ಅಪತ್ಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕನ ತಬ್ಬಿಕೊಂಡು ಧನ್ಯವಾದ ಹೇಳಿದ ಸೈಫ್ ಅಲಿ ಖಾನ್
ಸೈಫ್ ಅಲಿ ಖಾನ್ ಅವರ ಮೇಲೆ ನಡುರಾತ್ರಿ ಅಪರಿಚಿತ ದುಷ್ಕರ್ಮಿ ಚಾಕುವಿನಿಂದ ದಾಳಿ ನಡೆಸಿದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನನ್ನು ನಟ ಮನೆಗೆ ಕರೆಸಿ ಕ್ಷೇಮ ವಿಚಾರಿಸಿ ಅವರನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ.

ಸೈಫ್ ಅಲಿ ಖಾನ್ ಅವರ ಮೇಲೆ ನಡುರಾತ್ರಿ ಅಪರಿಚಿತ ದುಷ್ಕರ್ಮಿ ಚಾಕುವಿನಿಂದ ದಾಳಿ ನಡೆಸಿದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನನ್ನು ನಟ ಮನೆಗೆ ಕರೆಸಿ ಕ್ಷೇಮ ವಿಚಾರಿಸಿ ಅವರನ್ನು ತಬ್ಬಿಕೊಂಡು ಧನ್ಯವಾದ ಹೇಳಿದ್ದಾರೆ. ದುಷ್ಕರ್ಮಿಯ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ತಮ್ಮ ಪುಟ್ಟ ಮಗ ತೈಮೂರ್ ಹಾಗೂ ಇಬ್ರಾಹಿಂ ಜೊತೆ ಆಟೋದಲ್ಲಿ ಲೀಲಾವತಿ ಆಸ್ಪತ್ರೆಗೆ ಹೋಗಿದ್ದರು. ಜನವರಿ 16ರಂದು ಅವರ ಮನೆಗೆ ನುಗ್ಗಿದ ಆಗಂತುಕನಿಂದ ಚೂರಿ ಇರಿತಕ್ಕೊಳಗಾದ ಸೈಫ್ ಅಲಿ ಖಾನ್ ಅವರನ್ನು ಆಟೋ ಚಾಲಕ ಭಜನ್ ಸಿಂಗ್ ರಾಣಾ ಎಂಬುವವರು ಲೀಲಾವತಿ ಆಸ್ಪತ್ರೆಗೆ ತಮ್ಮ ಆಟೋದಲ್ಲಿ ಕರೆದುಕೊಂಡು ಹೋಗಿದ್ದರು. ಇದಾದ ನಂತರ ಸೈಫ್ ಅಲಿ ಖಾನ್ ಅವರಿಗೆ ಆಸ್ಪತ್ರೆಯಲ್ಲಿ 2 ಶಸ್ತ್ರಚಿಕಿತ್ಸೆ ನಡೆದಿದ್ದು, ಅವರು ನಿನ್ನೆಯಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಇದಾದ ನಂತರ ಸೈಫ್ ಅಲಿ ಖಾನ್ ಅವರು ತಮ್ಮನ್ನು ಆಸ್ಪತ್ರೆಗೆ ಸೇರಿಸಿದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ಭೇಟಿಯಾಗಿದ್ದು, ಆತನ ಹೆಗಲಿಗೆ ಕೈ ಹಾಕಿ ನಗುತ್ತಾ ನಿಂತಿರುವ ಸೈಫ್ ಆಲಿ ಖಾನ್ ಫೋಟೋ ವೈರಲ್ ಆಗಿದೆ. ದಾಳಿಯ ನಂತರ ಲೀಲಾವತಿ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಚಿಕಿತ್ಸೆ ಪಡೆದಿರುವ ಸೈಫ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ದಾಳಿಯ ನಂತರ ಸೈಫ್ ಅಲಿಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರಿಗೆ ತಾನು ಆಸ್ಪತ್ರೆಗೆ ಕರೆದೊಯ್ದಿದ್ದು, ಓರ್ವ ನಟನನ್ನು ಎಂಬುದು ಗೊತ್ತಿರಲಿಲ್ಲ. ಆದರೆ ನಿನ್ನೆ ನಟ ಸೈಫ್ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರನ್ನು ಭೇಟಿ ಮಾಡಿದ ರಾಣ ಬಳಿಕ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದು, ನಟ ಸೈಫ್ ಹಾಗೂ ಅವರ ಕುಟುಂಬ ತಮ್ಮ ಬಳಿ ಏನು ಮಾತನಾಡಿದ್ರು ಎಂಬುದನ್ನು ಹೇಳಿಕೊಂಡಿದ್ದಾರೆ.
ಅವರು ನಟನನ್ನು ಭೇಟಿ ಮಾಡಲು ಸಂಜೆ 3.30ಕ್ಕೆ ಸಮಯ ನೀಡಿದ್ದರು. ನಾನು ಓಕೆ ಎಂದಿದ್ದೆ ಹಾಗೂ ನಾನು 4-5 ನಿಮಿಷ ತಡವಾಗಿ ಅಲ್ಲಿಗೆ ತಲುಪಿದೆ ನಂತರ ನಾವು ಭೇಟಿಯಾದೆವು. ಅಲ್ಲಿ ನಾವು ಮನೆಯೊಳಗೆ ಹೋಗುತ್ತಿದ್ದಂತೆ ಅಲ್ಲಿ ಅವರ ಕುಟುಂಬವೂ ಇತ್ತು. ಅವರೆಲ್ಲರೂ ಚಿಂತೆಗೊಳಗಾಗಿದ್ದರು. ಆದರೆ ಎಲ್ಲವೂ ಚೆನ್ನಾಗಿ ನಡೆಯಿತು. ಅಲ್ಲಿ ಅವರ ತಾಯಿ ಹಾಗೂ ಮಕ್ಕಳಿದ್ದರು. ಅವರು ನನ್ನನ್ನು ಗೌರವಯುತವಾಗಿ ನಡೆಸಿಕೊಂಡರು. ನನ್ನನ್ನು ಅವರು ಇಂದು ಕರೆದಿದ್ದರು. ಇದರಿಂದ ಖುಷಿಯಾಯ್ತು, ಬೇರೆನೂ ವಿಶೇಷವಿಲ್ಲ, ಇದೊಂದು ಸಾಮಾನ್ಯ ಭೇಟಿಯಾಗಿತ್ತು. ನಾನು ಅವರಿಗೆ ಬೇಗ ಹುಷಾರಾಗಿ ಎಂದು ಹೇಳಿದೆ. ನಾನು ಈ ಹಿಂದೆಯೂ ನಿಮಗಾಗಿ ಪ್ರಾರ್ಥಿಸಿದೆ ಹಾಗೂ ನಾನು ಪ್ರಾರ್ಥನೆಯನ್ನು ಮುಂದುವರೆಸುವೆ ಎಂದು ಆಟೋ ಚಾಲಕ ಭಜನ್ ಸಿಂಗ್ ಹೇಳಿದ್ದಾರೆ.
ಜನವರಿ 16ರಂದು ರಾತ್ರಿ ದಾಳಿಯ ನಂತರ ನಿಜವಾಗಿಯೂ ಏನಾಯ್ತು ಎಂಬುದನ್ನು ಆಟೋ ಚಾಲಕ ಅಂದು ವಿವರಿಸಿದ್ದರು. ನಾನು ಲಿಂಕಿನ್ ರಸ್ತೆಯಲ್ಲಿ ಸಾಗುತ್ತಿದೆ. ಸೈಫ್ ಅಲಿ ಖಾನ್ ವಾಸ ಮಾಡುವ ಸತ್ಗುರು ನಿವಾಸದ ಮುಂದೆ ಸಾಗುತ್ತಿದ್ದಾಗ ಒಬ್ಬರು ಮಹಿಳೆ ಓಡಿ ಬಂದು ಆಟೋಗಾಗಿ ಕೂಗಿದರು, ರಿಕ್ಷಾ ರಿಕ್ಷಾ ರೊಕೊ ರೊಕೊ ರೊಕೊ(ನಿಲ್ಲಿಸಿ) ಎಂದು ಬೊಬ್ಬೆ ಹೊಡೆದರು. ಅಲ್ಲದೇ ಕಟ್ಟಡದ ಗೇಟ್ ಬಳಿ ಆಟೋ ನಿಲ್ಲಿಸಲು ಹೇಳಿದರು.
ನನಗೆ ಅವರು ಸೈಫ್ ಅಲಿ ಖಾನ್ ಎಂಬುದು ಗೊತ್ತಿರಲಿಲ್ಲ, ಅದೊಂದು ತುರ್ತು ಸ್ಥಿತಿಯಾಗಿತ್ತು. ನನ್ನ ಆಟೋಗೆ ಹತ್ತುತ್ತಿರುವ ಈ ಪ್ರಯಾಣಿಕ ಯಾರು ಎಂದು ನನಗೂ ಆತಂಕವಿತ್ತು. ನಾನು ತೊಂದರೆಗೆ ಸಿಲುಕಬಹುದೋ ಎಂಬ ಚಿಂತೆ ಇತ್ತು. ಅದಕ್ಕಾಗಿಯೇ ನಾನು ಆತಂಕಗೊಂಡಿದ್ದೆ. ಅತ್ತ ಅವರು (ಸೈಫ್) ರಕ್ತಸಿಕ್ತ ಬಿಳಿ ಶರ್ಟ್ ಧರಿಸಿದ್ದರು. ಅವರೊಂದಿಗೆ ಒಂದು ಮಗು ಕುಳಿತಿತ್ತು, ಒಬ್ಬ ಯುವಕ ಕೂಡ ಅವರೊಂದಿಗೆ ಕುಳಿತಿದ್ದರು ಎಂದು ಆಟೋ ಚಾಲಕ ಘಟನೆಯನ್ನು ವಿವರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದಾರೆ. ಬಾಂಗ್ಲಾದೇಶದ ಪ್ರಜೆ ಶರೀಫುಲ್ ಇಸ್ಲಾಂ ಶೆಹಜಾದ್ ಬಂಧಿತ ಆರೋಪಿಯಾಗಿದ್ದು, ಈತ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಬಿಜೋಯ್ ದಾಸ್ ಎಂಬ ಹಿಂದೂ ಹೆಸರನ್ನು ಇಟ್ಟುಕೊಂಡು ಸುಳ್ಳು ಹೆಸರಿನಲ್ಲಿ ವಾಸಿಸುತ್ತಿದ್ದ.