ಬಾಲಿವುಡ್ಗೆ ಬಿಸಿತುಪ್ಪವಾದ ಸಲ್ಮಾನ್ ಖಾನ್! ನಟನಿಂದಾಗಿ ರಶ್ಮಿಕಾಗೂ ಜೀವ ಭಯ... ಭಾರಿ ಭದ್ರತೆ...
ಸಲ್ಮಾನ್ ಖಾನ್ಗೆ ಒದಗಿರುವ ಜೀವ ಭಯ ಈಗ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಶುರುವಾಗಿದೆ. ಇದಕ್ಕೆ ಕಾರಣವೇನು?
ಸಲ್ಮಾನ್ ಖಾನ್, ಲಾರೆನ್ಸ್ ಬಿಷ್ಣೋಯಿ ಮತ್ತು ಕೃಷ್ಣಮೃಗ... ಈ ಮೂರು ಶಬ್ದಗಳು ಕಳೆದ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಆರಾಧ್ಯ ದೈವ ಕೃಷ್ಣಮೃಗವನ್ನು ಕೊಂದಿದ್ದಾರೆ ಎನ್ನುವುದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಆರೋಪ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದೇ ಈ ಬೆದರಿಕೆಗೆ ಕಾರಣ. ಈ ಪ್ರಕರಣದಲ್ಲಿ ಸಲ್ಮಾನ್ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಇದಾಗಲೇ ಹಲವು ಬಾರಿ ಬೆದರಿಕೆ ಹಾಕಿದ್ದಾಗಿದೆ. ಅವರ ನಿಕಟವರ್ತಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಯೂ ಮಾಡಿಯಾಗಿದೆ. ಇಷ್ಟೆಲ್ಲಾ ಆದ ಮೇಲೆ ನಟ ಒಂದು ಕ್ಷಮೆ ಕೋರಬಾರದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಇದೀಗ ಬಾಬಾ ಸಿದ್ದಿಕಿ ಹತ್ಯೆಗೆ ಸಲ್ಮಾನ್ ಖಾನ್ ಪರೋಕ್ಷ ಕಾರಣ ಎನ್ನುವ ವಿಷಯ ತಿಳಿಯುತ್ತಲೇ ಸಲ್ಮಾನ್ ಸಮೀಪವರ್ತಿಗಳಿಗೆ ಅದರಲ್ಲಿಯೂ ಬಾಲಿವುಡ್ ಮಂದಿಗೆ ಸಲ್ಲುಭಾಯಿ ನುಂಗಲಾಗದ ತುಪ್ಪವಾಗಿ ಪರಿಣಮಿಸಿದ್ದಾರೆ. ಇದೀಗ ನಟಿ ರಶ್ಮಿಕಾ ಮಂದಣ್ಣ ಅವರಿಗೂ ಭಾರಿ ಭದ್ರತೆ ನೀಡಲಾಗಿದೆ. ಹಾಗಂತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ಗೂ ರಶ್ಮಿಕಾ ಮಂದಣ್ಣಂಗೂ ಯಾವುದೇ ನೇರ ಸಂಬಂಧವಿಲ್ಲ. ಆದರೆ ಸಲ್ಮಾನ್ ಖಾನ್ ಭಯದಿಂದ ಇದ್ದಬಿದ್ದವರೆಲ್ಲಾ ರಕ್ಷಣೆ ಕೋರುವಂತಾಗಿದೆ. ರಶ್ಮಿಕಾ ಅವರಿಗೆ ಭಾರಿ ಭದ್ರತೆ ನೀಡಲು ಕಾರಣ, ರಶ್ಮಿಕಾ ಈಗ ಸಲ್ಮಾನ್ ಖಾನ್ ಜೊತೆ ಸಿಕಂದರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. 2025 ಮಾರ್ಚ್‌ನಲ್ಲಿ ತೆರೆ ಕಾಣಲಿದೆ ಈ ಚಿತ್ರ. ಆದರೆ ಸಲ್ಮಾನ್ ಖಾನ್ ನಿಕಟವರ್ತಿಗಳಿಗೆ ಜೀವಕ್ಕೆ ಅಪಾಯವಿದೆ ಎಂದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೇಳಿದ್ದ ಹಿನ್ನೆಲೆಯಲ್ಲಿ, ಈಗ ರಶ್ಮಿಕಾ ಅವರಿಗೆ ಭದ್ರತೆ ನೀಡಲಾಗಿದೆ. ಮಾತ್ರವಲ್ಲದೇ ಸಿಕಂದರ್ ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲರಿಗೂ ಭದ್ರತೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.
ಇನ್ನು ಒಂದರ ಮೇಲೆ ಒಂದು ಫ್ಲಾಪ್ ಚಿತ್ರ ನೀಡುತ್ತಿರುವ ಸಲ್ಮಾನ್ ಖಾನ್ಗೆ ಸಿಕಂದರ್ ಮೇಲೆ ಸಕತ್ ಹೋಪ್ಸ್ ಇದೆ. ಶಾರುಖ್ ಖಾನ್ ನಾಲ್ಕೈದು ವರ್ಷ ನೀರಸ ಪ್ರದರ್ಶನದ ಬಳಿಕ ಪುಟಿದೆದ್ದಂತೆ ತಾವೂ ಹಾಗೆಯೇ ಆಗುವ ನಿರೀಕ್ಷೆಯಲ್ಲಿದ್ದಾರೆ ಸಲ್ಮಾನ್. ಏಕೆಂದರೆ, ಕಳೆದ ವರ್ಷ ತೆರೆ ಕಂಡ ಟೈಗರ್ 3 ಸಿನಿಮಾ, ಹೇಳಿಕೊಳ್ಳುವಂತ ಯಶಸ್ಸು ಕಾಣಲಿಲ್ಲ. ಈಗ ಇದರ ಮೇಲೆ ವಿಶ್ವಾಸ ಇಟ್ಟುಕೊಂಡಿರೋ ಬೆನ್ನಲ್ಲೇ ಜೀವ ಭೀತಿ ಶುರುವಾಗಿದೆ. ಅಂದಹಾಗೆ, ಈ ಚಿತ್ರವನ್ನು ಸಾಜಿದ್ ನದ್ಯದ್ವಾಲಾ ನಿರ್ಮಾಣದ ಈ ಚಿತ್ರವನ್ನು ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರೀತಂ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಸುನಿಲ್ ಶೆಟ್ಟಿ, ಕಾಜಲ್ ಅಗರ್‌ವಾಲ್ , ಸತ್ಯರಾಜ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ.
ಇನ್ನು ನಟಿ ರಶ್ಮಿಕಾ ಮಂದಣ್ಣ ಅವರ ಪುಷ್ಪ 2 ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಿಂದಿಯ ಚಾವಾ, ತೆಲುಗಿನ ರೈಂಬೋ, ದಿ ಗರ್ಲ್ ಫ್ರೆಂಡ್, ತಮಿಳಿನ ಕುಬೇರ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಆರಾಮಾಗಿ ಇದ್ದ ನಟಿಗೆ ಈ ಸಲ್ಮಾನ್ ಖಾನ್ರಿಂದ ಜೀವಭಯ ಶುರುವಾಗಿದ್ದು, ಹೋದಲ್ಲಿ- ಬಂದಲ್ಲಿ ಬಿಗಿ ಭದ್ರತೆ ಏರ್ಪಾಡು ಮಾಡಿಕೊಳ್ಳುವಂತಾಗಿದೆ.
ಪ್ರಕೃತಿ ಉಳಿವಿಗೆ 300 ಮಂದಿ ಬಲಿದಾನ! ರಾಜನಿಂದ ಕ್ಷಮೆ... ಚಿಪ್ಕೋ ಚಳವಳಿ ರೂವಾರಿ ಬಿಷ್ಣೋಯಿಗಳ ಕೌತುಕ ಇತಿಹಾಸ...