"ನಮ್ಮ ಮದುವೆ ನಿಶ್ಚಯವಾದಾಗ ಅದು ಕೇವಲ ನನ್ನ ತಂದೆ-ತಾಯಿಗೆ ಮಾತ್ರ ತಿಳಿದಿತ್ತು. ವರನ ಹೆಸರು ಕೂಡ ಯಾರಿಗೂ ಗೊತ್ತಿರಲಿಲ್ಲ. ನನ್ನ ಮೆಹೆಂದಿ ಕಾರ್ಯಕ್ರಮ ನಡೆಯುವಾಗ ಮೆಹೆಂದಿ ಹಚ್ಚುವ ಕಲಾವಿದೆ ವರನ ಹೆಸರನ್ನು ಕೇಳಿದರು. ನಾನು ಅದನ್ನು ಖಾಲಿ ಬಿಡಿ, ಮುಂದಿನ ಬಾರಿ ಬರೆಯೋಣ ಎಂದು ಹೇಳಿದ್ದೆ..'
ಸನಾ ಖಾನ್ ಸೀಕ್ರೆಟ್ ಸ್ಟೋರಿ!
ಬಾಲಿವುಡ್‌ನ ಗ್ಲಾಮರ್ ಲೋಕ, ಕಣ್ಸೆಳೆಯುವ ಬಣ್ಣದ ಬದುಕು ಮತ್ತು ಹಣ-ಹೇಸರು ಎಲ್ಲವನ್ನೂ ಬಿಟ್ಟು ಅಧ್ಯಾತ್ಮದ ಹಾದಿ ಹಿಡಿದ ನಟಿ ಸನಾ ಖಾನ್ (Sana Khan) ಅವರ ನಿರ್ಧಾರ ಇಂದಿಗೂ ಸಿನಿಕೌತುಕವೇ ಸರಿ. 'ಜೈ ಹೋ', 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಮತ್ತು 'ಸ್ಪೆಷಲ್ ಓಪಿಎಸ್' ನಂತಹ ಸೂಪರ್ ಹಿಟ್ ಚಿತ್ರ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿ ಮಿಂಚಿದ್ದ ಸನಾ ಖಾನ್, 2020ರಲ್ಲಿ ಇದ್ದಕ್ಕಿದ್ದಂತೆ ಚಿತ್ರರಂಗಕ್ಕೆ ವಿದಾಯ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ಚರ್ಚೆ ನಡೆಯುತ್ತಲೇ ಇರುತ್ತದೆ.
ಕನ್ನಡದ ಕೂಲ್ ಚಿತ್ರದಲ್ಲಿ ನಟಿಸಿದ್ದ ನಟಿ!
ವಿಶೇಷವಾಗಿ, ಸನಾ ಖಾನ್ ಅವರು ಮುಫ್ತಿ ಅನಾಸ್ ಸಯದ್ ಅವರನ್ನು ಮದುವೆಯಾದ ನಂತರ, ಅವರ ಪತಿ ಅವರನ್ನು "ಬ್ರೈನ್ ವಾಶ್" ಮಾಡಿ ಚಿತ್ರರಂಗದಿಂದ ಹೊರಬರುವಂತೆ ಮಾಡಿದ್ದಾರೆ ಎಂಬ ಗಾಸಿಪ್‌ಗಳು ಜೋರಾಗಿದ್ದವು. ಈಗ ಈ ಎಲ್ಲಾ ಆರೋಪಗಳಿಗೆ ಸನಾ ಖಾನ್ ಖಡಕ್ ಉತ್ತರ ನೀಡಿದ್ದಾರೆ. ಇತ್ತೀಚೆಗೆ ನಟಿ ರಶ್ಮಿ ದೇಸಾಯಿ ಅವರೊಂದಿಗೆ ಮಾತನಾಡಿದ ಸನಾ, ತಮ್ಮ ಜೀವನದ ಮಹತ್ವದ ತಿರುವುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ನಟಿ ಸನಾ ಖಾನ್ ಅವರಿಗೆ ಕನ್ನಡ ಚಿತ್ರರಂಗದ ನಂಟು ಕೂಡ ಇದೆ. ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ 'ಕೂಲ್' ಚಿತ್ರಕ್ಕೆ ಇದೇ ಸನಾ ಖಾನ್ ನಾಯಕಿಯಾಗಿದ್ದರು.
ರಹಸ್ಯವಾಗಿ ನಡೆದಿದ್ದ ಮದುವೆ!
ಸನಾ ಖಾನ್ ತಮ್ಮ ಮದುವೆಯ ಬಗ್ಗೆ ಮಾತನಾಡುತ್ತಾ, ಆ ದಿನಗಳು ಎಷ್ಟು ರಹಸ್ಯವಾಗಿದ್ದವು ಎಂಬುದನ್ನು ನೆನಪಿಸಿಕೊಂಡರು. "ನಮ್ಮ ಮದುವೆ ನಿಶ್ಚಯವಾದಾಗ ಅದು ಕೇವಲ ನನ್ನ ತಂದೆ-ತಾಯಿಗೆ ಮಾತ್ರ ತಿಳಿದಿತ್ತು. ವರನ ಹೆಸರು ಕೂಡ ಯಾರಿಗೂ ಗೊತ್ತಿರಲಿಲ್ಲ. ನನ್ನ ಮೆಹೆಂದಿ ಕಾರ್ಯಕ್ರಮ ನಡೆಯುವಾಗ ಮೆಹೆಂದಿ ಹಚ್ಚುವ ಕಲಾವಿದೆ ವರನ ಹೆಸರನ್ನು ಕೇಳಿದರು. ಆದರೆ ನಾನು ಅದನ್ನು ಖಾಲಿ ಬಿಡಿ, ಮುಂದಿನ ಬಾರಿ ಬರೆಯೋಣ ಎಂದು ಹೇಳಿದ್ದೆ," ಎಂದು ಅವರು ಅಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಅವರ ಸ್ವಂತ ಸೋದರ ಸಂಬಂಧಿಗಳಿಗೂ ಈ ಮದುವೆಯ ವಿಷಯ ತಿಳಿದಿರಲಿಲ್ಲವಂತೆ!
ಬ್ರೈನ್ ವಾಶ್ ಆರೋಪಕ್ಕೆ ಸನಾ ತಿರುಗೇಟು
ತಮ್ಮ ಪತಿ ಅನಾಸ್ ಸಯದ್ ಅವರ ಬಗ್ಗೆ ಕೇಳಿಬಂದ ಟೀಕೆಗಳಿಗೆ ಉತ್ತರಿಸಿದ ಸನಾ, "ಜನರು ಹೇಳುವಂತೆ ಯಾರೂ ಯಾರನ್ನೂ ಬ್ರೈನ್ ವಾಶ್ ಮಾಡಲು ಸಾಧ್ಯವಿಲ್ಲ. ಈ ಬದಲಾವಣೆ ನನ್ನ ಒಳಗಿನಿಂದ ಬಂದಿದ್ದು. ನಾನು ಚಿತ್ರರಂಗದಲ್ಲಿದ್ದಾಗಲೇ ನನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿದ್ದವು. ನಾನು ಸಂಪೂರ್ಣವಾಗಿ ಬೇರೆ ವ್ಯಕ್ತಿಯಾಗಿ ಬದಲಾಗುತ್ತಿದ್ದೆ. ಇದು ನನ್ನ ಪತಿ ಮಾಡಿದ ಬದಲಾವಣೆಯಲ್ಲ, ಬದಲಾಗಿ ನಾನು ನನಗಾಗಿ ಬಯಸಿದ ಹಾದಿ. ಅವರು ಕೇವಲ ನನಗೆ ಸರಿಯಾದ ಮಾರ್ಗದರ್ಶನ ನೀಡಿದರು ಅಷ್ಟೇ," ಎಂದು ಸ್ಪಷ್ಟಪಡಿಸಿದ್ದಾರೆ.
ಶಾಂತಿಯ ಹುಡುಕಾಟದಲ್ಲಿದ್ದ ನಟಿ
ಬಾಲಿವುಡ್ ತೊರೆಯಲು ಕಾರಣವೇನು ಎಂಬ ಪ್ರಶ್ನೆಗೆ ಸನಾ ಖಾನ್ ಅವರು ನೀಡಿದ ಉತ್ತರ ಎಲ್ಲರ ಗಮನ ಸೆಳೆದಿದೆ. "ಒಬ್ಬ ವ್ಯಕ್ತಿಗೆ ಹಣ, ಹೆಸರು, ಕೀರ್ತಿ ಮತ್ತು ಗೌರವ ಎಲ್ಲವೂ ಸಿಗಬಹುದು. ಆದರೆ ಅಂತಿಮವಾಗಿ ಪ್ರತಿಯೊಬ್ಬರೂ ಹುಡುಕುವುದು ಮನಸ್ಸಿನ ಶಾಂತಿಯನ್ನು (Inner Peace). ನನಗೆ ಆ ಶಾಂತಿ ಚಿತ್ರರಂಗದಲ್ಲಿ ಸಿಗಲಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರ ಸರಿಯಿಲ್ಲದಿದ್ದಾಗ ನಾವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕಾಲ ಕಳೆದಂತೆ ನನಗೆ ಜೀವನದ ಮೌಲ್ಯಗಳು ಅರ್ಥವಾದವು. ಅದಕ್ಕಾಗಿಯೇ ನಾನು ಈ ಹಾದಿಯನ್ನು ಆರಿಸಿಕೊಂಡೆ," ಎಂದು ಸನಾ ಭಾವನಾತ್ಮಕವಾಗಿ ನುಡಿದರು.
ಪತಿಯ ಬಗ್ಗೆ ಹೆಮ್ಮೆಯ ಮಾತುಗಳು
ತಮ್ಮ ಪತಿ ಅನಾಸ್ ಸಯದ್ ಅವರನ್ನು ಶ್ಲಾಘಿಸಿದ ಸನಾ, "ನನ್ನ ಪತಿಗಿಂತ ಉತ್ತಮ ವ್ಯಕ್ತಿ ನನಗೆ ಸಿಗಲು ಸಾಧ್ಯವೇ ಇರಲಿಲ್ಲ ಎಂದು ನಾನು ಅವರಿಗೆ ಯಾವಾಗಲೂ ಹೇಳುತ್ತಿರುತ್ತೇನೆ. ಚಿತ್ರರಂಗ ಬಿಡುವ ನಿರ್ಧಾರ ಕಷ್ಟವಾಗಿತ್ತು, ಆದರೆ ನಾನು ಅದನ್ನು ಧೈರ್ಯದಿಂದ ಮಾಡಿದೆ," ಎಂದಿದ್ದಾರೆ. ಮದುವೆಯ ಖರ್ಚಿನ ಬಗ್ಗೆಯೂ ಮಾಹಿತಿ ನೀಡಿದ ಅವರು, ಮೆಹೆಂದಿ ಖರ್ಚನ್ನು ಮಾತ್ರ ತಾವು ಭರಿಸಿದ್ದಾಗಿ ಮತ್ತು ನಿಖಾ, ಊಟ, ವಸತಿ ಸೇರಿದಂತೆ ಉಳಿದೆಲ್ಲಾ ಖರ್ಚುಗಳನ್ನು ಅವರ ಪತಿಯೇ ನೋಡಿಕೊಂಡಿದ್ದಾಗಿ ತಿಳಿಸಿದರು.
ಒಟ್ಟಿನಲ್ಲಿ, ಸನಾ ಖಾನ್ ಅವರ ಈ ಮಾತುಗಳು ಟ್ರೋಲ್ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದು, ತಾನು ಸ್ವಇಚ್ಛೆಯಿಂದ ಮತ್ತು ಮನಸ್ಸಿನ ಶಾಂತಿಗಾಗಿ ಈ ಹೊಸ ಜೀವನವನ್ನು ಆಯ್ದುಕೊಂಡಿದ್ದೇನೆ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ. ಸದ್ಯ ಸನಾ ಖಾನ್ ತಮ್ಮ ವೈವಾಹಿಕ ಜೀವನ ಮತ್ತು ಸಾಮಾಜಿಕ ಸೇವೆಗಳಲ್ಲಿ ಬ್ಯುಸಿಯಾಗಿದ್ದು, ಹಳೆಯ ಗ್ಲಾಮರ್ ಲೋಕಕ್ಕಿಂತ ಈ ಅಧ್ಯಾತ್ಮದ ಬದುಕೇ ತಮಗೆ ನೆಮ್ಮದಿ ನೀಡಿದೆ ಎನ್ನುತ್ತಾರೆ.


