ಕ್ಯಾಪ್ಟನ್‌ ಗೋಪಿನಾಥ್‌ ಕುರಿತ ಸೂರರೈ ಪೊಟ್ರು ಚಿತ್ರ ಆಸ್ಕರ್‌ಗೆ ಆಯ್ಕೆ| ಸಾಮಾನ್ಯ ಪ್ರಶಸ್ತಿ ವಿಭಾಗದಲ್ಲಿ ಸ್ಪರ್ಧೆ

ಚೆನ್ನೈ(ಜ.27): ಒಟಿಟಿ ವೇದಿಕೆಯಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆಗಳಿಸಿರುವ ಕನ್ನಡಿಗ ಕ್ಯಾಪ್ಟನ್‌ ಗೋಪಿನಾಥ್‌ ಅವರ ಜೀವನಚರಿತ್ರೆ ಆಧರಿತ ತಮಿಳಿನ ‘ಸೂರರೈ ಪೊಟ್ರು’ ಚಿತ್ರ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇನಗೊಂಡಿದೆ. ಚಿತ್ರವು ಸಾಮಾನ್ಯ ವಿಭಾಗದಲ್ಲಿ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಉತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ವಿಭಾಗದಲ್ಲಿ ಚಿತ್ರ ಸ್ಪರ್ಧೆ ಮಾಡಲಿದೆ.

ಆಸ್ಕರ್‌ ಫಿಲ್ಮ್‌ ಸ್ಕ್ರೀನಿಂಗ್‌ ವೇದಿಕೆಗಳಲ್ಲಿ ಮಂಗಳವಾರದಿಂದ ಸೂರರೈ ಪೊಟ್ರು ಚಿತ್ರ ವೀಕ್ಷಣೆಗೆ ಲಭ್ಯವಿದೆ ಎಂದು ಚಿತ್ರದ ಸಹ ನಿರ್ಮಾಪಕ ರಾಜ್‌ಶೇಖರ್‌ ಪಂಡಿಯನ್‌ ಟ್ವೀಟ್‌ ಮಾಡಿದ್ದಾರೆ.

ಸುಧಾ ಕೊಂಗಾರ ನಿರ್ದೇಶನದ ಈ ಚಿತ್ರದಲ್ಲಿ ತಮಿಳು ನಟ ಸೂರ್ಯ ಅವರು ಕ್ಯಾಪ್ಟನ್‌ ಗೋಪಿನಾಥ್‌ ಅವರ ಪಾತ್ರವನ್ನು ಮಾಡಿದ್ದಾರೆ. ಸಾಮಾನ್ಯ ಹಿನ್ನೆಲೆಯಲ್ಲಿ ಬಂದವರಾದ ಕ್ಯಾಪ್ಟನ್‌ ಗೋಪಿನಾಥ್‌ ಅವರು 1990ರಲ್ಲಿ ಕಡಿಮೆ ವೆಚ್ಚದ ಡೆಕ್ಕನ್‌ ಏರ್‌ಲೈನ್‌ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ ಯಶಸ್ವಿಯಾದ ಕಥಾಹಂದವರನ್ನು ಸೂರರೈ ಪೊಟ್ರು ಚಿತ್ರ ಹೊಂದಿದೆ. ಈ ಚಿತ್ರ ಅಮೆಜಾನ್‌ ಪ್ರೈಮ್‌ನಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ತೆರೆಕಂಡಿತ್ತು.