Valimai Movie: ಅಜಿತ್ ಬಗ್ಗೆ ಸ್ಪೆಷಲ್ ಮಾಹಿತಿಯನ್ನು ಹಂಚಿಕೊಂಡ ಹುಮಾ ಖುರೇಷಿ ಹಾಗೂ ಕಾರ್ತೀಕೆಯ!
ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ವಲಿಮೈ' ಚಿತ್ರ ಬಿಡುಗಡೆಯಾಗಿದ್ದು, ನಟಿ ಹುಮಾ ಖುರೇಷಿ ಹಾಗೂ ಖಳನಟನಾಗಿ ಕಾಣಿಸಿಕೊಂಡಿರುವ ಕಾರ್ತೀಕೆಯ ಅಜಿತ್ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
'ನೇರ್ಕೊಂಡ ಪಾರ್ವೈ' ಚಿತ್ರದ ಬಳಿಕ ತಮಿಳು (Kollywood) ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅಭಿನಯದ ಬಹುನಿರೀಕ್ಷಿತ 'ವಲಿಮೈ' (Valimai) ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂರು ವರ್ಷಗಳ ನಂತರ ಬಿಡುಗಡೆ ಆದ ಮೊದಲ ಅಜಿತ್ ಸಿನಿಮಾ ಇದಾಗಿರುವ ಕಾರಣ ಅಜಿತ್ ಅಭಿಮಾನಿಗಳು (Fans) ಬಹಳ ಅದ್ಧೂರಿಯಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಹುಮಾ ಖುರೇಷಿ (Huma Qureshi) ಹಾಗೂ ಖಳನಟನಾಗಿ ಕಾಣಿಸಿಕೊಂಡಿರುವ ಕಾರ್ತೀಕೆಯ (Karthikeya) ಅಜಿತ್ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ನಟಿ ಹುಮಾ ಖುರೇಷಿ ಅಜಿತ್ ಅಭಿಮಾನಿಗಳು ತಮ್ಮ ಮೇಲೆ ತೋರುತ್ತಿರುವ ಪ್ರೀತಿಗೆ ಫಿದಾ ಆಗಿದ್ದಾರೆ. ನಿರ್ದೇಶಕ ಎಚ್. ವಿನೋದ್ (H.Vinoth) ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ್ಯಕ್ಷನ್ ಎಂಟರ್‌ಟೈನರ್‌ನಲ್ಲಿ ಹುಮಾ ಖುರೇಷಿ ಅವರ ಆ್ಯಕ್ಷನ್ ಬ್ಲಾಕ್‌ಗಳಿಗೆ ಅಭಿಮಾನಿಗಳಿಂದ ಹೆಚ್ಚು ಪ್ರಶಂಸೆ ಬಂದಿದೆ. ಉತ್ಸಾಹಭರಿತ ಅಜಿತ್ ಅಭಿಮಾನಿಗಳ ಪ್ರೀತಿಯಿಂದ ನಾನು ಅಕ್ಷರಶಃ ಆಶ್ಚರ್ಯಚಕಿತಳಾಗಿದ್ದೇನೆ. ನಾನು ಅಜಿತ್ ಕುಮಾರ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಹುಮಾ ಖುರೇಷಿ ಹೇಳುತ್ತಾರೆ.
ಅಜಿತ್ ಸರ್ ಜೊತೆ ಕೆಲಸ ಮಾಡುವುದು ನನ್ನ ಬಹುದಿನಗಳ ಕನಸಾಗಿದ್ದು, ಇದೀಗ ಅದು ಈಡೇರಿದೆ. ತುಂಬಾ ಪ್ರಾಮುಖ್ಯತೆ ಹೊಂದಿರುವ ಈ ಪಾತ್ರವನ್ನು ನನಗೆ ಉಡುಗೊರೆಯಾಗಿ ನೀಡಿದ ಅಜಿತ್ ಸರ್, ನಿರ್ಮಾಪಕ ಬೋನಿ ಕಪೂರ್ ಮತ್ತು ನಿರ್ದೇಶಕ ಎಚ್ ವಿನೋದ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹುಮಾ ಖುರೇಷಿ ಹೇಳಿದ್ದಾರೆ. 'ಆರ್‌ಎಕ್ಸ್ 100', 'ಗ್ಯಾಂಗ್ ಲೀಡರ್' ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದ ನಟ ಕಾರ್ತಿಕೇಯ ಗುಮ್ಮಕೊಂಡ 'ವಲಿಮೈ' ಚಿತ್ರದಲ್ಲಿ ಅಜಿತ್ ಎದುರಿಗೆ ಅಬ್ಬರಿಸಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಪ್ರಮೋಷನ್ ಪ್ರಯುಕ್ತ ಬೆಂಗಳೂರಿಗೆ ಆಗಮಿಸಿದ್ದ ಕಾರ್ತಿಕೇಯ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
Valimai Trailer: ಅಜಿತ್ ಕುಮಾರ್ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್!
'ವಲಿಮೈ' ಚಿತ್ರದಲ್ಲಿ ಮೈನವಿರೇಳಿಸುವಂಥ ಬೈಕ್ ಸ್ಟಂಟ್ ದೃಶ್ಯಗಳಿವೆ ಎನ್ನುವ ಸಂಗತಿ ಅಭಿಮಾನಿಗಳಿಗೆ ಟ್ರೇಲರಿನಿಂದಲೇ ಗೊತ್ತಿರುತ್ತದೆ. ಅಂಥ ಒಂದು ಸ್ಟಂಟ್ ದೃಶ್ಯವೊಂದರಲ್ಲಿ ನಾಯಕ ನಟ ಅಜಿತ್ ಖುದ್ದು ಭಾಗವಹಿಸಿದ್ದರು. ಚಿತ್ರೀಕರಣದ ವೇಳೆ ಅಜಿತ್ ಚಲಾಯಿಸುತ್ತಿದ್ದ ಬೈಕು ಏಕಾಏಕಿ ಮೇಲಕ್ಕೆ ಹಾರಿಬಿಟ್ಟಿತ್ತು. ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಬೈಕು ಪಲ್ಟಿಯಾಗಿ ರಸ್ತೆ ಮೇಲೆ ಬಿದ್ದುಬಿಟ್ಟಿತು. ಅಜಿತ್ ಕೂಡಾ ನೆಲದ ಮೇಲೆ ಬಿದ್ದರು. ನಾವೆಲ್ಲರೂ ಏನಾಯಿತು ಎಂದು ಆಘಾತಗೊಂಡಿದ್ದೆವು. ಕೆಲ ಸೆಕೆಂಡುಗಳಲ್ಲೇ ಅಜಿತ್ ಮೇಲಕ್ಕೆದ್ದು ನಿಂತು ತಮಗೆ ಏನೂ ಆಗಿಲ್ಲ ಎನ್ನುವಂತೆ ಎಲ್ಲ ಓಕೆ ಎಂದು ಸನ್ನೆ ಮಾಡಿ ತಿಳಿಸಿದರು.
ಇದಾದ ಸ್ವಲ್ಪ ಸಮಯದಲ್ಲಿ ಟೇಕ್ ಓಕೆ ಆಯಿತು. ಅನಂತರ ಯಾವುದೋ ಕಾರಣಕ್ಕೆ ನಾನು ಅಜಿತ್ ಅವರ ಕ್ಯಾರಾವಾನ್ ಒಳಗೆ ಹೋಗಬೇಕಾಯಿತು. ಆ ಸಮಯದಲ್ಲಿ ಅಜಿತ್ ಅವರು ಬೈಕರ್ ಸೂಟ್ ಅನ್ನು ಕಳಚುತ್ತಿದ್ದರು. ಅವರ ಬೆನ್ನ ಹಿಂಬದಿಯಲ್ಲಿ ತರಚಿ ಗಾಯವಾಗಿ ರಕ್ತ ಬರುತ್ತಿದ್ದುದನ್ನು ತಾವು ಕಣ್ಣಾರೆ ನೋಡಿ ಶಾಕ್ ಆಗಿದ್ದಾಗಿ ಕಾರ್ತಿಕೇಯ ಹೇಳಿದರು. ಮಾತ್ರವಲ್ಲದೇ ವಿಶ್ರಾಂತಿ ತೆಗೆದುಕೊಳ್ಳದೆ ತಮಗೆ ಗಾಯವಾಗಿದ್ದರೂ ಚಿತ್ರತಂಡಕ್ಕೆ ತಮ್ಮಿಂದ ಯಾವುದೇ ತೊಡಕನ್ನು ಬಯಸದೆ ಅಜಿತ್ ಚಿತ್ರೀಕರಣದಲ್ಲಿ ಪಾಲ್ಗೊಂಡರು. ಈ ಘಟನೆಯಿಂದ ನಾನೊಂದು ಹೊಸ ಪಾಠ ಕಲಿತಿದ್ದಾಗಿ ಕಾರ್ತಿಕೇಯ ಹೇಳಿದ್ದಾರೆ.
Ajith Kumar: ನನ್ನ ತಲ ಅಂತ ಕರೀಬೇಡಿ, AK ಅನ್ನಿ ಸಾಕು ಎಂದ ಸೌತ್ ನಟ
ಇನ್ನು 'ವಲಿಮೈ' ಚಿತ್ರವನ್ನು ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ (Boney Kapoor) ನಿರ್ಮಾಣ ಮಾಡಿದ್ದು, ಮೊದಲ ದಿನದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಈ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಅಜಿತ್ ಚಿತ್ರದ ಗಳಿಕೆ ಮಾತ್ರ ಯಾವುದೇ ರೀತಿ ಎಫೆಕ್ಟ್ ಆಗಿಲ್ಲ. 3 ದಿನದಲ್ಲಿ 'ವಲಿಮೈ' ಸಿನಿಮಾ 100 ಕೋಟಿ ಕ್ಲಬ್ (100 Crore Club) ಸೇರಿಕೊಂಡಿದ್ದು, ಈ ವಿಚಾರವನ್ನು ಚಿತ್ರದ ನಟಿ ಹುಮಾ ಖುರೇಷಿ ತಮ್ಮ ಟ್ವೀಟ್ಟರ್ (Twitter) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅಜಿತ್ ಕ್ರೈಂನಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳ ಗುಂಪುಗಳನ್ನು ಭೇದಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಾಸ್ಯ ನಟ ಯೋಗಿಬಾಬು ಹಾಗೂ ಸ್ಯಾಂಡಲ್‌ವುಡ್‌ನ ಅಚ್ಯುತ್ ಕುಮಾರ್ ಈ ಚಿತ್ರದಲ್ಲಿ ನಟಿಸಿರೋದು ವಿಶೇಷವಾಗಿದೆ.