42 ವರ್ಷದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಹಠಾತ್ ಸಾವಿನ ಬಗ್ಗೆ ಹಿಂದೆ ಭವಿಷ್ಯ ನುಡಿದಿದ್ದ ವೀಡಿಯೋವೊಂದು ವೈರಲ್ ಆಗಿದೆ. ಜಾತಕದ ಮೂಲಕ ಅವರ ಸಾವಿನ ಬಗ್ಗೆ ಈ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು.
ನಟಿ, ನೃತ್ಯಗಾರ್ತಿ ಮಾಡೆಲ್ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗುವ ಮೂಲಕ ಇಹದ ಯಾತ್ರೆ ಮುಗಿಸಿದ್ದು, ತಮ್ಮ ಸಾಕಷ್ಟು ಅಭಿಮಾನಿಗಳು, ಕುಟುಂಬದವರು, ಬಂಧುಗಳು ಸ್ನೇಹಿತರನ್ನು ಕಣ್ಣೀರಿನ ಕಡಲಲ್ಲಿ ಮುಳುಗಿಸಿದ್ದಾರೆ. ಕೇವಲ 42 ವರ್ಷ ಪ್ರಾಯದ ಶೆಫಾಲಿ ಶುಕ್ರವಾದ ನಿಧನರಾಗಿದ್ದು, ಅವರು ಹಿಂದಿಯ ಹಿಟ್ ಸಾಂಗ್ ಕಾಂಟಾ ಲಗಾ ಹಾಗೂ ಕನ್ನಡದ ಈ ಬೋರ್ಡ್ ಇರದ ಬಸ್ಸನ್ನು ಹತ್ತಿ ಬಂದ ಸುಂದರಿ ಹಾಡು ಸೇರಿದಂತೆ ಹಲವು ಐಟಂ ಹಾಡುಗಳಲ್ಲಿ ನರ್ತಿಸಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದವರು, ಅವರ ಹಠಾತ್ ಸಾವು ಅನೇಕರನ್ನು ಆಘಾತಕ್ಕೀಡು ಮಾಡಿದೆ. ಶುಕ್ರವಾರ ಅಸ್ವಸ್ಥರಾದ ಅವರನ್ನು ಅವರ ಪತಿ ಪರಾಗ್ ತ್ಯಾಗಿ ಹಾಗೂ ಇತರರು ಕೂಡಲೇ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಗೆ ಆಗಮಿಸುತ್ತಲೇ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ಘೋಷಿಸಿದ್ದರು. ಆದರೆ ಈಗ ಅವರ ಹಠಾತ್ ಸಾವಿನ ಬಗ್ಗೆ ಭವಿಷ್ಯ ನುಡಿದ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರನ್ನು ದಿಗ್ಬ್ರಮೆಗೊಳಿಸಿದೆ.
ಹೌದು ಹಿಂದೊಮ್ಮೆ ಶೆಫಾಲಿ ಜರಿವಾಲಾ ಅವರು ಪರಾಸ್ ಛಬ್ರಾ ಅವರು ನಡೆಸಿಕೊಟ್ಟ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರು. ಈ ವೀಡಿಯೋದಲ್ಲಿ ಪರಾಸ್ ಅವರು ಶೆಫಾಲಿ ಅವರ ಜಾತಕದ ಕುಂಡಲಿಯನ್ನು ಓದುವ ಮೂಲಕ ಅವರ ಹಠಾತ್ ಸಾವಿನ ಭವಿಷ್ಯ ನುಡಿದಿದ್ದರು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ಅವರು ಶೆಫಾಲಿ ಜಾತಕವನ್ನು ನೋಡಿ ಹೀಗೆ ಹೇಳಿದ್ದರು,(ಆಪಕೇ 8th ಹೌಸ್ ಮೇ ಚಂದ್ರ, ಬುದ್ಧ ಔರ ಕೇತು ಬೈಟೇ ಹುಯೇ ಹೈಂ. ಚಂದ್ರ ಔರ್ ಕೇತು ಕಾ ಸಂಯೋಜನ್ ಸಬ್ಸೇ ಬುರಾ ಹೋತಾ ಹೈ. 8 th ಹೌಸ್ ಅಲ್ಸೀ ಇಂಡಿಕೇಟ್ ಲಾಸ್ ಸಡನ್ ಡೆತ್, ಫೇಮ್, ಹಿಡನ್ ಸಿಕ್ರೇಟ್ ತಾಂತ್ರಿಕ ರಿಲೇಟೆಡ್ ಇಶ್ಯೂಸ್ ಟೂ) ನಿಮ್ಮ 8ನೇ ಮನೆಯಲ್ಲಿ ಚಂದ್ರ ಬುಧ ಹಾಗೂ ಕೇತು ಒಟ್ಟಿಗೆ ಕೂತಿದ್ದಾರೆ, ಚಂದ್ರ ಹಾಗೂ ಕೇತುವಿನ ಸಂಯೋಜನೆ ಬಹಳ ಕೆಟ್ಟದು. 8ನೇ ಮನೆಯೂ ಸೋಲು ಹಠಾತ್ ಸಾವು, ಪ್ರಸಿದ್ಧಿ, ಹಾಗೂ ಕೆಲವು ಗುಪ್ತ ರಹಸ್ಯ ಹಾಗೂ ತಾಂತ್ರಿಕ ಸಂಬಂಧಿ ವಿಚಾರಗಳನ್ನು ಸೂಚಿಸುತ್ತದೆ. ನಿಮಗೆ ಚಂದ್ರ ಹಾಗೂ ಕೇತುವಿನಿಂದ ಕೆಟ್ಟದ್ದಾಗುವುದು ಹಾಗೂ ಜೊತೆಯಲ್ಲಿ ಬುಧನೂ ಕುಳಿತಿದ್ದಾನೆ. ಇದು ಆತಂಕ ಹಾಗೂ ನರಸಂಬಂಧಿ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಅವರು ಶೆಫಾಲಿಗೆ ಸೂಚಿಸಿದ್ದರು.
ಇದೇ ಪಾಡ್‌ಕಾಸ್ಟ್‌ನಲ್ಲಿಶೆಫಾಲಿ ಅವರು ಹದಿಹರೆಯದಲ್ಲಿ ತಾನು ಅಪಸ್ಮಾರದಿಂದ ಬಳಲುತ್ತಿದ್ದಿದ್ದಾಗಿ ದೃಢಪಡಿಸಿದ್ದರು. ತಾನು 15ನೇ ವಯಸ್ಸಿನವಳಿದ್ದಾಗ ಮೊದಲ ಬಾರಿಗೆ ಅಪಸ್ಮಾರ ರೋಗಕ್ಕೆ ತುತ್ತಾಗಿದ್ದಾಗಿ ಹೇಳಿಕೊಂಡಿದ್ದರು. ಆದರೆ ನಿರಂತರ ಚಿಕಿತ್ಸೆ, ಜೀವನಶೈಲಿಯ ಬದಲಾವಣೆಗಳು ಮತ್ತು ಧ್ಯಾನದಿಂದಾಗಿ ನಂತರದ 20 ವರ್ಷಗಳ ಕಾಲ ಅಪಸ್ಮಾರದಿಂದ ಮುಕ್ತಳಾಗಿದ್ದೆ ಎಂದು ಅವರು ಹೇಳಿಕೊಂಡಿದ್ದರು.
ನನಗೆ ಮೊದಲ ಬಾರಿಗೆ ಅಪಸ್ಮಾರ ಅಥವಾ ಪಿಟ್ಸ್ ಕಾಣಿಸಿಕೊಂಡಿದ್ದು ನಾನು ಹತ್ತನೇ ತರಗತಿಯಲ್ಲಿದ್ದಾಗ 15 ವರ್ಷದವಳಿದ್ದಾಗ. ಈ ನರವೈಜ್ಞಾನಿಕ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ಔಷಧಿಗಳಿವೆ. ನೀವು ಕೆಲವು ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಧ್ಯಾನ ಮತ್ತು ಯೋಗ ಸಹಾಯ ಮಾಡುತ್ತದೆ. ನಿಮ್ಮನ್ನು ಶಾಂತಗೊಳಿಸುವುದು ಹೇಗೆ ಎಂದು ನೀವು ಕಲಿಯಬೇಕು. ಹೀಗಾಗಿ ಕಳೆದ 20 ವರ್ಷಗಳಿಂದ ನಾನು ಅಪಸ್ಮಾರದಿಂದ ಮುಕ್ತಳಾಗಿದ್ದೇನೆ ಮತ್ತು ನಾನು ಅದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದೇನೆ. ನಿಮಗೆ ವೈದ್ಯಕೀಯ ಚಿಕಿತ್ಸೆ ಬೇಕು,ಹಾಗೂ ಅದರಿಂದ ಅಪಸ್ಮಾರವನ್ನು ಗುಣಪಡಿಸಬಹುದು ಎಂದು ಅವರು ಹೇಳಿಕೊಂಡಿದ್ದರು.
ಶೇಫಾಲಿ ಜರಿವಾಲಾ ಅವರು 2002ರಲ್ಲಿ ಕಾಂಟಾ ಲಗಾ ಹಾಡಿನ ಮೂಲಕ ಪ್ರಸಿದ್ಧಿಗೆ ಬಂದಿದ್ದರು. ಈ ಹಾಡಿನ ನಂತರ ಬೂಗೀ ವೂಗೀ, ನಾಚ್ ಬಲಿಯೇ ಮತ್ತು ಬಿಗ್ ಬಾಸ್ 13 ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಮೂಲಕ ಅವರು ಮನೆಮಾತಾದರು .
