ಪರಿಸರದ ಉಳಿವಿಗಾಗಿ ಬಲಿದಾನ ಮಾಡಿದ ಬಿಷ್ಣೋಯಿಗಳ ಕುತೂಹಲದ ಇತಿಹಾಸ ಇಲ್ಲಿದೆ. ಇವರ ತ್ಯಾಗ ಕಂಡು ಜನರ ಮುಂದೆ ಕ್ಷಮೆ ಕೋರಿದ್ದ ಅಂದಿನ ರಾಜ.  

ಬಿಷ್ಣೋಯಿ ಎನ್ನುವ ಶಬ್ದ ಕಳೆದ ಕೆಲವು ದಿನಗಳಿಂದ ಭಾರಿ ಸಂಚಲನ ಮೂಡಿಸುತ್ತಿದೆ. ನಟ ಸಲ್ಮಾನ್​ ಖಾನ್​ರ ಹತ್ಯೆ ಮಾಡುವುದಾಗಿ ಇದಾಗಲೇ ಹಲವಾರು ಬಾರಿ ಬೆದರಿಕೆ ಒಡ್ಡಿರುವ ಲಾರೆನ್ಸ್​ ಬಿಷ್ಣೋಯಿ, ಇದೀಗ ಸಲ್ಮಾನ್​ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಒಡನಾಟ ಇದ್ದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಮಾಡಿರುವುದಾಗಿ ಹೇಳಿದ ಬಳಿಕ ಲಾರೆನ್ಸ್​ ಬಿಷ್ಣೋಯಿ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅಷ್ಟಕ್ಕೂ ಸಲ್ಮಾನ್​ ಖಾನ್​ ಕೃಷ್ಣಮೃಗ ಕೊಂದಿದ್ದರೂ, ಇದುವರೆಗೆ ಕ್ಷಮೆ ಕೋರದ ಹಿನ್ನೆಲೆಯಲ್ಲಿ ಅವರ ಮೇಲೆ ಇಷ್ಟು ಕೋಪ ಎಂಬುದು ಇದಾಗಲೇ ಗೊತ್ತಾಗಿದೆ. ಕೃಷ್ಣಮೃಗಗಳನ್ನು ಬಿಷ್ಣೋಯಿಗಳು ತಮ್ಮ ದೇವರು ಎಂದು ತಿಳಿದುಕೊಂಡಿದ್ದಾರೆ, ಅದೇ ಕಾರಣಕ್ಕೆ ಸಲ್ಮಾನ್​ ಮೇಲೆ ಕೋಪ ಎನ್ನುವುದು ನಿಜವಾದರೂ ಈ ಬಿಷ್ಣೋಯಿ ಸಮುದಾಯಕ್ಕೆ ಕೃಷ್ಣಮೃಗ ಅಷ್ಟಕ್ಕೇ ಸೀಮಿತವಾಗಿಲ್ಲ. ಈ ಸಮುದಾಯದರಿಗೆ ಪ್ರಕೃತಿ ಮತ್ತು ಪ್ರಾಣಿಗಳ ಮೇಲಿರುವ ಪ್ರೀತಿಯ ರೋಚಕ ಇತಿಹಾಸವೇ ಇದೆ.

ಅದು 1485. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಸಂತ ಗುರು ಜಂಭೇಶ್ವರರಿಂದ ಬಿಷ್ಣೋಯಿ ಪಂಥ ಆರಂಭವಾಗಿದ್ದು. ಪರಿಸರದ ಬಿಕ್ಕಟ್ಟುಗಳ ಬಗ್ಗೆ ಜಗತ್ತು ತಿಳಿದುಕೊಳ್ಳುವುದಕ್ಕೆ ಬಹಳ ಹಿಂದೆಯೇ, ಬಿಷ್ಣೋಯಿಗಳು ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧ ಮತ್ತು ಅದರ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿದಿದ್ದರು. ಬೇರೆ ಯಾವುದೇ ಧಾರ್ಮಿಕ ವ್ಯವಸ್ಥೆಯು ಪರಿಸರದ ಮೌಲ್ಯ, ರಕ್ಷಣೆ ಮತ್ತು ಕಾಳಜಿಗೆ ಈ ಮಟ್ಟದ ಪ್ರಾಮುಖ್ಯತೆಯನ್ನು ನೀಡಿಲ್ಲ ಎಂದೇ ಹೇಳಲಾಗುತ್ತದೆ. ಕುತೂಹಲದ ವಿಷಯ ಏನೆಂದರೆ... ಟ್ರೀ ಹಗ್ಗರ್ಸ್ ಮತ್ತು ಟ್ರೀ-ಹಗ್ಗಿಂಗ್ ಪರಿಕಲ್ಪನೆಯು ಬಿಷ್ಣೋಯ್ ಇತಿಹಾಸದಲ್ಲಿ ಬೇರುಗಳನ್ನು ಹೊಂದಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಪ್ರಸಿದ್ಧ 'ಚಿಪ್ಕೋ ಚಳವಳಿ'ಯ ರೂವಾರಿಗಳೇ ಈ ಬಿಷ್ಣೋಯಿ ಪಂಥದವರು.

ಕ್ಷಮೆ ಕೋರದ ಸಲ್ಮಾನ್​ಗೆ ದುಃಸ್ವಪ್ನವಾದ ಕೃಷ್ಣಮೃಗ! ಜೀವ ಉಳಿಸಿಕೊಳ್ಳಲು 2 ಕೋಟಿಯ ಮತ್ತೊಂದು ಕಾರು ಖರೀದಿ

ಥಾರ್​ ಮರಭೂಮಿಯಲ್ಲಿ ಅಂದು ಅವ್ಯಾಹತವಾಗಿ ನಡೆಯುತ್ತಿದ್ದ ಕೃಷ್ಣಮೃಗ ಬೇಟೆ ನಿಲ್ಲಿಸಲು ಹಾಗೂ ಪ್ರಕೃತಿಯನ್ನು ಉಳಿಸಲು ಗುರು ಜಂಭೇಶ್ವರರು ಪಣ ತೊಟ್ಟಿದ್ದರು. ಅಂದು ಬರಗಾಲ ಬಂದಾಗ ಇದೇ ಜಂಭೇಶ್ವರರು ಪ್ರಕೃತಿಯ ಬಗ್ಗೆ ಪಾಠ ಮಾಡಿದ್ದರು. ಬರಗಾಲದಿಂದ ತತ್ತರಿಸಿರುವ ಜನರ ಉಳಿವಿಗಾಗಿ ಹೋರಾಟ ಮಾಡಿ, ಜನರನ್ನು ಕಾಪಾಡಿದ್ದರು. ಪ್ರಕೃತಿಯ ಉಳಿವಿಗಾಗಿ ತಮ್ಮ ಜೀವನದ ಕೊನೆಯವರೂ ಹೋರಾಟ ಮಾಡಿ 29 ನಿಯಮಗಳನ್ನು ತಮ್ಮ ಪಂಥದವರಿಗೆ ಕೊಟ್ಟಿದ್ದರು. ಬೀಸ್​ ಮತ್ತು ನೌ ಇದರಿಂದಾಗಿಯೇ ಬಿಷ್ಣೋಯಿಗಳು ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತದೆ. ಮತ್ತೆ ಕೆಲವೆಡೆ ಇವರು ವಿಷ್ಣುವಿನ ಆರಾಧಕರಾಗಿರುವ ಕಾರಣ ಹೀಗೆ ಹೆಸರು ಬಂದಿದೆ ಎನ್ನಲಾಗುತ್ತದೆ. ಹೀಗೆ ಭೀಕರ ಬರಗಾಲದಿಂದ ಜನರನ್ನು ಪಾರು ಮಾಡಿದ್ದ ಜಂಭೇಶ್ವರರು ತಾವು ಮುಂದಿನ ಜನ್ಮದಲ್ಲಿ ಕೃಷ್ಣಮೃಗನಾಗಿ ಹುಟ್ಟುವುದಾಗಿ ಹೇಳಿ ಕೊನೆಯುಸಿರು ಎಳೆದಿದ್ದರು. ಇದೇ ಕಾರಣಕ್ಕೆ ಬಿಷ್ಣೋಯಿಗಳಿಗೆ ಕೃಷ್ಣಮೃಗದ ಮೇಲೆ ಅದಮ್ಯ ಪ್ರೀತಿ. ಅದೆಷ್ಟರ ಮಟ್ಟಿಗೆ ಪ್ರೀತಿ ಎನ್ನುವುದಕ್ಕೆ ಇಲ್ಲಿರುವ ಫೋಟೋ ಸಾಕ್ಷಿ. ತಾಯಂದಿರು ತಮ್ಮ ಕಂದನ ಜೊತೆಗೆ ಕೃಷ್ಣಮೃಗಗಳ ಮರಿಗಳಿಗೂ ಎದೆಹಾಲು ಉಣಿಸುತ್ತಾರೆ. 

ಇನ್ನು ವೀರ ಮಹಿಳೆ ಅಮೃತಾ ದೇವಿ ಬಿಷ್ಣೋಯಿ ಕುರಿತು ಇಲ್ಲಿ ಉಲ್ಲೇಖಿಸಲೇಬೇಕು. 1770ರಲ್ಲಿ ಜೋಧಪುರ ಮಹಾರಾಜ ಅಭಯ ಸಿಂಗ್​, ಅರಮನೆಯ ನಿರ್ಮಾಣಕ್ಕೆ ಮರಗಳನ್ನು ಕಡಿಯುವ ಆದೇಶ ಮಾಡುತ್ತಾನೆ. ಸೈನಿಕರು ಮರಗಳನ್ನು ಕಡಿಯಲು ಮುಂದಾದಾಗ ಅಮೃತಾ ದೇವಿ ಬಿಷ್ಣೋಯಿ ತನ್ನ ಮೂವರು ಮಕ್ಕಳ ಜೊತೆ ಮರಗಳನ್ನು ಅಪ್ಪಿ ನಿಂತು, ನನ್ನ ಉಸಿರು ಇರುವವರೆಗೂ ಮರ ಕಡಿಯಲು ಸಾಧ್ಯವಿಲ್ಲ ಎನ್ನುತ್ತಾಳೆ. ಕೊನೆಗೆ 300ಕ್ಕೂ ಅಧಿಕ ಗ್ರಾಮಸ್ಥರು ಹೀಗೆ ಒಂದೊಂದೇ ಮರಗಳನ್ನು ಅಪ್ಪಿ ನಿಲ್ಲುತ್ತಾರೆ. ರಾಜನ ಆದೇಶವನ್ನು ಮೀರಲು ಆಗದ ಸೈನಿಕರು, ಅಮೃತಾದೇವಿ ಮತ್ತು ಮಕ್ಕಗಳನ್ನು ಹತ್ಯೆ ಮಾಡುತ್ತಾರೆ. ಈ ಘಟನೆಗಳಿಂದ ಕ್ಷೋಭೆಗೊಳಗಾದ ಅಕ್ಕಪಕ್ಕದ ಹಳ್ಳಿಯ ಜನರು ಮರಗಳಿಗೆ ಅಂಟಿಕೊಳ್ಳುತ್ತಾರೆ, ಹತ್ಯಾಕಾಂಡ ಮುಂದುವರೆಯುತ್ತದೆ.

ನಿನಗೆ ಯುದ್ಧವೇ ಬೇಕಿದ್ರೆ ಇದು ಟ್ರೇಲರ್​ ಅಷ್ಟೇ, ಇನ್ನು ಗುಂಡು ಗೋಡೆಗೆ ಬೀಳಲ್ಲ- ಜೈ ಶ್ರೀರಾಮ್​: ಲಾರೆನ್ಸ್​ ಬಿಷ್ಣೋಯಿ

ರಾಜಾ ಅಭಯ ಸಿಂಗ್​ಗೆ ವಿಷಯ ತಿಳಿಯುತ್ತಲೇ ತಲ್ಲಣಗೊಳ್ಳುತ್ತಾನೆ. ಕೂಡಲೇ ಮರಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಆದೇಶಿಸುತ್ತಾನೆ. ತನ್ನಿಂದ ಆದ ತಪ್ಪಿಗೆ ಬಿಷ್ಣೋಯಿ ಸಮುದಾಯದವರ ಮುಂದೆ ತಲೆಬಾಗಿ ಕ್ಷಮೆ ಕೋರುತ್ತಾನೆ. ಅಮೃತಾ ದೇವಿ ಅವರ ಈ ತ್ಯಾಗ ಸುಂದರ್ ಲಾಲ್ ಬಹುಗುಣ ಅವರ "ಚಿಪ್ಕೋ ಆಂದೋಲನ್" ಮಾತ್ರವಲ್ಲದೆ ಪರಿಸರ ಸಂರಕ್ಷಣೆಗೆ ಕೊಡುಗೆಗಾಗಿ "ಅಮೃತಾ ದೇವಿ ಬಿಷ್ಣೋಯಿ ಸ್ಮೃತಿ ಪರ್ಯಾಯನ್ ಪ್ರಶಸ್ತಿ" ರೂಪದಲ್ಲಿ ಭಾರತ ಸರ್ಕಾರವನ್ನು ಪ್ರೇರೇಪಿಸಿದೆ. ಬಿಷ್ಣೋಯಿಗಳು ಪರಿಸರ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಮತ್ತು ಹಸಿರು ಜೀವನಕ್ಕಾಗಿ ಮೊದಲ ಸಂಘಟಿತ ಪ್ರತಿಪಾದಕರಲ್ಲಿ ಒಬ್ಬರು. ಮೂಲಭೂತ 29 ಧಾರ್ಮಿಕ ತತ್ವಗಳಲ್ಲಿ ಮುಳುಗಿರುವ ಅವರ ಆದರ್ಶಗಳೊಂದಿಗೆ, ಬಿಷ್ಣೋಯಿಸ್ ಮತ್ತು ಬಿಷ್ಣೋಯಿಸಂ ನಮ್ಮ ವಿಕಾಸಗೊಳ್ಳುತ್ತಿರುವ ಜಗತ್ತಿಗೆ ಬಹಳ ಪ್ರಸ್ತುತವಾಗಿದೆ.