ಯುಗಾದಿಯ ಆಸುಪಾಸಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿ, ಇಪ್ಪತ್ತೊಂದು ದಿನಗಳ ಲಾಕ್‌ಡೌನ್‌ ಘೋಷಿಸಿದರು. ಅದಾಗಿ ಕೆಲವೇ ಗಂಟೆಗಳಲ್ಲಿ ಇಡೀ ಭಾರತವೇ ಬಂದ್‌ ಆಯ್ತು. ಎಲ್ಲ ಅಂಗಡಿ, ಮಾಲ್, ಸಿನಿಮಾ ಥಿಯೇಟರ್‌, ಹೋಟೆಲ್‌ಗಳು ಬಂದ್‌ ಆದವು. ಸಿನಿಮಾ ಶೂಟಿಂಗ್‌ಗಳಊ ರದ್ದಾದವು. ಶೂಟಿಂಗ್‌ ಸೆಟ್‌ಗಳಲ್ಲಿ ಇದ್ದ ನಟ ನಟಿಯರು ಕೂಡ ಎಲ್ಲೆಲ್ಲಿ ಇದ್ದರೋ ಅಲ್ಲಲ್ಲೇ ಲಾಕ್‌ ಆದರು. ಇದು ಸಾಮಾನ್ಯರಿಗೆ ಮಾತ್ರವಲ್ಲ, ಸೆಲೆಬ್ರಿಟಗಳಿಗೂ ಲಾಕ್‌ಡೌನ್‌ ಬಿಸಿ ತಟ್ಟಿತು. ಕೆಲವು ತಾರೆಯರು ಮನೆಯಿಂದ, ಫ್ಯಾಮಿಲಿಯಿಂದ ದೂರ ಉಳೀಬೇಕಾಯ್ತು.


ಉದಾಹರಣೆಗೆ ತಮಿಳಿನ ಸ್ಟಾರ್ ನಟ ತಲ ಅಜಿತ್‌. ಲಾಕ್‌ಡೌನ್‌ ಘೋಷಣೆ ಬಂದಾಗ ಅವರು ತಮ್ಮ ಮುಂಬರುವ "ವಲಿಮೈ' ಸಿನಿಮಾದ ಶೂಟಿಂಗ್‌ನಲ್ಲಿ ಹೈದರಾಬಾದ್‌ನಲ್ಲಿ ತೊಡಗಿಸಿಕೊಂಡಿದ್ದರು. ಅವರ ಪತ್ನಿ ಶಾಲಿನಿ ಹಾಗೂ ಮಕ್ಕಳು ಚೆನ್ನೈಯಲ್ಲಿ ಮನೆಯಲ್ಲಿದ್ದರು. ಶೂಟಿಂಗ್‌ ಪ್ಯಾಕಪ್‌ ಆಗಿರುವುದರಿಂದ, ಇಡೀ ಚಿತ್ರೀಕರಣದ ಸೆಟ್‌ ಹೈದರಾಬಾದ್‌ನಲ್ಲೇ ಬಾಕಿಯಾಗಿದೆ. ಅಜಿತ್‌ ಅವರೂ ಹೈದರಾಬಾದ್‌ನ ಹೋಟೆಲ್‌ನಲ್ಲಿ ದಿನ ಕಳೆಯುತ್ತಿದ್ದಾರೆ. ಪತ್ನಿ ಮಕ್ಕಳು ಅವರಿಂದ ಬೇರೆಯಾಗಿ ಚೆನ್ನೈಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ಅಪ್ಪನಿಗೆ ವಿಡಿಯೋ ಕಾಲ್‌ ಮಾಡಿ ಅಳುವುದು, ಬೇಗ ಬಾರಪ್ಪಾ ಎಂದು ಗೋಗರೆಯುವುದು ಇದ್ದದ್ದೇ. ಅಜಿತ್‌ಗೂ ಆ ಅನುಭವ ಆಗಿದೆ. ಆದರೆ ಅಜಿತ್‌ ಗಟ್ಟಿ ಮನಸ್ಸು ಮಾಡಿ "ಮನೆಯಿಂದ ಹೊರಗೆ ಬರಬೇಡಿ, ಸ್ಟೇ ಹೋಮ್, ಸ್ಟೇ ಸೇಪ್‌''ಎಂಬ ಸಂದೇಶವನ್ನು ತಲುಪಿಸಿದ್ದಾರೆ.

 

ಬೇರೆ ಬೇರೆಯಾಗಿ ಇರುವ ಇನ್ನೊಂದು ಕುಟುಂಬ ಎಂದರೆ ಕಮಲಹಾಸನ್, ಅವರ ಮಾಜಿ ಪತ್ನಿ ಸರಿತಾ, ಅವರ ಮಕ್ಕಳಾದ ಶ್ರುತಿ ಹಾಸನ್‌ ಮತ್ತು ಅಕ್ಷರಾ ಹಾಸನ್‌. ಈ ಎಲ್ಲರೂ ಮುಂಬಯಿ, ಚೆನ್ನೈ ಹೀಗೆ ಬೇರೆ ಬೇರೆ ಕಡೆ ಇದ್ದಾರೆ. ಇದ್ದಕ್ಕಿದ್ದಂತೆ ಲಾಕ್‌ಡೌನ್‌ ಆದ್ದರಿಂದ ಒಟ್ಟು ಸೇರುವುದು ಸಾದ್ಯವಾಗಿಲ್ಲ. "ಇಂಥ ಹೊತ್ತಿನಲ್ಲಿ ಒಟ್ಟು ಸೇರಬೇಕು ಎಂದು ಹಂಬಲಿಸುವುದರಲ್ಲಿ ಅರ್ಥವಿಲ್ಲ. ಎಲ್ಲ ಎಲ್ಲಿದ್ದಾರೋ ಅಲ್ಲೇ ಸುರಕ್ಷಿತವಾಗಿರಲಿ ಎಂದು ನಾವು ಭಾವಿಸಬೇಕು'' ಎಂದು ಶ್ರುತಿ ಹಾಸನ್‌ ಹೇಳಿದ್ದಾರೆ.

 

ಯಶ್‌ ಚಿತ್ರದ ನಾಯಕಿಗೂ ಕೊರೋನಾ ಕಾಟ; 14 ದಿನ ಕ್ವಾರಂಟೈನ್‌ ಅನಿವಾರ್ಯ!

 

ಲಾಕ್‌ಡೌನ್‌ನಿಂದಾಗಿ ಒಟ್ಟು ಸೇರುವ ಸುಖ ಅನುಭವಿಸಿದ ಜೋಡಿ ಎಂದರೆ ಹೃತಿಕ್‌ ರೋಶನ್‌ ಮತ್ತು ಸೂಸನ್‌ ಅವರದು. ಇವರು ಕೆಲವು ವರ್ಷಗಳ ಹಿಂದೆಯೇ ಡೈವೋರ್ಸ್ ತೆಗೆದುಕೊಂಡಿದ್ದರು. ಮಕ್ಕಳಾದ ಹೃದಾನ್‌ ಮತ್ತು ಹ್ರೆಹಾನ್‌ ತಾಯಿಯ ಜೊತೆಗಿದ್ದರು. ಆದರೆ ಹೃತಿಕ್ ಆಗಾಗ ಸೂಸನ್‌ ಇದ್ದಲ್ಲಿಗೆ ಭೇಟಿ ಕೊಟ್ಟು ಮಕ್ಕಳ ಜೊತೆಗೆ ಕಾಲ ಕಳೆದು ಬರುತ್ತಿದ್ದರು. ಇಂಥ ಸಮಯದಲ್ಲಿ, ತಿಂಗಳುಗಟ್ಟಲೆ ಮಕ್ಕಳನ್ನು ಭೇಟಿಯಾಗದೆ ಇರಲು ಅಸಾಧ್ಯ ಎಂದು ಹೃತಿಕ್‌, ಸೂಸನ್‌ ಬಳಿ ಮನವಿ ಮಾಡಿಕೊಂಡಿದ್ದರು, ಇದರಿಂದ ಕರಗಿದ ಸೂಸನ್‌, ಮಕ್ಕಳನ್ನು ಕರೆದುಕೊಂಡು ಹೃತಿಕ್‌ ಮನೆಗೇ ಬಂದುಬಿಟ್ಟಿದ್ದಾರೆ. ಈಗ ನಾಲ್ವರೂ ಒಟ್ಟಿಗೇ ಇದ್ದಾರೆ. ಲಾಕ್‌ಡೌನ್‌ನಿಂದ ಯಾರಿಗೆ ಒಬ್ಬನಿಗೇ ಆದರೂ ಒಂಟಿತನ ಕಾಡದಿರಲಿ, ಮಕ್ಕಳ ಮೇಲೆ ಅದರ ನೆಗೆಟಿವ್‌ ಪರಿಣಾಮ ಆಗದಿರಲಿ ಎಂಬುದು ಈ ಜೋಡಿಯ ಉದ್ದೇಶ.

 

ಅಲಿಯಾ ಭಟ್‌ ಮತ್ತು ರಣ್ಬೀರ್ ಕಪೂರ್‌ ಕೂಡ ಈಗ ಒಂದೇ ಮನೆಯಲ್ಲಿದ್ದಾರೆ ಎಂದು ಊಹಿಸಲಾಗಿದೆ. ಇದಕ್ಕೆ ಪುರಾವೆ ಅವರಿಬ್ಬರೂ ಮನೆಯೊಂದರ ಕಾಂಪೌಂಡ್‌ನಲ್ಲಿ ನಾಯಿ ಜೊತೆ ವಾಕಿಂಗ್‌ ಮಾಡುತ್ತಿರುವ ವಿಡಿಯೋ. ಇಬ್ಬರೂ ಇತ್ತೀಚೆಗೆ ಮುನಿಸಿಕೊಂಡು ದೂರವಾಗಿದ್ದಾರೆ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಲಾಕ್‌ಡೌನ್‌ನ ಕೊನೆಯ ಕ್ಷಣದಲ್ಲಿ ರಣಬೀರ್‌ ಜೊತೆ ಸೇರಿಕೊಂಡಿರುವ ಅಲಿಯಾ, ಆತನ ಜೊತೆಗೆ ದಿನ ಕಳೆಯುತ್ತಿದ್ದಾಳೆ ಅಂತ ಗೊತ್ತಾಗಿದೆ.

 

ಕೊರೋನಾ ಸಮರಕ್ಕೆ 25 ಕೋಟಿ ರು. ದೇಣಿಗೆ ನೀಡಿದ ಅಕ್ಷಯ್

 

ಅಮಿತಾಭ್‌ ಬಚ್ಚನ್‌ ಸೇರಿದಂತೆ ಹಲವು ಮಂದಿ ಬಾಲಿವುಡ್‌ ಸ್ಟಾರ್‌ಗಳು ಲಾಕ್‌ಡೌನ್‌ನ್ನು ಯಶಸ್ವಿಯಾಗಿಸುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಬಾಲಿವುಡ್‌ಗೆ ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟವಾಗುತ್ತಿದೆ. ಆದರೆ ಜನತೆಯ ಜೀವ ಮುಖ್ಯ ಎಂಬುದು ಇವರೆಲ್ಲರ ಕಾಳಜಿಯಾಗಿದೆ.