ಕತಾರ್‌ನಿಂದ ನೌಕಾಸೇನಾ ಮಾಜಿ ಅಧಿಕಾರಿಗಳ ಬಿಡುಗಡೆಯಲ್ಲಿ ಶಾರುಖ್ ಪಾತ್ರವಿಲ್ಲ, SRK ಕಚೇರಿ ಸ್ಪಷ್ಟನೆ!
ಕತಾರ್‌ನಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಭಾರತದ ನೌಕಾಸೇನಾ ಮಾಜಿ ಅಧಿಕಾರಿಗಳ ಬಿಡುಗಡೆಯಲ್ಲಿ ಬಾಲಿವುಡ್ ನಟ ಶಾರುಖ್ ಪಾತ್ರವಿಲ್ಲ ಎಂದು ಸ್ಪಷ್ಟನೆ ಹೊರಬಿದ್ದಿದೆ. ಇದೀಗ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದವರಿಗೆ ಕಪಾಳ ಮೋಕ್ಷವಾಗಿದೆ. ಒಬ್ಬೊಬ್ಬ ಬೆಂಬಲಿಗರು, ನಾಯಕರು ಟ್ವೀಟ್ ಡಿಲೀಟ್ ಮಾಡುತ್ತಿದ್ದಾರೆ.
ಮುಂಬೈ(ಫೆ.13) ಕತಾರ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಸೇನಾ ಮಾಜಿ ಅಧಿಕಾರಿಗಳನ್ನು ಯಶಸ್ವಿಯಾಗಿ ಬಿಡುಗಡೆಗೊಳಿಸುವ ಹಿಂದೆ ನಟ ಶಾರುಖ್ ಖಾನ್ ಪಾತ್ರವಿದೆ ಎಂದು ಬಿಜೆಪಿಯಿಂದ ದೂರ ಸರಿಯುತ್ತಿರುವ ನಾಯಕ ಸುಬ್ರಮಣಿಯಂ ಸ್ವಾಮಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ಬೆಂಬಲಿಗರು, ಟಿಎಂಸಿ ನಾಯಕರು ಸೇರಿದಂತೆ ಹಲವರು ನರೇಂದ್ರ ಮೋದಿ ಹೆಸರಿಗೆ ಮಾತ್ರ, ಶಾರುಖ್ ಖಾನ್ ತಾಕತ್ತನ್ನು ಗೋದಿ ಮಾಧ್ಯಮಗಳು ಪ್ರಸಾರ ಮಾಡುತ್ತಿಲ್ಲ. ಬಿಜೆಪಿ ಸರ್ಕಾರದಿಂದ ಮಾಜಿ ನೌಕಾ ಅಧಿಕಾರಿಗಳ ಬಿಡುಗಡೆಯಾಗಿಲ್ಲ ಎಂದು ಟ್ವೀಟ್ ಮಾಡಿ ಭಾರಿ ಪ್ರಚಾರ ನೀಡಿದ್ದಾರೆ. ಆದರೆ ಈ ಸುದ್ದಿ ಕೋಲಾಹಲ ಸೃಷ್ಟಿಸುತ್ತಿದ್ದಂತೆ ಬಾಲಿವುಡ್ ನಟ ಶಾರುಖ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಕತಾರ್ ಜೈಲಿನಿಂದ ಭಾರತದ ಮಾಜಿ ಅಧಿಕಾರಿಗಳ ಬಿಡುಗಡೆಯಲ್ಲಿ ಶಾರುಖ್ ಖಾನ್ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾರುಖ್ ಖಾನ್ ಕಚೇರಿ ಈ ಕುರಿತು ಸ್ಪಷ್ಟನೆ ನೀಡಿದೆ. ಕತಾರ್ ಸರ್ಕಾರ ಗಲ್ಲು ಶಿಕ್ಷೆ ನೀಡಿದ್ದ ಭಾರತದ ನೌಕಾಸೇನಾ ಮಾಜಿ ಸಿಬ್ಬಂದಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಬಿಡುಗಡೆಯಲ್ಲಿ ನಟ ಶಾರುಖ್ ಖಾನ್ ಪ್ರಮುಖ ಪಾತ್ರನಿರ್ವಹಿಸಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಮೂಲಕ ಸ್ಪಷ್ಪಡಿಸುವುದೇನೆಂದರೆ, ಅಧಿಕಾರಿಗಳ ಬಿಡುಗಡೆಯಲ್ಲಿ ಶಾರುಖ್ ಖಾನ್ ಯಾವುದೇ ಪಾತ್ರವಿಲ್ಲ. ಈ ರಾಜತಾಂತ್ರಿಕ ವಿಚಾರದಲ್ಲಿ ಶಾರುಖ್ ಖಾನ್ ಯಾವುದೇ ನೆರವು ನೀಡಿಲ್ಲ. ಈ ವಿಚಾರವನ್ನು ಭಾರತ ರಾಜತಾಂತ್ರಿಕತೆ ಮೂಲಕ ಯಶಸ್ವಿಯಾಗಿ ನಿರ್ವಹಿಸಿದೆ. ಭಾರತ ರಾಜತಾಂತ್ರಿಕ ವಿಚಾರದಲ್ಲಿ ಅತ್ಯುತ್ತಮ ನಾಯಕರನ್ನು ಹೊಂದಿದ್ದು, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಸಾವಿನ ದವಡೆಯಿಂದ ನೌಕಾ ಸೇನಾ ಮಾಜಿ ಅಧಿಕಾರಿಗಳನ್ನು ಭಾರತ ಯಶಸ್ವಿಯಾಗಿ ಬಿಡಿಸಿರುವುದು ಎಲ್ಲರಂತೆ ಶಾರುಖ್ ಖಾನ್‌ಗೂ ಸಂತಸವಾಗಿದೆ. ತವರಿಗೆ ಮರಳಿರುವ ನಿವೃತ್ತ ಅಧಿಕಾರಿಗಳಿಗೆ ಶುಭಾಶಯಗಳು ಎಂದು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸ್ಪಷ್ಟನೆ ನೀಡಿದ್ದಾರೆ.
ಸಾವಿನ ಕುಣಿಕೆಯಿಂದ 8 ಮಂದಿ ಪಾರಾಗಿದ್ದು ಹೇಗೆ, ಮೋದಿ-ಧೋವಲ್-ಜೈಶಂಕರ್ ರೆಡಿ ಮಾಡಿದ್ರು ಪ್ಲ್ಯಾನ್ A & B!
ಸುಬ್ರಮಣಿಯನ್ ಸ್ವಾಮಿ ಮಾಡಿದ ಟ್ವೀಟ್ ಭಾರಿ ವೈರಲ್ ಆಗಿತ್ತು. ಪ್ರಧಾನಿ ಮೋದಿ, ಬಿಜೆಪಿ ವಿರೋಧಿಗಳು, ಕಾಂಗ್ರೆಸ್ ಬೆಂಬಲಿಗರು, ಟಿಎಂಸಿ ನಾಯಕಿ ಸೇರಿದಂತೆ ಹಲವರು ಇದೇ ಟ್ವೀಟ್ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯಿಂದ 8 ನಿವೃತ್ತ ಅಧಿಕಾರಿಗಳು ಕತಾರ್ ಜೈಲು ಶಿಕ್ಷೆಯಿಂದ ಪಾರಾಗಿಲ್ಲ. ಇದಕ್ಕೆ ಶಾರುಖ್ ಖಾನ್ ಕಾರಣ. ಅಸಮರ್ಥ ಸರ್ಕಾರ ಆಡಳಿತದಲ್ಲಿ ಸಮರ್ಥವಾಗಿ ತನ್ನ ಶಕ್ತಿ ಬಳಸಿ ಅಧಿಕಾರಿಗಳನ್ನು ಬಿಡುಗಡೆಗೊಳಿಸಿದ ಶಾರುಖ್ ಖಾನ್‌ಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಬೆಂಬಲಿಗರ ಅಧಿಕೃತ ಟ್ವಿಟರ್, ಟಿಎಂಸಿ ನಾಯಕಿ ಸೇರಿದಂತೆ ಇತರ ನಾಯಕರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.
ಇದೀಗ ಸ್ಪಷ್ಟನೆ ಹೊರಬೀಳುತ್ತಿದ್ದಂತೆ ಒಬ್ಬೊಬ್ಬರಾಗಿ ಟ್ವೀಟ್ ಡಿಲೀಟ್ ಮಾಡುತ್ತಿದ್ದಾರೆ. ಇತ್ತ ತಮಗೂ ಮಾಜಿ ಅಧಿಕಾರಿಗಳ ಬಿಡುಗಡೆಗೂ, ಅಥವಾ ಶಾರುಖ್ ಖಾನ್‌ಗೂ ಸಂಬಂಧವೇ ಇಲ್ಲದಂತೆ ಬೇರೆ ಬೇರೆ ವಿಚಾರಗಳ ಟ್ವೀಟ್ ಮಾಡುತ್ತಿದ್ದಾರೆ.