'ಉಕ್ರೇನ್ ನಿರಾಶ್ರಿತರಿಗೆ ಸಹಾಯ ಮಾಡುತ್ತೀರಾ..'ವಿಶ್ವನಾಯಕರಿಗೆ ಪ್ರಿಯಾಂಕ ಚೋಪ್ರಾ ಮನವಿ
ರಷ್ಯಾ ಮತ್ತು ಉಕ್ರೇನ್ ಯುದ್ಧದಿಂದ ನಿರಾಶ್ರಿತರಾಗಿರುವ ಮಿಲಿಯನ್ ಗಟ್ಟಲೇ ಜನರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ನಾಯಕರಲ್ಲಿ ಮನವಿ ಮಾಡಿದ್ದಾರೆ. ಪ್ರಪಂಚದಾದ್ಯಂತ ನಿರಾಶ್ರಿತರ ಪರವಾಗಿ ನಿಲ್ಲಬೇಕಿದೆ. ನಾವು ಸುಮ್ಮನೆ ನಿಂತ ನೋಡುವಂತಿಲ್ಲ ಎಂದು ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ(Russia and Ukraine war) ಇನ್ನು ನಿಂತಿಲ್ಲ. ಆರನೇ ವಾರವೂ ಮುಂದುವರೆದಿದೆ. ಉಕ್ರೇನ್ ಸ್ಥಿತಿ ಭೀಕರವಾಗಿದೆ. ಈ ಯುದ್ಧದಲ್ಲಿ ನಿರಾಶ್ರಿತರಾಗಿರುವ ಮಿಲಿಯನ್ ಗಟ್ಟಲೇ ಜನರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ವಿಶ್ವ ನಾಯಕರಲ್ಲಿ ಮನವಿ ಮಾಡಿದ್ದಾರೆ. ಯುನಿಸೆಫ್ ನ ಸೌಹಾರ್ದಯುತ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ನಿರಾಶ್ರಿತರ ಬೆಂಬಲಕ್ಕೆ ನಿಲ್ಲುವಂತೆ ಕರೆಕೊಟ್ಟಿದ್ದಾರೆ. 'ವಿಶ್ವ ನಾಯಕರೇ ನಿರಾಶ್ರಿತರಿಗೆ ಈಗ ಅಗತ್ಯ ಬೆಂಬಲದ ಅಗತ್ಯವಿದೆ. ಪ್ರಪಂಚದಾದ್ಯಂತ ನಿರಾಶ್ರಿತರ ಪರವಾಗಿ ನಿಲ್ಲಬೇಕಿದೆ. ನಾವು ಸುಮ್ಮನೆ ನಿಂತ ನೋಡುವಂತಿಲ್ಲ' ಎಂದು ಕ್ಯಾಪ್ಷನ್ ನೀಡಿ ವಿಡಿಯೋ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಪ್ರಿಯಾಂಕಾ, 'ಉಕ್ರೇನ್ ನಿಂದ ಸ್ಥಳಾಂತರಗೊಂಡ ಜನರಿಗೆ ಸಹಾಯ ಮಾಡಲು ನೀವು ಮುಂದಾಗಬೇಕು. 2 ಮಿಲಿಯನ್ ಗೂ ಅಧಿಕ ಮಕ್ಕಳು ನೆರೆಯ ರಾಷ್ಟ್ರಗಳಲ್ಲಿ ಸುರಕ್ಷತೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಸುಮಾರು 2.5 ಮಿಲಿಯನ್ ಮಕ್ಕಳು ಸ್ಥಳಾಂತರಗೊಂಡಿದ್ದು ಇದು 2ನೇ ವಿಶ್ವ ಯುದ್ಧದ ನಂತರದ ಅತಿದೊಡ್ಡ ಪ್ರಮಾಣದ ಸ್ಥಳಾಂತರವಾಗಿದೆ' ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
'ಈ ಸಂಖ್ಯೆ ನಿಜಕ್ಕೂ ಆಘಾತಕಾರಿಯಾಗಿದೆ. ಈ ಮಕ್ಕಳ ನೆನಪುಗಳಲ್ಲಿ ಶಾಶ್ವತವಾಗಿ ಆಘಾತ ಕೆತ್ತಲಾಗಿದೆ. ಈ ಮಕ್ಕಳಲ್ಲಿ ಎಲ್ಲರೂ ಒಂದೇ ಆಗಿರುವುದಿಲ್ಲ. ಯುಕೆ, ಜರ್ಮನಿ, ಜಪಾನ್, ನಾರ್ವೆ, ಆಸ್ಟ್ರೇಲಿಯಾ ನಾಯಕರೇ ನೀವು ಎಷ್ಟು ಸಹಾಯ ಮಾಡುತ್ತೀರಿ. ನೀವು ನಿರಾಶ್ರಿತರ ಪರ ನಿಲ್ಲುತ್ತೀರಾ, ಅವರಿಗೆ ಅಗತ್ಯವಿರುವ ಶತಕೋಟಿ ನೀಡುತ್ತೀರಾ' ಎಂದು ಮನವಿ ಮಾಡಿದ್ದಾರೆ. 'ಇದು ನಾವು ಮನುಷ್ಯರಾಗಿ ನೋಡುತ್ತಿರುವ ಅತೀ ದೊಡ್ಡ ನಿರಾಶ್ರಿತರ ಬಿಕ್ಕಟ್ಟಿದು' ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ಉಕ್ರೇನ್ ಮಕ್ಕಳಿಗೆ ಸಹಾಯಮಾಡಲು ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಯುನಿಸೆಫ್ ದೇಣಿಗೆ ಲಿಂಕ್ ಅನ್ನು ಶೇರ್ ಮಾಡಿದ್ದಾರೆ.
ಮೊಮ್ಮಗು ನೋಡುವ ತವಕದಲ್ಲಿ ಮಧು ಚೋಪ್ರಾ; ಮಗಳ ಜೊತೆ ಭಾರತಕ್ಕೆ ಬರ್ತಾರಾ ಪ್ರಿಯಾಂಕಾ?
ರಷ್ಯಾ, ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ 4.2 ಲಕ್ಷಕ್ಕೂ ಅಧಿಕ ಸಂಖ್ಯೆಯ ಉಕ್ರೇನಿಗರು ದೇಶತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಇತ್ತೀಚಿನ ಮಾಹಿತಿಯಲ್ಲಿ ಬಹಿರಂಗ ಪಡಿಸಿದೆ. ನಿರಾಶ್ರಿತರನ್ನು ಬೆಂಬಲಿಸುವ ಸಲುವಾಗಿ ಶತಕೋಟಿ ನೆರವು ಸಂಗ್ರಹಿಸಲು ಶುಕ್ರವಾರ ನಡೆದ ಜಾಗತಿಕ ಸಾಮಾಜಿಕ ಮಾಧ್ಯಮ ರ್ಯಾಲಿಯಲ್ಲಿ ವಿಶ್ವದ ಅನೇಕ ಕಲಾವಿದರು, ಕ್ರೀಡಾಪಟುಗಳು ಮತ್ತು ಗಣ್ಯರು ಸೇರಿದ್ದರು.
ಸ್ಯಾಂಡ್ ಅಪ್ ಫಾರ್ ಉಕ್ರೇನ್ ಎಂದು ಹ್ಯಾಶ್ ಹಾಕಿ ಉಕ್ರೇನ್ ನಿರಾಶ್ರಿತರ ಪರ ನಿಲ್ಲುವಂತೆ ಮನವಿ ಮಾಡಿದ್ದಾರೆ. ಅಭಿಯಾನ ಪ್ರಾರಂಭಮಾಡಿದ್ದಾರೆ. ಸೆಲೆಬ್ರಿಟಿಗಳಾದ ಬ್ರೂಸ್ ಸ್ಪ್ರಿಂಗ್ಸ್ಟೀನ್, ಹಗ್ ಜಾಕ್ ಮನ್, ಎಲ್ಟನ್ ಜಾನ್, ಜೋನಸ್ ಬ್ರದರ್ಸ್, ಬಿಲ್ಲಿ ಎಲಿಶ್ ಸೇರಿದಂತೆ ಅನೇಕರು ಸ್ಯಾಂಡ್ ಅಪ್ ಫಾರ್ ಉಕ್ರೇನ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನ ಪ್ರಾರಂಭಮಾಡಿದ್ದಾರೆ.
ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್ ಚರಣ್ ಮಾತುಗಳಿದು!
ಇನ್ನು ಇತ್ತೀಚಿನ ಮಾಹಿತಿ ಪ್ರಕಾರ ಯುದ್ಧ ಪೀಡಿತ ಉಕ್ರೇನ್ ನಿಂದ ಸ್ಥಳಾಂತರಗೊಳ್ಳುತ್ತಿದ್ದ ಅನೇಕ ನಾಗರಿಕರು ಡೊನೆಟ್ಸ್ಕ್ ನಗರದ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ಕಾಯುತ್ತಿದ್ದ ನಾಗರಿಕರ ಮೇಲೆ ರಷ್ಯಾ ಪಡೆಗಳು ಬಾಂಬ್ ದಾಳಿ ನಡೆಸಿದ್ದು ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.