸಲಹೆ ನೀಡಿ ಎಂದು ಕೋರಿದ್ದಾರೆ.
ಲಾಕ್‌ಡೌನ್: ರೋಗಿಗಳ ಪರದಾಟ, ಜನತೆಗೆ ಕೇಂದ್ರ ಸಚಿವ ಜೋಶಿ ಉಚಿತ ಕ್ಯಾಬ್ ಸೌಲಭ್ಯ
ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿರುವ ಪ್ರದೇಶಗಳನ್ನು ದೇಶಾದ್ಯಂತ ಗುರುತಿಸಬೇಕು. ಅಂತಹ ನೂರಾರು ಸ್ಥಳಗಳು ದೇಶದಲ್ಲಿ ಇರಬಹುದು. ಆ ಸ್ಥಳಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್‌ಡೌನ್ ಮುಂದುವರಿಸಬೇಕು. ಇನ್ನುಳಿದ ಸ್ಥಳಗಳಲ್ಲಿ ಎಂದಿನಂತೆ ವಾಣಿಜ್ಯ ವ್ಯವಹಾರಗಳು ನಡೆಯಲು ಬಿಡಬೇಕು ಎಂಬ ಅಭಿಪ್ರಾಯವೇ ಕೇಂದ್ರ ಸರ್ಕಾರದಲ್ಲಿ ಗಟ್ಟಿಯಾಗುತ್ತಿದೆ ಎಂದು ಮೂಲಗಳು ಹೇಳಿವೆ. ಆದರೆ, ಮುಖ್ಯಮಂತ್ರಿಗಳ ಜೊತೆಗಿನ ಸಭೆಯಲ್ಲಿ ಪ್ರಧಾನಿ ಮೋದಿ ‘ಹೋರಾಟ ಈಗಷ್ಟೇ ಆರಂಭವಾಗಿದೆ’ ಎಂದು ಹೇಳಿರುವುದು ಕೂಡ ಕುತೂಹಲ ಮೂಡಿಸಿದೆ.
ಆಯ್ದ ಸ್ಥಳಗಳಲ್ಲಿ ನಿರ್ಬಂಧ ಸಡಿಸಿಲಿದರೆ ಅಲ್ಲೆಲ್ಲಾದರೂ ತಬ್ಲೀಘಿ ಜಮಾತ್‌ನಂತೆ ದೊಡ್ಡ ಪ್ರಮಾಣದಲ್ಲಿ ವೈರಸ್ ಸೋಂಕು ಹರಡಬಹುದು ಎಂಬ ಭೀತಿಯೂ ಸರ್ಕಾರಕ್ಕಿದೆ. ಇನ್ನು, ಮುಖ್ಯಮಂತ್ರಿಗಳ ಸಭೆಯಲ್ಲಿ 2 ವಾರ ಲಾಕ್‌ಡೌನ್ ವಿಸ್ತರಿಸುವ ವಿಚಾರ ಕೂಡ ಚರ್ಚೆಗೆ ಬಂದಿದೆ. ಹೀಗಾಗಿ ಏ.14ರವರೆಗಿನ ಪರಿಸ್ಥಿತಿ ನೋಡಿಕೊಂಡು, ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
