ಸಿನಿಮಾ ರಂಗದಲ್ಲಿ ಮಹಿಳೆಯರನ್ನು ಕೇವಲ ಗ್ಲಾಮರ್ ಬೊಂಬೆಗಳಂತೆ ನೋಡುವುದನ್ನು ಬಿಟ್ಟು, ವೃತ್ತಿಪರ ಕಲಾವಿದರಂತೆ ಗೌರವಿಸುವ ಕಾಲ ಬರಬೇಕಿದೆ. "ಇದೊಂದು ಕೇವಲ ಜೋಕ್" ಎಂದು ಸುಮ್ಮನಿರುವುದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಟಾಲಿವುಡ್ ಬೆಡಗಿಯರು ಸ್ಪಷ್ಟ ಸಂದೇಶ ನೀಡಿದ್ದಾರೆ.

ಟಾಲಿವುಡ್‌ನಲ್ಲಿ ‘ಕ್ಯಾಶುವಲ್ ಸೆಕ್ಸಿಸಂ’ ವಿರುದ್ಧ ಗುಡುಗಿದ ಮಹಿಳೆಯರು!

ಹೈದರಾಬಾದ್: ತೆಲುಗು ಚಿತ್ರರಂಗ ಅಂದರೆ ಕೇವಲ ಅದ್ದೂರಿ ಸೆಟ್‌ಗಳು, ಮಾಸ್ ಹೀರೊಗಳ ಅಬ್ಬರ ಮತ್ತು ಕೋಟಿ ಕೋಟಿ ಬಜೆಟ್‌ನ ಸಿನಿಮಾಗಳಷ್ಟೇ ಅಲ್ಲ. ಅದರ ಹೊಳೆಯುವ ಪರದೆಯ ಹಿಂದೆ ಮಹಿಳಾ ಕಲಾವಿದರು ಎದುರಿಸುತ್ತಿರುವ ಕರಾಳ ಮುಖವೊಂದು ಈಗ ಬಹಿರಂಗವಾಗಿ ಚರ್ಚೆಯಾಗುತ್ತಿದೆ. "ಇದು ಬರೀ ಜೋಕ್ ಅಷ್ಟೇ ತಾನೇ?" ಎನ್ನುವ ಸೋಗಿನಲ್ಲಿ ನಡೆಯುವ ಲೈಂಗಿಕ ತಾರತಮ್ಯ (Casual Sexism) ಮತ್ತು ದ್ವಂದ್ವಾರ್ಥದ ಮಾತುಗಳ ವಿರುದ್ಧ ಟಾಲಿವುಡ್‌ನ ಮಹಿಳಾ ಸಂಘಟನೆಗಳು ಮತ್ತು ನಟಿಯರು ಈಗ ಯುದ್ಧ ಸಾರಿದ್ದಾರೆ.

‘ಕ್ಷಮೆ’ ಕೇಳುವುದು ಕೇವಲ ಸಿನಿಮಾಗಳನ್ನು ಉಳಿಸಿಕೊಳ್ಳಲಿಕ್ಕಷ್ಟೇ?

ಇತ್ತೀಚೆಗೆ ನಟ ಶಿವಾಜಿ ಅವರು ಮಹಿಳಾ ಸಹೋದ್ಯೋಗಿಗಳ ಉಡುಪಿನ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ದೊಡ್ಡ ಮಟ್ಟದ ಕಿಚ್ಚು ಹಚ್ಚಿವೆ. ಈ ಹಿನ್ನೆಲೆಯಲ್ಲಿ 'ವಾಯ್ಸ್ ಆಫ್ ವುಮೆನ್' (Voice of Women, TFI) ಸಂಘಟನೆಯು ಈಗ ಅಖಾಡಕ್ಕಿಳಿದಿದೆ. ನಟಿ ಮತ್ತು ನಿರ್ದೇಶಕಿ ಜೀವಿತಾ ರಾಜಶೇಖರ್ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದು, "ಯಾರೋ ಒಬ್ಬರು ಮಹಿಳೆಯರನ್ನು ಅವಮಾನಿಸಿದಾಗ ಕೇವಲ ಅನ್ವಿತಾ ಅಥವಾ ಚಿನ್ಮಯಿ ಅಂತಹ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಯಾಕೆ ಧ್ವನಿ ಎತ್ತಬೇಕು? ಚಿತ್ರರಂಗದ ಪ್ರಭಾವಿ ವ್ಯಕ್ತಿಗಳು ಮೌನವಾಗಿರುವುದೇಕೆ? ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಬೇಕು" ಎಂದು ಆಗ್ರಹಿಸಿದ್ದಾರೆ.

ಇದು 'ಹಾಸ್ಯ'ವಲ್ಲ, ಇದು ನಮ್ಮ ಘನತೆಯ ಪ್ರಶ್ನೆ!

ಸಾಮಾಜಿಕ ಕಾರ್ಯಕರ್ತೆ ಸುನಿತಾ ಕೃಷ್ಣನ್ ಅವರ ಪ್ರಕಾರ, "ನಟರು ಅಥವಾ ನಿರ್ದೇಶಕರು ವಿವಾದಾತ್ಮಕ ಹೇಳಿಕೆ ನೀಡಿದಾಗ ಕ್ಷಮೆ ಕೇಳುತ್ತಾರೆ. ಆದರೆ ಈ ಕ್ಷಮೆಯ ಹಿಂದೆ ಪಶ್ಚಾತ್ತಾಪವಿರುವುದಿಲ್ಲ, ಬದಲಿಗೆ ಅವರ ಸಿನಿಮಾ ಎಲ್ಲೂ ಫ್ಲಾಪ್ ಆಗುತ್ತದೋ ಎಂಬ ಭಯವಿರುತ್ತದೆ."

ಮೌನವೂ ಒಂದು ಅಪರಾಧ: ಅನಸೂಯಾ ಭಾರದ್ವಾಜ್ ಆಕ್ರೋಶ

ನಟಿ ಅನಸೂಯಾ ಭಾರದ್ವಾಜ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಎಲ್ಲರ ಗಮನ ಸೆಳೆದಿದೆ. "ಹತ್ತು ಜನ ಪುರುಷರಲ್ಲಿ ಒಬ್ಬ ಪುರುಷ ಮಹಿಳೆಯ ಬಗ್ಗೆ ಅಸಭ್ಯ ಜೋಕ್ ಮಾಡಿದರೆ, ಇಬ್ಬರು ನಗುತ್ತಾರೆ, ಇನ್ನುಳಿದವರು ಸುಮ್ಮನಿರುತ್ತಾರೆ. ಆ ಮೌನವೇ ಇಂತಹ ವರ್ತನೆಗಳಿಗೆ ಗೊಬ್ಬರವಾಗುತ್ತದೆ" ಎಂಬ ಸಂದೇಶದ ಮೂಲಕ ಪುರುಷ ನಟರು ಇಂತಹ ಘಟನೆಗಳ ವಿರುದ್ಧ ಧ್ವನಿ ಎತ್ತದಿದ್ದರೆ ವ್ಯವಸ್ಥೆ ಸುಧಾರಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

ಟಾಲಿವುಡ್‌ನಲ್ಲಿ ಮಹಿಳೆಯರನ್ನ ಅಣಕಿಸಿದ ಕಿರುಕುಳದ ‘ಟಾಪ್’ ಘಟನೆಗಳು:

ಶಿವಾಜಿಯ ‘ನೈತಿಕ ಪೊಲೀಸ್ ಗಿರಿ’: ನಟ ಶಿವಾಜಿ ಇತ್ತೀಚೆಗೆ ಮಹಿಳೆಯರ ಬಟ್ಟೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ನಂತರ ಕ್ಷಮೆ ಕೇಳಿದರೂ, ತೆಲಂಗಾಣ ಮಹಿಳಾ ಆಯೋಗವು ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆಸಿತ್ತು.

ತ್ರಿನಾಥ್ ರಾವ್ ನಕ್ಕಿನ ಅವರ 'ಸೈಜ್' ಕಾಮೆಂಟ್: 'ಮಜಕಾ' ಸಿನಿಮಾದ ಟೀಸರ್ ಲಾಂಚ್ ವೇಳೆ ನಿರ್ದೇಶಕ ತ್ರಿನಾಥ್ ರಾವ್ ಅವರು ಹಳೆಯ ನಟಿ ಅಂಶು ಅವರ ದೇಹದ ತೂಕ ಮತ್ತು ಗಾತ್ರದ ಬಗ್ಗೆ ಸಾರ್ವಜನಿಕವಾಗಿ ಕಾಮೆಂಟ್ ಮಾಡಿ ಮುಜುಗರಕ್ಕೀಡು ಮಾಡಿದ್ದರು. "ತೆಲುಗು ಸಿನಿಮಾಗೆ ಇಷ್ಟು ಸೈಜ್ ಸಾಕಾಗುವುದಿಲ್ಲ" ಎಂಬ ಅವರ ಮಾತು ವ್ಯಾಪಕ ಟೀಕೆಗೆ ಒಳಗಾಯಿತು.

ನಿರ್ಮಾಪಕ ಎಸ್‌ಕೆಎನ್ ದ್ವಂದ್ವಾರ್ಥದ ಮಾತು: 'ಡ್ರ್ಯಾಗನ್' ಕಾರ್ಯಕ್ರಮದಲ್ಲಿ ತೆಲುಗು ನಟಿಯರಿಗಿಂತ ಭಾಷೆ ಬಾರದ ನಟಿಯರೇ ನಮಗೆ ಇಷ್ಟ ಎಂದು ಹೇಳುತ್ತಾ, ಹಣ್ಣು-ತರಕಾರಿಗಳ ಉದಾಹರಣೆ ನೀಡಿ ದ್ವಂದ್ವಾರ್ಥದ ಸನ್ನೆ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.

ಅಲಿ ಅವರ ಅತಿರೇಕದ ವರ್ತನೆ: ಹಾಸ್ಯ ನಟ ಅಲಿ ಅವರು ಅನೇಕ ವೇದಿಕೆಗಳಲ್ಲಿ ಅನುಷ್ಕಾ ಶೆಟ್ಟಿ ಮತ್ತು ಸಮಂತಾ ಅವರ ದೇಹದ ಭಾಗಗಳ ಬಗ್ಗೆ ಹಸಿಸಿಯಾಗಿ ಮಾತನಾಡಿದ್ದಾರೆ. ಅನುಷ್ಕಾ ಅವರನ್ನು 'ಜಲೇಬಿ'ಗೆ ಹೋಲಿಸಿದ್ದು ಮತ್ತು ಸಮಂತಾರ ಸೊಂಟದ ಬಗ್ಗೆ ಕಾಮೆಂಟ್ ಮಾಡಿದ್ದು ಇಂದಿಗೂ ಟಾಲಿವುಡ್‌ನ ಕಪ್ಪು ಚುಕ್ಕೆಗಳಾಗಿವೆ.

ಬಾಲಕೃಷ್ಣ ಅವರ ಹಳೇ ಚಾಳಿ: ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ಈ ಹಿಂದೆ "ನಾನು ನಟಿಯರ ಹಿಂದೆ ಹೋಗುವುದಿಲ್ಲ, ನೇರವಾಗಿ ಮುತ್ತು ಕೊಡುತ್ತೇನೆ ಇಲ್ಲವೇ ಗರ್ಭಿಣಿ ಮಾಡುತ್ತೇನೆ" ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಇತ್ತೀಚೆಗೆ ನಟಿ ಅಂಜಲಿ ಅವರನ್ನು ವೇದಿಕೆಯ ಮೇಲೆ ತಳ್ಳಿದ್ದು ಕೂಡ ದೊಡ್ಡ ವಿವಾದವಾಗಿತ್ತು.

ಕೊನೆಯ ಮಾತು:

ಸಿನಿಮಾ ರಂಗದಲ್ಲಿ ಮಹಿಳೆಯರನ್ನು ಕೇವಲ ಗ್ಲಾಮರ್ ಬೊಂಬೆಗಳಂತೆ ನೋಡುವುದನ್ನು ಬಿಟ್ಟು, ವೃತ್ತಿಪರ ಕಲಾವಿದರಂತೆ ಗೌರವಿಸುವ ಕಾಲ ಬರಬೇಕಿದೆ. "ಇದೊಂದು ಕೇವಲ ಜೋಕ್" ಎಂದು ಸುಮ್ಮನಿರುವುದು ಇನ್ನು ಮುಂದೆ ನಡೆಯುವುದಿಲ್ಲ ಎಂದು ಟಾಲಿವುಡ್ ಬೆಡಗಿಯರು ಸ್ಪಷ್ಟ ಸಂದೇಶ ನೀಡಿದ್ದಾರೆ. ತೆರೆಮೇಲೆ ಹೀರೋಗಳಾಗಿ ಮೆರೆಯುವವರು ನಿಜ ಜೀವನದಲ್ಲೂ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವರೇ ಎಂಬುದನ್ನು ಕಾದು ನೋಡಬೇಕಿದೆ.