ಸಿನಿಮಾದ ಶೂಟಿಂಗ್ ಸಮಯದಲ್ಲಿ ಗುಂಡೇಟಿಗೆ ತಾವು ಬಲಿಯಾಗಿರುವ ಸುದ್ದಿ ಪತ್ರಿಕೆಗಳಲ್ಲಿ ನೋಡಿ ನಟಿ ಶಿಲ್ಪಾ ಶಿರೋಡ್ಕರ್ ಮೂರ್ಚೆ ಹೋಗಿದ್ದರಂತೆ. ಆ ಘಟನೆಯನ್ನು ವಿವರಿಸಿದ್ದಾರೆ ನೋಡಿ!
90ರ ದಶಕದಲ್ಲಿ ಬಾಲಿವುಡ್ ಆಳಿದ್ದ ನಟಿಯರದಲ್ಲಿ ಒಬ್ಬರು ಶಿಲ್ಪಾ ಶಿರೋಡ್ಕರ್. ಮದುವೆಯಾದ ಮೇಲೆ ನಟನೆಯಿಂದ ದೂರವಾಗಿದ್ದ ನಟಿ ಮತ್ತೆ ಪುನಃ ಈಗ ಬಣ್ಣ ಹಚ್ಚಿದ್ದಾರೆ. 1995ರಲ್ಲಿ ನಡೆದ ವಿಚಿತ್ರ ಘಟನೆಯೊಂದನ್ನು ಅವರು ನೆನಪಿಸಿಕೊಂಡಿದ್ದಾರೆ. ಪಿಂಕ್ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ರಘುವೀರ್ ಚಿತ್ರೀಕರಣದ ಸಮಯದಲ್ಲಿ ಶಿಲ್ಪಾ ಶಿರೋಡ್ಕರ್ ಅವರಿಗೆ ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದು ಅಂದು ಪತ್ರಿಕೆಗಳಲ್ಲಿ ಸುದ್ದಿ ಬಂದಿದ್ದರು. ಟಿವಿ ಮಾಧ್ಯಮ ಈಗಿನಷ್ಟು ಆಗ ಆರ್ಭಟ ಇಲ್ಲದ್ದರಿಂದ ಪತ್ರಿಕೆಗಳಲ್ಲಿ ಇದು ಹೈಲೈಟ್ ಆಗಿತ್ತು. ಆದರೆ ಈ ಬಗ್ಗೆ ಖುದ್ದು ನಟಿಗೇ ಗೊತ್ತಿರಲಿಲ್ಲ. ಸುನೀಲ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಚಿತ್ರ ಇದಾಗಿದ್ದು, ಅವರು, ಸುರೇಶ್ ಒಬೆರಾಯ್, ಸುಧಾ ಚಂದ್ರನ್, ಮೋನಿಶ್ ಬಹ್ಲ್, ಅರುಣಾ ಇರಾನಿ, ಗುಲ್ಶನ್ ಗ್ರೋವರ್ ಮತ್ತು ಪ್ರೇಮ್ ಚೋಪ್ರಾ ಜೊತೆ ಶೂಟಿಂಗ್ನಲ್ಲಿದ್ದಾಗ ಗುಂಡಿಕ್ಕಿ ಸಾಯಿಸಲಾಗಿದೆ ಎನ್ನುವ ಸುದ್ದಿ ಬಂದಿತ್ತು.
ಪತ್ರಿಕೆಗಳನ್ನು ನೋಡಿ ಅಭಿಮಾನಿಗಳು ಮಾತ್ರವಲ್ಲದೇ ನಟಿಯ ಮನೆಯವರು ಕಂಗಾಲಾಗಿ ಹೋದರು. “ನಾನು ಕುಲ್ಲು ಮನಾಲಿಯಲ್ಲಿದ್ದೆ. ಆ ಸಮಯದಲ್ಲಿ ನಮ್ಮಲ್ಲಿ ಮೊಬೈಲ್ ಫೋನ್‌ಗಳು ಇಲ್ಲದ ಕಾರಣ ನನ್ನ ತಂದೆ ನಾನು ಉಳಿದುಕೊಂಡಿದ್ದದ ಹೋಟೆಲ್‌ಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದರು. ನಾನು ಅಲ್ಲಿ ಸುನೀಲ್ ಶೆಟ್ಟಿ ಜೊತೆ ಚಿತ್ರೀಕರಣ ಮಾಡುತ್ತಿದ್ದೆ. ಅಲ್ಲಿ ಚಿತ್ರೀಕರಣ ವೀಕ್ಷಿಸುತ್ತಿದ್ದ ಪ್ರತಿಯೊಬ್ಬರೂ ಸುದ್ದಿ ತಿಳಿದಿದ್ದರಿಂದ ಇದು ಶಿಲ್ಪಾ ಅಥವಾ ಬೇರೆ ಯಾರಾದರೂ ಎಂದು ಯೋಚಿಸುತ್ತಿದ್ದರು. ಚಿತ್ರೀಕರಣ ವೀಕ್ಷಿಸುತ್ತಿದ್ದ ಜನರು ಸುದ್ದಿ ತಿಳಿದಿದ್ದರಿಂದ ಅದು ನಿಜವಾಗಿಯೂ ನಾನೇ ಎಂದು ಗೊಂದಲಕ್ಕೊಳಗಾಗಿದ್ದರು. ಹೋಟೆಲ್ನಲ್ಲಿ ನಾನು ಇಲ್ಲದ್ದನ್ನು ಕೇಳಿ ತಂದೆ ಆಘಾತಕ್ಕೊಳಗಾಗಿದ್ದರು. ಇಷ್ಟೇ ಅಲ್ಲದೇ 25ಕ್ಕೂ ಅಧಿಕ ಕರೆಗಳು ಹೋಟೆಲ್‌ಗೆ ಬಂದಿದ್ದವು. ಕೊನೆಗೆ ನನಗೆ ವಿಷಯ ತಿಳಿದು ಶಾಕ್ ಆಯಿತು ಎಂದು ನಟಿ ವಿವರಿಸಿದ್ದಾರೆ.
ಆದರೆ, ಹೀಗೆ ಸುದ್ದಿಯಾಗುವ ಹಿಂದಿತ್ತು ವಿಚಿತ್ರ ಕಾರಣ. ಅದು ಸಿನಿಮಾ ಪ್ರಚಾರಕ್ಕಾಗಿ ಅರ್ಥಾತ್ ಪ್ರಮೋಷನ್ಗಾಗಿ ಚಿತ್ರತಂಡವೇ ಮಾಡಿದ್ದಂತೆ! ಈಗಲೂ ಸುಖಾಸುಮ್ಮನೇ ದೃಶ್ಯ ಲೀಕ್ ಆಗಿದೆ ಎಂದು, ಯಾರೋ ಕೇಸ್ ಹಾಕಿದರು ಎಂದು ವಿವಾದವನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವ ಸಿನಿಮಾ ತಂಡಗಳು, ಅದನ್ನು ಪ್ರಮೋಷನ್ಗೆ ಬಳಸಿಕೊಳ್ಳುವುದು ಮಾಮೂಲು. ಏನೋ ವಿವಾದ ಆಗಿದೆ ಎಂದಾಗ ಅದನ್ನು ಜನರು ಮುಗಿಬಿದ್ದು ನೋಡುತ್ತಾರೆ ಎನ್ನುವ ಕಾರಣ ಚೀಪ್ ಗಿಮಿಕ್ಗಳನ್ನು ಬಳಸುವುದು ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿಯೂ ಮಾಮೂಲು. ಈ ಗಿಮಿಕ್ ಅನ್ನು ಅಂದಿನ ಸಮಯದಲ್ಲಿ ನಟಿಯ ಸಾವಿನ ರೂಪದಲ್ಲಿ ಬಳಸಿಕೊಳ್ಳಲಾಗಿತ್ತು. ವಿಷಯ ತಿಳಿದು ಕೊನೆಗೆ ಎಲ್ಲರನ್ನೂ ನಾನು ಸಮಾಧಾನ ಮಾಡಿದೆ ಎಂದು ನಟಿ ಹೇಳಿದ್ದಾರೆ.
ಇನ್ನು, ನಟಿ ಕುರಿತು ಹೇಳುವುದಾದರೆ, ಶಿಲ್ಪಾ ಶಿರೋಡ್ಕರ್ ಮುಂದಿನದಾಗಿ ಜಟಾಧಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಥ್ರಿಲ್ಲರ್ ಆಗಿದೆ. ಹಲವಾರು ವರ್ಷಗಳ ನಂತರ ಅವರು ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಜಟಾಧಾರವು ನಿಗೂಢವಾದ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಮತ್ತು ಅದರ ಗುಪ್ತ ಅತೀಂದ್ರಿಯ ಕಥೆಯ ಸುತ್ತ ಕೇಂದ್ರೀಕೃತವಾದ ಅಲೌಕಿಕ ನಿಗೂಢ ಥ್ರಿಲ್ಲರ್ ಆಗಿದೆ. ಇದು ಸಸ್ಪೆನ್ಸ್, ಕುತೂಹಲ ಮತ್ತು ಪೌರಾಣಿಕ ಅಂಶಗಳನ್ನು ವಾತಾವರಣದ ನಿರೂಪಣೆಯಲ್ಲಿ ಬೆರೆಸುತ್ತದೆ. ಸುಧೀರ್ ಬಾಬು ಈ ಚಿತ್ರದ ನಾಯಕರಾಗಿದ್ದಾರೆ. ಸೋನಾಕ್ಷಿ ಸಿನ್ಹಾ ಮತ್ತು ಶಿಲ್ಪಾ ಅವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳುತ್ತಾರೆ. ಶಿಲ್ಪಾ ಶಿರೋಡ್ಕರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
