ಸೈಫ್ ಅಲಿ ಖಾನ್ ಚೂರಿ ಇರಿತ ಪ್ರಕರಣ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ದಾಳಿಕೋರನ ಗುರುತು, ಸೈಫ್ ಆಸ್ಪತ್ರೆಗೆ ಆಟೋದಲ್ಲಿ ಹೋದ ಸಂಗತಿ, ಶೀಘ್ರ ಗುಣಮುಖತೆ, ವೈರಲ್ ಫೋಟೋಗಳ ಸತ್ಯಾಸತ್ಯತೆ ಚರ್ಚೆಯಲ್ಲಿದೆ. ₹25 ಲಕ್ಷದ ನಗದುರಹಿತ ವಿಮಾ ಪರಿಕ್ಷೆಗೆ ಅನುಮೋದನೆ ವಿವಾದಕ್ಕೆ ಕಾರಣವಾಗಿದ್ದು, ಎಫ್‌ಐಆರ್ ಇಲ್ಲದೆ ಅನುಮೋದನೆ ನೀಡಿದ್ದೇಕೆ ಎಂದು ವೈದ್ಯಕೀಯ ಸಂಘ ಪ್ರಶ್ನಿಸಿದೆ.
ಇದೇ 15ರಂದು ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಚೂರಿ ಇರಿತದ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ರಿಯಲ್ಲೋ, ರೀಲೋ ಎನ್ನುವ ಚರ್ಚೆ ಶುರುವಾಗಿದೆ. ಘಟನೆ ನಡೆದಿದೆ ಎಂದ ಕ್ಷಣದಿಂದ ಹಿಡಿದು, ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು, ಮನೆಯಲ್ಲಿ ಅಷ್ಟೆಲ್ಲಾ ಕಾರುಗಳಿದ್ದರೂ, ಚಾಲಕರು ಇದ್ದರೂ ಆಟೋದಲ್ಲಿ ಹೋಗಿದ್ದು, ಅದಕ್ಕೆ ಒಂದಿಷ್ಟು ಕಾರಣಗಳನ್ನು ನೀಡಿದ್ದು, ಇಷ್ಟು ದೊಡ್ಡ ಚೂರಿ ದೇಹದಿಂದ ತೆಗೆಯಲಾಗಿದೆ ಎನ್ನುವ ಫೋಟೋ ವೈರಲ್ ಆಗಿದ್ದು, ಅದನ್ನು ನೋಡಿದರು ಅಬ್ಬಬ್ಬಾ ನಟನಿಗೆ ಇದ್ಯಾವ ಪರಿಯಲ್ಲಿ ಗಾಯವಾಗಿದೆ ಎಂದು ಶಾಕ್ಗೆ ಒಳಗಾಗುತ್ತಿರುವಾಗಲೇ ಆಸ್ಪತ್ರೆಯಿಂದ ಏನೂ ಆಗಿಲ್ಲ ಎನ್ನುವಂತೆ ಶೀಘ್ರದಲ್ಲಿಯೇ ನಟ ಡಿಸ್ಚಾರ್ಜ್ ಆಗಿದ್ದು, ವಾಪಸ್ ಬಂದು ಮಾಮೂಲಿನಂತೆಯೇ ಆಟೋ ಡ್ರೈವರ್ಗೆ ಸಿಕ್ಕಿದ್ದು ಇವೆಲ್ಲವೂ ಬಹು ಚರ್ಚಿತ ವಿಷಯ ಆಗಿರುವ ನಡುವೆಯೇ, ಇದೀಗ ವಿಮಾ ಕಂಪೆನಿ ವಿರುದ್ಧ ಭಾರಿ ವಿವಾದ ಹುಟ್ಟಿಕೊಂಡಿದೆ!
ವಿಮಾ ಕಂಪೆನಿಯ ವಿವಾದವನ್ನು ನೋಡುವ ಮೊದಲು, ಸೈಫ್ ಮೇಲೆ ದಾಳಿ ಮಾಡಿದವನ ಕುರಿತು ಇದೀಗ ಬಂದಿರುವ ಹೊಸ ಅಪ್ಡೇಟ್ ನೋಡುವುದಾದರೆ, ಪೊಲೀಸರು ಹಿಡಿದ ವ್ಯಕ್ತಿ ಹಾಗೂ ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿ ಬೇರೆ ಬೇರೆ ಎನ್ನುವ ಮಾಹಿತಿ ಸಿಕ್ಕಿದೆ. ಸಿಸಿಟಿವಿಯಲ್ಲಿ ಇರುವವ ನಮ್ಮ ಮಗನಲ್ಲ ಎಂದು ಸೆರೆಯಾಗಿರುವ ಯುವಕನ ಅಪ್ಪ ಹೇಳಿದ್ದಾರೆ. ಅವರು ಒಂದು ವೇಳೆ ಸುಳ್ಳು ಹೇಳುತ್ತಿದ್ದಾರೆ ಎಂದು ಭಾವಿಸಿದರೂ, ಅವರಿಬ್ಬರ ಫಿಂಗರ್ಪ್ರಿಂಟ್ ಮ್ಯಾಚ್ ಆಗದೇ ಇರುವುದು ಇದಕ್ಕೆ ಪುಷ್ಟಿ ನೀಡಿದೆ. ಅದೇನೋ ಸರಿ, ಒಂದು ವೇಳೆ ಅರೆಸ್ಟ್ ಆದ ವ್ಯಕ್ತಿ ಅಸಲಿ ಅಪರಾಧಿ ಅಲ್ಲದಿದ್ದರೆ, ತಾನು ಸೈಫ್ ಅಲಿ ಮನೆಗೆ ಗೊತ್ತಿಲ್ಲದೇ ಹೋಗಿರುವುದಾಗಿ ಆರೋಪಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ವಿವರಣೆ ನೀಡಿದ್ದರು. ಸೈಫ್ ಮನೆಗೆ ಹೋಗಿರುವ ವ್ಯಕ್ತಿ ಆತ ಅಲ್ಲ ಅಂದ ಮೇಲೆ ಅವನು ಹೇಳಿಕೆ ಕೊಡಲು ಹೇಗೆ ಸಾಧ್ಯ? ಈ ವಿಷಯದಲ್ಲಿ ಪೊಲೀಸರು ಸುಳ್ಳು ಹೇಳಿದ್ರಾ ಎನ್ನುವ ಚರ್ಚೆ ಶುರುವಾಗಿದೆ!
ಸೈಫ್ ಮನೆಯೆಂದು ಗೊತ್ತಿಲ್ದೇ ನುಗ್ಗಿದ್ನಂತೆ ಕಳ್ಳ! ಪೊಲೀಸರಿಗೆ ಪರೋಟಾ ಸಾಕ್ಷಿ- ಖದೀಮ ಸಿಕ್ಕಿಬಿದ್ದದ್ದೇ ರೋಚಕ...
ಸೆಲೆಬ್ರಿಟಿಗಳ ಮನೆಯಲ್ಲಿ ಚಾಲಕ ಇರುವುದಿಲ್ಲವೆ ಎಂದು ಆರಂಭದಲ್ಲಿ ಈ ಬಗ್ಗೆ ಪ್ರಶ್ನೆಗಳು ಮೂಡಿಬಂದಿದ್ದವು. ಅಪ್ಪನಿಗೆ ಈ ಪರಿ ಇರಿತ ಆದಾಗ ಮಗನಿಗೆ ದಿಕ್ಕೇ ತೋಚುವುದಿಲ್ಲ, ಆ ಸಮಯದಲ್ಲಿ ಕಾರು ಓಡಿಸುವುದು ಸೇಫ್ ಅಲ್ಲ ಎಂಬ ಹೇಳಿಕೆ ನಿಜವಾಗಿರಬಹುದು, ಅದು ಸಹಜ ಕೂಡ. ಆದರೆ, ಕಾರು ಚಾಲಕ ಇರಲಿಲ್ಲವಾ? ರಸ್ತೆಗೆ ಹೋಗಿ ಆಟೋ ಮಾಡಿಸುವಷ್ಟು ಸಾಮಾನ್ಯ ಮನುಷ್ಯರಾ ಸೈಫ್ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಒಂದು ವೇಳೆ ಆಟೋದಲ್ಲಿ ಹೋಗಿದ್ದರೂ, ಅಲ್ಲಿ ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ವಿಶೇಷ ರೀತಿಯಲ್ಲಿ ಟ್ರೀಟ್ಮೆಂಟ್ ದೊರೆತಿದ್ದರೆ ಅದೇನೂ ಅಚ್ಚರಿಯಲ್ಲ. ಆದರೆ ಎಷ್ಟೋ ಕಡೆ ಇರಿತ, ಇಷ್ಟುದ್ದದ ಚೂರಿಯನ್ನು ತೆಗೆದಿರುವ ಫೋಟೋ... ಇವೆಲ್ಲಾ ವೈರಲ್ ಆಗಿದ್ದು ಸುಳ್ಳಾ? ಸೈಫ್ ಸ್ಥಿತಿ ಗಂಭೀರವಾಗಿದೆ ಎಂದು ಆರಂಭದಲ್ಲಿ ವೈದ್ಯರು ಹೇಳಿದ್ದು ನೋಡಿದರೆ, ಸಾಮಾನ್ಯ ಮನುಷ್ಯ ಅಷ್ಟು ಬೇಗ ವಾಸಿಯಾಗಲು ಸಾಧ್ಯವಿಲ್ಲ, ಅದೂ ಅಷ್ಟು ದೊಡ್ಡ ಚೂರಿ ದೇಹದಲ್ಲಿ ಹೊಕ್ಕಿರುವಾಗ? ಹೀರೋ ಆಗಿದ್ದರೆ ಸಿನಿಮಾದಲ್ಲಿ ಆಗಿರಬಹುದು, ನಿಜ ಜೀವನದಲ್ಲಿಯೂ ಹೀರೋ ಎಂದು ವೈದ್ಯರೇ ಹಾಡಿ ಹೊಗಳಿದ್ದರೂ ಅಷ್ಟು ಬೇಗ ಡಿಸ್ಚಾರ್ಜ್ ಆಗಿ ಅಷ್ಟು ಸುಲಭದಲ್ಲಿ ಓಡಾಟ ಮಾಡಲು ಸಾಧ್ಯವೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇವುಗಳ ನಡುವೆಯೇ ಇದೀಗ, ಅವರಿಗೆ 25 ಲಕ್ಷ ರೂಪಾಯಿಗಳ ನಗದುರಹಿಸ ಚಿಕಿತ್ಸಾ ಕ್ಲೇಮ್ಗೆ ಅನುಮೋದನೆ ದೊರೆತಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ. ಸುಮಾರು 14 ಸಾವಿರದಷ್ಟು ವೈದ್ಯಕೀಯ ವೃತ್ತಿಪರರನ್ನು ಪ್ರತಿನಿಧಿಸುವ ಅಸೋಸಿಯೇಷನ್ ಆಫ್ ಮೆಡಿಕಲ್ ಕನ್ಸಲ್ಟೆಂಟ್ಸ್ (AMC), ಈಗ ಈ ಬಗ್ಗೆ ತಕರಾರು ತೆಗೆದಿದೆ. ಸೈಫ್ ಅವರಿಗೆ ಅಷ್ಟು ಬೇಗ ಅನುಮೋದನೆ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದೆ. ಮಾತ್ರವಲ್ಲದೇ ಈ ಬಗ್ಗೆ ಎಎಂಸಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ತನಿಖೆಗೆ ಆದೇಶಿಸಿರುವುದಾಗಿ ಕರೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಅಷ್ಟಕ್ಕೂ ಇದು ವಿವಾದಕ್ಕೆ ಕಾರಣವಾಗಿದ್ದು ಏಕೆಂದರೆ, ಇಂಥ ಪ್ರಕರಣಗಳಲ್ಲಿ ನಿಯಮಾನುಸಾರ ಮೊದಲು ಎಫ್‌ಐಆರ್ ದಾಖಲಾಗಬೇಕು. ವೈದ್ಯಕೀಯ ಕಾನೂನು ಪ್ರಕರಣಗಳಲ್ಲಿ ಎಫ್‌ಐಆರ್ ಪ್ರತಿಯಂತಹ ಹೆಚ್ಚುವರಿ ದಾಖಲೆಗಳನ್ನು ನೀಡಬೇಕು. ಆದರೆ, ಸೈಫ್ ಪ್ರಕರಣದಲ್ಲಿ ಏಕಾಏಕಿ ಅನುಮೋದನೆ ನೀಡಿರುವುದು ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ. FIR ಪ್ರತಿ ಇಲ್ಲದೇ ನಗದುರಹಿತ ವಿನಂತಿಯನ್ನು ತಕ್ಷಣವೇ ಅನುಮೋದಿಸಿರುವುದು ಹೇಗೆ ಎಂದು ಪ್ರಶ್ನಿಸಲಾಗಿದೆ.
