RRR: ಹೀಗೆಲ್ಲಾ ಮಾಡಿ ಇವ್ರಿಗೆ ಆಸ್ಕರ್ ಬೇಕಾ ಎಂದ ಖ್ಯಾತ ನಿರ್ದೇಶಕ!
ಆರ್ಆರ್ಆರ್ ಚಿತ್ರತಂಡ ಆಸ್ಕರ್ ಗೆಲ್ಲುವ ತವಕದಲ್ಲಿದೆ. ಇದೇ ಸಂದರ್ಭದಲ್ಲಿ ತೆಲುಗುವಿನ ಖ್ಯಾತ ನಿರ್ದೇಶಕ ತಮ್ಮಾರೆಡ್ಡಿ ಭಾರದ್ವಾಜ ಗಂಭೀರ ಆರೋಪ ಮಾಡಿದ್ದಾರೆ. ಏನದು ಆರೋಪ?
ಆಸ್ಕರ್ (Oscar) ಪ್ರಶಸ್ತಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿ ಆಸ್ಕರ್ ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಭರವಸೆಯಲ್ಲಿದೆ ಆರ್.ಆರ್.ಆರ್ (RRR) ಚಿತ್ರತಂಡ. ತಂಡ ಇದಾಗಲೇ ಅಮೆರಿಕಕ್ಕೆ ಹಾರಿದೆ. ಈ ಪ್ರಶಸ್ತಿಯಲ್ಲಿ ಭಾಗಿಯಾಗಲು ಹಲವು ನಿಯಮಗಳಿದ್ದು ಆ ಎಲ್ಲ ನಿಯಮಗಳನ್ನು ಪೂರೈಸಿ, ಇದೀಗ ಅಂತಿಮ ಹಂತವನ್ನೂ ಅದು ತಲುಪಿದೆ. ಮಾರ್ಚ್ 12ರಂದು ನಡೆಯಲಿರೋ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'RRR' ಸಿನಿಮಾದ 'ನಾಟು.. ನಾಟು..' ಹಾಡು ಪ್ರಶಸ್ತಿ ಗೆಲ್ಲುತ್ತಾ ಎನ್ನುವ ಕುತೂಹಲ ಎಲ್ಲೆಡೆ ಮನೆಮಾಡಿದೆ. ಪ್ರಶಸ್ತಿ ಘೋಷಣೆ ಮತ್ತು ಪ್ರದಾನ ಸಮಾರಂಭದಲ್ಲಿ ವೇದಿಕೆಯ ಮೇಲೆ ಆರ್.ಆರ್.ಆರ್ ಚಿತ್ರದ ನಾಯಕರಾದ ಜ್ಯೂನಿಯರ್ ಎನ್.ಟಿ.ಆರ್ (Jr. NTR,) ಹಾಗೂ ರಾಮ್ ಚರಣ್ (Ram Charan) ‘ನಾಟು ನಾಟು’ ಗೀತೆಗೆ ಹೆಜ್ಜೆ ಹಾಕಲಿದ್ದಾರೆ. 'RRR' ತಂಡ ಮಾತ್ರ ಆಸ್ಕರ್ ಪ್ರಶಸ್ತಿ ಗೆಲ್ಲಲು ಮಾಡಬೇಕಿರೋ ಎಲ್ಲಾ ಕಸರತ್ತುಗಳನ್ನು ಮಾಡುತ್ತಿದೆ. ಕೆಲ ತಿಂಗಳಿಂದ ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಸೇರಿ ಇಡೀ ತಂಡ ಸಿನಿಮಾ ಬಗ್ಗೆ ಪ್ರಚಾರವನ್ನು ಮಾಡುತ್ತಿದೆ.
ಅಂದಹಾಗೆ ಇತ್ತೀಚೆಗೆ 'RRR' ಸಿನಿಮಾವನ್ನು ಅಮೆರಿಕದ ಹಲವು ಭಾಗಗಳಲ್ಲಿ ಮರು ಬಿಡುಗಡೆಯನ್ನು ಮಾಡಲಾಗಿತ್ತು. ಈಗ ತೆಲುಗು ಹಿರಿಯ ನಿರ್ದೇಶಕರೊಬ್ಬರು ರಾಜಮೌಳಿ ಹಾಗೂ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತೆಲುಗು ಸಿನಿಮಾ ನಿರ್ದೇಶಕ ತಮ್ಮಾರೆಡ್ಡಿ ಭಾರದ್ವಾಜ್ (Tammareddy Bharadwaj) ಈ ಆರೋಪ ಮಾಡಿದ್ದಾರೆ. ತಮ್ಮಾರೆಡ್ಡಿ ಅವರ ಆರೋಪ ಇರುವುದು ಆಸ್ಕರ್ ಪ್ರಚಾರಕ್ಕೆ ಮಾಡಿರುವ ಕೋಟಿ ಕೋಟಿ ಹಣದ ಬಗ್ಗೆ! ಆಸ್ಕರ್ ಪ್ರಶಸ್ತಿಯನ್ನು ಪಡೆಯಲೆಂದು ಆರ್.ಆರ್.ಆರ್ ಚಿತ್ರದ ನಿರ್ದೇಶಕ ರಾಜಮೌಳಿ (Rajamouli) 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 'RRR' ತಂಡ ಆಸ್ಕರ್ ಪ್ರಶಸ್ತಿ ಗೆಲ್ಲಲು ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಅಮೆರಿಕದಲ್ಲಿ ಸಿಕ್ಕಾ ಹಣವನ್ನು ಸುರಿಯುತ್ತಿದೆ . ಈ ಮೊತ್ತದಲ್ಲಿ ನಾನು 8-10 ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದಾರೆ.
ಉಕ್ರೇನ್‌ನಲ್ಲಿ ನಡೆದಿತ್ತು 'ನಾಟು ನಾಟು' ಚಿತ್ರೀಕರಣ, ಶ್ರಮವಿತ್ತು ಪೂರ್ಣ
‘ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು ತಂಡ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಎಂಬತ್ತು ಕೋಟಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸಿನಿಮಾ ಬಿಡುಗಡೆ, ಪ್ರಚಾರ, ತಂಡದ ಖರ್ಚು ಮತ್ತು ಆಸ್ಕರ್ ಪ್ರಶಸ್ತಿಗಾಗಿ ಮಾಡಬೇಕಾದ ಖರ್ಚು ಹೀಗೆ ಕೋಟಿ ಕೋಟಿ ಸುರಿದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?’ ಎಂದು ಅವರು ತಮ್ಮಾರೆಡ್ಡಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ.
ಬರೀ ವಿಮಾನದ ಟಿಕೆಟ್‌ಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಅದೆಲ್ಲ ಈಗ ಚರ್ಚೆ ಮಾಡೋ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿರುವ ಅವರು, ಕನ್ನಡದ ಕೆಜಿಎಫ್ 2 ಚಿತ್ರಕ್ಕೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆಸ್ಕರ್ ಪ್ರಶಸ್ತಿಗಾಗಿ RRR ತಂಡ 80 ಕೋಟಿ ಖರ್ಚು ಮಾಡಿದೆ. ಇಪ್ಪತ್ತು ಕೋಟಿ ಸೇರಿಸಿದ್ದರೆ ಮತ್ತೊಂದು ಕೆಜಿಎಫ್ ಮಾದರಿಯ ಚಿತ್ರ ಮಾಡಬಹುದಿತ್ತು ಎಂದು ತಮ್ಮಾರೆಡ್ಡಿ ಕಿಡಿ ಕಾರಿದ್ದಾರೆ. 'RRR' ಸಿನಿಮಾವನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆ ನೋಡಿದರೆ, ಕೆಜಿಎಫ್ 2 (KGF 2) ಸಿನಿಮಾದ ಬಜೆಟ್ 100 ಕೋಟಿ ರೂ. ಈ ಆಸ್ಕರ್ ಪ್ರಚಾರಕ್ಕೆ 'ಕೆಜಿಎಫ್ 2' ಬಜೆಟ್‌ಗಿಂತ ಕೇವಲ 20 ಕೋಟಿ ರೂ. ಕಡಿಮೆಯಷ್ಟೇ ಖರ್ಚು ಮಾಡಿದ್ದಾರೆ" ಎಂದು ತಿಮ್ಮಾರೆಡ್ಡಿ ಆರೋಪಿಸಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆಗುತ್ತಿದೆ.
Oscars 2023: ಕೊನೆಗೂ US ಫ್ಲೈಟ್ ಹತ್ತಿದ RRR ಸ್ಟಾರ್ ಜೂ.ಎನ್ ಟಿ ಆರ್