"ನನ್ನ ಕಥೆಗಳು ಗಡಿ ದಾಟಿ ಪ್ರಯಾಣಿಸಬಲ್ಲವು ಎಂದು ನಂಬುವ ನಿರ್ಮಾಪಕರೊಂದಿಗೆ ಮಾತ್ರ ಇನ್ಮುಂದೆ ಕೆಲಸ ಮಾಡುತ್ತೇನೆ," ಎಂದು ಶಪಥ ಮಾಡಿದರು. ಈ ಬದಲಾವಣೆಯ ಮೊದಲ ಹೆಜ್ಜೆಯೇ 2012ರಲ್ಲಿ ತೆರೆಕಂಡ 'ಈಗ' (Eega) ಸಿನಿಮಾ. ಈಗ ಸಿನಿಮಾ ಇತಿಹಾಸ ಸೃಷ್ಟಿಸಿದ್ದು ಈಗ ಇತಿಹಾಸ.
"ಆ ಸಿನಿಮಾ ಡಬ್ ಮಾಡಿ ಎಂದು ನಿರ್ಮಾಪಕರ ಬಳಿ ಭಿಕ್ಷೆ ಬೇಡಿದ್ದೆ!
ಹೈದರಾಬಾದ್: ಇಂದು ಭಾರತೀಯ ಚಿತ್ರರಂಗದ 'ಬಾಹುಬಲಿ' ಎಂದೇ ಕರೆಸಿಕೊಳ್ಳುವ, ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಮಾಂತ್ರಿಕ ನಿರ್ದೇಶಕ ಅಂದರೆ ಅದು ಎಸ್‌ಎಸ್ ರಾಜಮೌಳಿ. 'ಬಾಹುಬಲಿ', 'ಆರ್‌ಆರ್‌ಆರ್' ಅಂತಹ ಬ್ರಹ್ಮಾಂಡದಂತಹ ಸಿನಿಮಾಗಳನ್ನು ನೀಡಿ, ಜೇಮ್ಸ್ ಕ್ಯಾಮರೂನ್, ಸ್ಟೀವನ್ ಸ್ಪೀಲ್ಬರ್ಗ್ ಅವರಂತಹ ಹಾಲಿವುಡ್ ದಿಗ್ಗಜರಿಂದಲೇ ಶಬ್ಬಾಶ್‌ಗಿರಿ ಪಡೆದ ರಾಜಮೌಳಿ, ಇಂದು ಭಾರತದ ನಂಬರ್ ಒನ್ ನಿರ್ದೇಶಕ. ಆದರೆ, ಈ 'ಪ್ಯಾನ್ ಇಂಡಿಯಾ' ಸಾಮ್ರಾಜ್ಯವನ್ನು ಕಟ್ಟುವ ಹಾದಿ ರಾಜಮೌಳಿ ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಒಮ್ಮೆ ತಮ್ಮ ಸಿನಿಮಾವನ್ನು ಬೇರೆ ಭಾಷೆಗೆ ಡಬ್ ಮಾಡಿ ಎಂದು ನಿರ್ಮಾಪಕರ ಬಳಿ ಗೋಗರೆದಿದ್ದರೂ, ಅದಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲವಂತೆ! ಹೌದು, ರಾಜಮೌಳಿ ಅವರೇ ಇತ್ತೀಚೆಗೆ ಪಾಡ್‌ಕಾಸ್ಟ್ ಒಂದರಲ್ಲಿ ತಮ್ಮ ಹಳೆಯ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
ಮಗಧೀರ ಚಿತ್ರದ ಕಹಿ ನೆನಪು:
ಇಂದು ರಾಜಮೌಳಿ ಹೆಸರು ಕೇಳಿದರೆ ಸಾಕು, ಸಾವಿರಾರು ಕೋಟಿ ಬಂಡವಾಳ ಹೂಡಲು ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ಆದರೆ 2009ರ ಸಮಯದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ರಾಮ್ ಚರಣ್ ಮತ್ತು ಕಾಜಲ್ ಅಗರ್ವಾಲ್ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾ 'ಮಗಧೀರ' ತೆರೆಕಂಡ ಸಮಯವದು. ಆ ಸಿನಿಮಾ ತೆಲುಗಿನಲ್ಲಿ ಅಭೂತಪೂರ್ವ ಯಶಸ್ಸು ಕಂಡಿತ್ತು. ಆ ಚಿತ್ರದ ಕಥೆ, ಮೇಕಿಂಗ್ ಮತ್ತು ಎಮೋಷನ್‌ಗಳು ಕೇವಲ ತೆಲುಗು ರಾಜ್ಯಗಳಿಗೆ ಸೀಮಿತವಾಗಬಾರದು, ಅದು ತಮಿಳುನಾಡಿಗೂ ತಲುಪಬೇಕು ಎಂದು ರಾಜಮೌಳಿ ಬಲವಾಗಿ ನಂಬಿದ್ದರು.
ಆದರೆ..": ಪ್ಯಾನ್ ಇಂಡಿಯಾ ಸಕ್ಸಸ್ ಹಿಂದಿನ ಕರಾಳ ದಿನಗಳನ್ನು ಬಿಚ್ಚಿಟ್ಟ ರಾಜಮೌಳಿ!
ಈ ಬಗ್ಗೆ ಮಾತನಾಡಿದ ರಾಜಮೌಳಿ, "ನಾನು ನನ್ನ ನಿರ್ಮಾಪಕರ ಬಳಿ ಸಾಕಷ್ಟು ಒತ್ತಡ ಹೇರಿದೆ, ಅಕ್ಷರಶಃ ಭಿಕ್ಷೆ ಬೇಡಿದ್ದೆ (begged him). ದಯವಿಟ್ಟು ಈ ಸಿನಿಮಾವನ್ನು ತಮಿಳಿಗೆ ಡಬ್ ಮಾಡಿ ಬಿಡುಗಡೆ ಮಾಡಿ, ನಾನು ಈ ಪ್ರಾಡಕ್ಟ್ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದು ಗೋಗರೆದಿದ್ದೆ. ಆದರೆ, ಅವರು ಯಾವುದೋ ಕಾರಣಕ್ಕೆ 'ನೋ' ಎಂದರು. ಆ ಸಿನಿಮಾ ತಮಿಳಿಗೆ ಹೋಗಲೇ ಇಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತೆಲುಗಿನಲ್ಲಿ ಇತಿಹಾಸ ಸೃಷ್ಟಿಸಿದರೂ, ಭೌಗೋಳಿಕವಾಗಿ ಆ ಸಿನಿಮಾ ಬೇರೆ ರಾಜ್ಯಗಳಿಗೆ ತಲುಪದೇ ಹೋದದ್ದು ರಾಜಮೌಳಿ ಅವರಿಗೆ ದೊಡ್ಡ ಪಾಠವಾಯಿತಂತೆ.
ರಾಜಮೌಳಿಯ ಶಪಥ ಮತ್ತು 'ಈಗ' ಪ್ರಯೋಗ:
ಮಗಧೀರದ ಅನುಭವದ ನಂತರ ರಾಜಮೌಳಿ ಒಂದು ಕಠಿಣ ನಿರ್ಧಾರಕ್ಕೆ ಬಂದರು. "ನನ್ನ ಕಥೆಗಳು ಗಡಿ ದಾಟಿ ಪ್ರಯಾಣಿಸಬಲ್ಲವು ಎಂದು ನಂಬುವ ನಿರ್ಮಾಪಕರೊಂದಿಗೆ ಮಾತ್ರ ಇನ್ಮುಂದೆ ಕೆಲಸ ಮಾಡುತ್ತೇನೆ," ಎಂದು ಶಪಥ ಮಾಡಿದರು. ಈ ಬದಲಾವಣೆಯ ಮೊದಲ ಹೆಜ್ಜೆಯೇ 2012ರಲ್ಲಿ ತೆರೆಕಂಡ 'ಈಗ' (Eega) ಸಿನಿಮಾ. ನಾಯಕ ನೊಣವಾಗಿ ಮರುಹುಟ್ಟು ಪಡೆಯುವ ಈ ವಿಶಿಷ್ಟ ಸೇಡಿನ ಕಥೆಗೆ ರಾಜಮೌಳಿ ಅವರಿಗೆ ಸರಿಯಾದ ನಿರ್ಮಾಪಕರು ಸಿಕ್ಕರು.
ಈ ಚಿತ್ರವನ್ನು ತಮಿಳಿನಲ್ಲಿ 'ನಾನ್ ಈ' ಹೆಸರಿನಲ್ಲಿ ಹಾಗೂ ಮಲಯಾಳಂ ಮತ್ತು ಹಿಂದಿಯಲ್ಲೂ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಹಿಂದಿಯಲ್ಲಿ ಅಜಯ್ ದೇವಗನ್ ಸಾಥ್ ನೀಡಿದರೂ ವಿತರಣೆಯ ಸಮಸ್ಯೆಯಿಂದ ಅದು ಅಂದುಕೊಂಡ ಮಟ್ಟಕ್ಕೆ ತಲುಪಲಿಲ್ಲ. ಆದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಇತರೆಡೆ ಈ ಸಿನಿಮಾ ರಾಜಮೌಳಿ ಅವರ ತಾಕತ್ತನ್ನು ತೋರಿಸಿಕೊಟ್ಟಿತು. ತೆಲುಗು ರಾಜ್ಯಗಳ ಆಚೆಗೂ ಪ್ರೇಕ್ಷಕರು ತಮ್ಮ ಕಥೆಯನ್ನು ಸ್ವೀಕರಿಸುತ್ತಾರೆ ಎಂಬ ಆತ್ಮವಿಶ್ವಾಸವನ್ನು ಈ ಸಿನಿಮಾ ಅವರಿಗೆ ನೀಡಿತು.
ಬಾಹುಬಲಿ ಮತ್ತು ಮುಂದಿನ ಪಯಣ:
ಆ ನಂತರ ನಡೆದದ್ದು ಇತಿಹಾಸ. ಕರಣ್ ಜೋಹರ್ ಮತ್ತು ಅನಿಲ್ ತಡಾನಿ ಅವರಂತಹ ದಿಗ್ಗಜರ ಜೊತೆಗೂಡಿ 'ಬಾಹುಬಲಿ: ದಿ ಬಿಗಿನಿಂಗ್' (2015) ಚಿತ್ರವನ್ನು ಹಿಂದಿ ಸೇರಿದಂತೆ ಇಡೀ ದೇಶದಾದ್ಯಂತ ಬಿಡುಗಡೆ ಮಾಡಿದರು. ಪ್ರಾದೇಶಿಕ ನಿರ್ದೇಶಕನೊಬ್ಬ ನ್ಯಾಷನಲ್ ಐಕಾನ್ ಆಗಿ ಬದಲಾದ ಕ್ಷಣವದು. ಬಳಿಕ ಬಂದ ರಾಮ್ ಚರಣ್ ಮತ್ತು ಎನ್‌ಟಿಆರ್ ನಟನೆಯ 'ಆರ್‌ಆರ್‌ಆರ್' (RRR) ಮತ್ತು 'ನಾಟು ನಾಟು' ಹಾಡಿಗೆ ಬಂದ ಆಸ್ಕರ್ ಪ್ರಶಸ್ತಿ ಅವರನ್ನು ಜಾಗತಿಕ ಮಟ್ಟಕ್ಕೆ ಏರಿಸಿದೆ.
ಸದ್ಯ ಮಹೇಶ್ ಬಾಬು ಜೊತೆಗಿನ 'ವಾರಣಾಸಿ' (ಇದಕ್ಕೆ 'ರಾಜಮೌಳಿ ವಾರಣಾಸಿ' ಎಂದು ಶೀರ್ಷಿಕೆ ಇಡಲಾಗಿದೆ) ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ. ಹಾಗೂ, ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ಹಾಲಿವುಡ್ ಸ್ಟುಡಿಯೋಗಳ ಜೊತೆ ಮಾತುಕತೆ ನಡೆಯುತ್ತಿದ್ದು, ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ಬಿಡುಗಡೆ ಮಾಡಲು ರಾಜಮೌಳಿ ಪ್ಲಾನ್ ಮಾಡುತ್ತಿದ್ದಾರೆ. ಅಂದು ಒಂದು ಡಬ್ಬಿಂಗ್‌ಗಾಗಿ ಪರದಾಡಿದ್ದ ರಾಜಮೌಳಿ, ಇಂದು ವಿಶ್ವದ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸ್ಫೂರ್ತಿದಾಯಕ.


