ಬಾಡಿಗೆ ತಾಯ್ತನದ ನಿಯಮವೇನು; ನಯನತಾರಾ-ವಿಘ್ನೇಶ್ ದಂಪತಿಗೆ ಸಂಕಷ್ಟ ಎದುರಾಗಿದ್ದೇಕೆ?
ಮಕ್ಕಳು ಮನೆಗೆ ಬಂದ ಸಂತಸದಲ್ಲಿದ್ದ ನಯನತಾರಾ ಮತ್ತು ವಿಘ್ನೇಶ್ ದಂಪತಿಗೆ ತಮಿಳು ನಾಡು ಸರ್ಕಾರ ತನಿಖೆಗೆ ಆದೇಶಿಸುವಂತೆ ಸೂಚಿಸಿ ಶಾಕ್ ನೀಡಿದೆ.
ಸೌತ್ ಸಿನಿರಂಗದ ಸ್ಟಾರ್ ದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚಿಗಷ್ಟೆ ಇಬ್ಬರೂ ಮುದ್ದಾದ ಮಕ್ಕಳಿಗೆ ತಂದೆ-ತಾಯಿ ಆಗಿರುವುದಾಗಿ ಬಹಿರಂಗ ಪಡಿಸಿದ್ದರು. ಬಾಡಿಗೆ ತಾಯಿ ಮೂಲಕ ಇಬ್ಬರೂ ಮಕ್ಕಳನ್ನು ಪಡೆದಿರುವ ವಿಚಾರವನ್ನು ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು. ದೀರ್ಘವಾದ ಪೋಸ್ಟ್ ಶೇರ್ ಮಾಡುವ ಮೂಲಕ ಮುದ್ದಾದ ಮಕ್ಕಳ ಅಪ್ಪ-ಅಮ್ಮ ಆದ ಸಂತಸವನ್ನು ಹಂಚಿಕೊಂಡಿದ್ದರು. ಆದರೀಗ ಈ ಸ್ಟಾರ್ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳು ಮನೆಗೆ ಬಂದ ಸಂತಸದ ಸಮಯದಲ್ಲಿ ತಮಿಳು ನಾಡು ಸರ್ಕಾರ ತನಿಖೆಗೆ ಆದೇಶಿಸಿದೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದದ್ದು ನಿಯಮಗಳ ಪ್ರಕಾರವೇ ಇದೆಯಾ ಎಂದು ಕೇಳಿದೆ.
ಬಾಡಿಗೆ ತಾಯ್ತನದ ಕುರಿತು ಸರ್ಕಾರ ಹಲವು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ಪಾಲಿಸಿಲ್ಲ ಎನ್ನುವ ಮಾತು ಕೇಲಿಬಂದಿದೆ. ಹಾಗಾಗಿ ತಮಿಳು ನಾಡು ಸರಕಾರ ಈ ಪ್ರಕರಣದ ತನಿಖೆಗೆ ಆದೇಶಿಸಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಬಾಡಿಗೆ ತಾಯ್ತನ ನಿಯಂತ್ರಣ ಕಾಯ್ದೆಯನ್ನು ಜಾರಿ ಮಾಡಲಾಗಿದೆ. ಬಾಡಿಗೆ ತಾಯಿ ಆರೋಗ್ಯವಾಗಿರಬೇಕು, ವಯಸ್ಸು 21-35ರ ಅಂತರದಲ್ಲಿ ಇರಬೇಕು. ಒಂದೇ ಸಲ ಬಾಡಿಗೆ ತಾಯಿ ಆಗಲು ಸಾಧ್ಯ ಹಾಗೂ ವಾಣಿಜ್ಯ ಬಾಡಿಗೆ ತಾಯ್ತನದ ಮೇಲೆ ನಿರ್ಬಂಧ ಹೇರಲಾಗಿದೆ.
ಇದರಲ್ಲಿ ಕೆಲವು ನಿಯಮಗಳನ್ನು ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಪಾಲಿಸಿಲ್ಲ ಎನ್ನುವ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳು ನಾಡು ವೈದ್ಯಕೀಯ ಸೇವೆಗಳ ನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ಈ ಆದೇಶ ಈಗ ಅವಳಿ ಮಕ್ಕಳು ಮನೆಗೆ ಬಂದ ಸಂಭ್ರಮದಲ್ಲಿ ತೇಲುತ್ತಿದ್ದ ದಂಪತಿಗೆ ಶಾಕ್ ನೀಡಿದೆ.
ಅವಳಿ ಗಂಡು ಮಗು ಪಡೆದ ನಯನ್ ತಾರಾ ಜೋಡಿಗೆ ಶಾಕ್, ಸಂಭ್ರಮದ ನಡುವೆ ಸಂಕಷ್ಟ!
ಇತ್ತೀಚಿಗಷ್ಟೆ ವಿಷ್ನೇಶ್ ಶಿವನ್ ಮಕ್ಕಳನ್ನು ಸ್ವಾಗತಿಸುವ ಬಗ್ಗೆ ಸುಳಿವು ನೀಡಿದ್ದರು. ಮಕ್ಕಳ ಜೊತೆ ಇರುವ ಫೋಟೋ ಶೇರ್ ಮಾಡಿ, 'ಮಕ್ಕಳ ಸಮಯ. ಮುಂದಿನ ದಿನಗಳಿಗೆ ಅಭ್ಯಾಸ ಮಾಡುತ್ತಿರುವುದು' ಎಂದು ಹೇಳಿದ್ದರು. ಆಗಲೇ ಅಭಿಮಾನಿಗಳಿಗೆ ನಯನತಾರಾ ದಂಪತಿ ತಂದೆ-ತಾಯಿ ಆಗುತ್ತಿದ್ದಾರೆ ಎನ್ನುವ ಸುಳಿವು ಸಿಕ್ಕಿತ್ತು.
ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ನಯನತಾರಾ ಮದುವೆ ಸಮಾರಂಭವನ್ನು ನೆಟ್‌ಫ್ಲಿಕ್ಸ್ ಸೆರೆಹಿಡಿದಿದ್ದು ಸದ್ಯ ಸ್ಟ್ರೀಮಿಂಗ್ ಆಗುತ್ತಿದೆ.
ಮದುವೆಯಾದ 4 ತಿಂಗಳಿಗೆ ಮುದ್ದಾದ ಅವಳಿ ಗಂಡು ಮಗು ಸ್ವಾಗತಿಸಿದ ನಯನತಾರ ಜೋಡಿ!
ಇನ್ನು ನಯನತಾರಾ ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ತಮಿಳು ಜೊತೆಗೆ ಬಾಲಿವುಡ್ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಬಾಲಿವುಡ ನಲ್ಲಿ ಶಾರುಖ್ ಖಾನ್ ಜೊತೆ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಅಟ್ಲೀ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಶಾರುಖ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ನಯನತಾರಾ ಇರೈವನ್, ಕನೆಕ್ಟ್, ಲೇಡಿ ಸೂಪರ್ ಸ್ಟಾರ್ ಮಲಯಾಳಂನಲ್ಲಿ ಗೋಲ್ಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಹುಭಾಷ ನಟಿ ನಯನತಾರಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.