ನಾನು ನನ್ನ ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ, ನನ್ನ ಬಗ್ಗೆ ಚಿಂತಿಸಬೇಡಿ ಎಂದ ರಶ್ಮಿಕಾ ಮಂದಣ್ಣ. ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ಟೀಕೆ ಮಾಡಿದವರಿಗೆ ತಮ್ಮದೇ ಸ್ಟೈಲ್ನಲ್ಲಿ ಉತ್ತರ ನೀಡಿದ್ದಾರೆ.
ಕಾಫಿ ವಿತ್ ಕರಣ್ ಶೋ ನಂತ್ರ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. ವಿಜಯ್ ದೇವರಕೊಂಡ ವರ್ತನೆಯನ್ನು ಅನೇಕರು ಖಂಡಿಸಿದ್ದರು. ವಿಜಯ್ ದೇವರಕೊಂಡ ಅವರಿಗೆ ರಶ್ಮಿಕಾ ಪ್ರಪೋಸ್ ಮಾಡಿದ್ದ ರೀತಿ ಹಾಗೂ ಸಂದರ್ಶನದಲ್ಲಿ ವಿಜಯ್ ನೀಡುತ್ತಿದ್ದ ರಿಯಾಕ್ಷನ್ ಗಳನ್ನು ನೋಡಿದ್ದ ಸೋಶಿಯಲ್ ಮೀಡಿಯಾ ಬಳಕೆದಾರರು, ವಿಜಯ್ ಮೇಲೆ ಅಸಮಾಧಾನಗೊಂಡಿದ್ದರು. ರಶ್ಮಿಕಾ ಲವ್ಸ್ ವಿಜಯ್, ವಿಜಯ್ ಲವ್ಸ್ ವಿಜಯ್ ಎನ್ನುವ ಸ್ಲೋಗನ್ ಹರಿದಾಡುತ್ತಿತ್ತು. ಇದೇ ವಿಷ್ಯವನ್ನಿಟ್ಟುಕೊಂಡು ಬಳಕೆದಾರರು ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಈಗ ಎಲ್ಲ ಕಮೆಂಟ್ ಗಳಿಗೆ ನಟಿ ರಶ್ಮಿಕಾ ಮಂದಣ್ಣ ಉತ್ತರ ನೀಡಿದ್ದಾರೆ.
ದೊಡ್ಡ ಪೋಸ್ಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ
ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ದೊಡ್ಡ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ನಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಿ, ಇಲ್ಲದಿದ್ದರೂ ಪರವಾಗಿಲ್ಲ ಎಂದಿದ್ದಾರೆ. ಪ್ರೀತಿ ಮತ್ತು ಸಂಬಂಧದ ಬಗ್ಗೆ ಜನರು ತಮ್ಮದೇ ಅಭಿಪ್ರಾಯ ಹೊಂದಿರುವುದರಲ್ಲಿ ತಪ್ಪಿಲ್ಲ. ಆದರೆ ಇತ್ತೀಚೆಗೆ ತಮ್ಮ ಸಂದರ್ಶನದ ಬಗ್ಗೆ ನಡೆಯುತ್ತಿರುವ ಚರ್ಚೆ ಅಭಿಪ್ರಾಯದ ಹಂತವನ್ನು ಮೀರಿ, ಜನರು ಕೋಪ ಹೊರಹಾಕುವ ರೀತಿಗೆ ತಿರುಗಿದೆ. ನನ್ನ ಮತ್ತು ವಿಜಯ್ ಬಗ್ಗೆ ಎಲ್ಲರ ಪ್ರೊಫೈಲ್ಗಳಲ್ಲೂ ಅನಗತ್ಯ ಕಾಮೆಂಟ್ಗಳು, ಸಲಹೆಗಳು ಮತ್ತು ಅಭಿಪ್ರಾಯಗಳು ಬರುತ್ತಿವೆ. ಜನರು ಇಷ್ಟು ದೃಢವಾಗಿ ನಮ್ಮನ್ನು ಟೀಕಿಸುತ್ತಿರುವುದನ್ನು ನೋಡಿ ನನಗೂ ಆಶ್ಚರ್ಯವಾಯಿತು ಎಂಬ ಅರ್ಥದಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಪ್ರೀತಿ ಎಲ್ಲರ ಕಲ್ಪನೆಗೆ ಹೊಂದಿಕೆಯಾಗಬೇಕೆಂದೇನಿಲ್ಲ. ಅವರ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೂ ಪರವಾಗಿಲ್ಲ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ತಮಗೆ ಸಂತೋಷ ನೀಡುವ ರೀತಿಯಲ್ಲಿ ಬದುಕಲಿ ಎಂದಿದ್ದಾರೆ.
ಮದುವೆ ಅಂದರೆ ಪ್ರಪೋಸಲ್ ಅಥವಾ ಉಂಗುರವಲ್ಲ
ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ರಶ್ಮಿಕಾ, ಮದುವೆ ಎಂದರೆ ಮೊಣಕಾಲೂರಿ ಪ್ರಪೋಸ್ ಮಾಡುವುದು ಅಥವಾ ಬೆರಳಿಗೆ ಉಂಗುರ ತೊಡಿಸುವುದಷ್ಟೇ ಅಲ್ಲ ಎಂದು ಬರೆದಿದ್ದಾರೆ. ನಮ್ಮ ಪಾಲಿಗೆ ಮದುವೆ ಅಂದರೆ ಒಟ್ಟಿಗೆ ಜೀವನ ಕಟ್ಟಿಕೊಳ್ಳುವುದು ಮತ್ತು ಭವಿಷ್ಯ ರೂಪಿಸಿಕೊಳ್ಳುವುದು. ನಾನು ಏನು ಬಯಸುತ್ತೇನೆ ಎಂಬ ಬಗ್ಗೆ ಸ್ಪಷ್ಟತೆ ಹೊಂದಿದ್ದೆ. ಆದರೆ ವಿಜಯ್ ಜೀವನದ ಪ್ರಾಯೋಗಿಕ ವಿಚಾರಗಳನ್ನು ಯೋಚಿಸಿ, ನಮ್ಮ ನಿರ್ಧಾರದ ಬಗ್ಗೆ ಖಚಿತವಾಗಲು ಸಮಯ ತೆಗೆದುಕೊಳ್ಳಲು ಬಯಸಿದ್ದರು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.
ತಾವು ಭಾವನೆಗಳಿಗೆ ಹೆಚ್ಚು ಮಹತ್ವ ನೀಡುವ ವ್ಯಕ್ತಿಯಾದರೆ, ವಿಜಯ್ ವಿಚಾರಗಳನ್ನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ. ಈ ವ್ಯತ್ಯಾಸವೇ ತಮ್ಮ ಜೀವನದಲ್ಲಿ ಪರಸ್ಪರ ಸಹಾಯವಾಗುತ್ತದೆ ಎಂಬ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ.
ನನ್ನ ಗಂಡನನ್ನು ನಾನು ಪ್ರೀತಿಸುವುದರಲ್ಲಿ ತಪ್ಪೇನಿದೆ?
ವಿಜಯ್ ಅವರನ್ನು ತುಂಬಾ ಪ್ರೀತಿಸುತ್ತೇನೆ ಎಂಬುದನ್ನು ರಶ್ಮಿಕಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಾನು ಮದುವೆಯಾಗುತ್ತಿರುವ ವ್ಯಕ್ತಿಯನ್ನು ಪ್ರೀತಿಸದಿದ್ದರೆ, ಮದುವೆಯಾಗುವುದಾದರೂ ಯಾಕೆ. ಅವರು ನನ್ನ ಜೀವನದ ಸಂಗಾತಿ, ನನ್ನ ಸ್ನೇಹಿತ, ನನ್ನ ಮಕ್ಕಳ ತಂದೆ ಮತ್ತು ವಯಸ್ಸಾದಾಗಲೂ ನನ್ನ ಜೊತೆಗಿರುವ ವ್ಯಕ್ತಿ ಎಂದಿದ್ದಾರೆ. ನಮ್ಮ ಜೀವನದ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳುವಷ್ಟು ಸ್ವತಂತ್ರರು. ನಮ್ಮದೇ ಪರಿಶ್ರಮದಿಂದ ಜೀವನ ಕಟ್ಟಿಕೊಂಡಿದ್ದು, ಯಾರ ಜೊತೆ ಬದುಕಬೇಕು ಎಂಬ ನಿರ್ಧಾರವನ್ನೂ ನಾವೇ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಕಷ್ಟದ ಸಮಯದಲ್ಲಿ ವಿಜಯ್ ನನ್ನ ಜೊತೆಗಿದ್ದರು
ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಅವರಿಂದ ದೂರವಿರುವಂತೆ ಕೆಲವರು ಸಲಹೆ ನೀಡಿದ್ದರು. ಇಂತಹವರಿಗೆ ಧನ್ಯವಾದ ಹೇಳಿರುವ ರಶ್ಮಿಕಾ, ತಮ್ಮ ಜೀವನದಲ್ಲಿ ನಿಜವಾಗಿಯೂ ಕಷ್ಟದ ಸಮಯವಿದ್ದಾಗ ಈ ಜನರು ತಮ್ಮ ಜೊತೆಗಿರಲಿಲ್ಲ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ.
ನಾನು ದೈಹಿಕ ನೋವು ಅನುಭವಿಸಿದಾಗ, ಆತಂಕಕ್ಕೊಳಗಾದಾಗ ಅಥವಾ ಮನಸ್ಸು ಕುಗ್ಗಿದಾಗ ಸಾಂತ್ವನ, ಬೆಂಬಲ ಮತ್ತು ಪ್ರೋತ್ಸಾಹ ನೀಡಿದ ವ್ಯಕ್ತಿ ವಿಜಯ್ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ. ನನ್ನ ಗೆಲುವನ್ನು ಸಂಭ್ರಮಿಸುವ, ನನ್ನನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಸಂಗಾತಿ ನನಗೆ ಬೇಕಾಗಿತ್ತು. ಅಂಥ ಪ್ರೀತಿ ಈಗ ನನ್ನ ಜೀವನದಲ್ಲಿದೆ ಎಂದು ರಶ್ಮಿಕಾ ತಿಳಿಸಿದ್ದಾರೆ.
ಮದುವೆಯಾದ ನಂತರ ತಾವು ಹಿಂದೆಂದಿಗಿಂತಲೂ ಹೆಚ್ಚು ಸಂತೋಷವಾಗಿದ್ದೇವೆ. ನನ್ನ ಬಗ್ಗೆ ಬೇಕಾದಷ್ಟು ಟೀಕೆ ಮಾಡಲಿ. ಆದರೆ ನಮ್ಮ ಕುಟುಂಬದವರನ್ನು ತಿಳಿದುಕೊಳ್ಳದೇ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಮಹಿಳೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡಿರುವ ರಶ್ಮಿಕಾ, ಫೆಮಿನಿಸಂ ಎಂದರೆ ಇನ್ನೊಬ್ಬರನ್ನು ಕೆಳಗಿಳಿಸುವುದು ಅಥವಾ ತಾವೇ ಶ್ರೇಷ್ಠರು ಎಂದು ತೋರಿಸಿಕೊಳ್ಳುವುದಲ್ಲ. ತಮಗೆ ಬೇಕಾದ ಜೀವನವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದುವುದು ಮತ್ತು ತಮ್ಮ ಜೀವನದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದೇ ಫೆಮಿನಿಸಂ. ನಾನು ನನ್ನ ಜೀವನದ ನಿರ್ಧಾರವನ್ನು ನಾನೇ ತೆಗೆದುಕೊಂಡಿದ್ದೇನೆ. ಅದರಿಂದ ನನಗೆ ಅಪಾರ ಪ್ರೀತಿ ಸಿಕ್ಕಿದೆ ಎಂದು ಬರೆದಿದ್ದಾರೆ.
ಕನ್ನಡಿಗರಿಗೂ ರಶ್ಮಿಕಾ ವಿಶೇಷ ಸಂದೇಶ
ಕೊನೆಯಲ್ಲಿ ಕನ್ನಡಿಗರನ್ನು ಉದ್ದೇಶಿಸಿಯೂ ರಶ್ಮಿಕಾ ಕಮೆಂಟ್ ಮಾಡಿದ್ದಾರೆ. ಆಹಾ, 10 ವರ್ಷಗಳ ನಂತರವೂ ನಾನು ನಿಮ್ಮ ಹೃದಯಗಳಲ್ಲಿ ಇಷ್ಟೊಂದು ಆಳವಾಗಿ ಉಳಿದುಕೊಂಡಿದ್ದೇನೆ ಎಂದು ತಿಳಿಯುವುದು ಎಷ್ಟು ಸಂತೋಷದ ವಿಷಯ. ಇಷ್ಟು ದೀರ್ಘಕಾಲದ ನಂತರವೂ ನೀವು ನನ್ನನ್ನು ಹೀಗೆ ಸಂಭ್ರಮಿಸುತ್ತಿದ್ದೀರಿ ಎಂದರೆ, ನಿಜಕ್ಕೂ, ನಾನು ಧನ್ಯ ಎಂದಿದ್ದಾರೆ. ಪ್ರೀತಿ ಮತ್ತು ಸಂತೋಷವನ್ನು ಸಂಭ್ರಮಿಸುವ ಎಲ್ಲರಿಗೂ ಪ್ರೀತಿ ವ್ಯಕ್ತಪಡಿಸಿರುವ ರಶ್ಮಿಕಾ, ಪ್ರತಿಯೊಬ್ಬರೂ ತಮ್ಮನ್ನು ಸಂತೋಷವಾಗಿಡುವ ಸಂಗತಿಯನ್ನು ಕಂಡುಕೊಳ್ಳಲಿ ಎಂದು ಹಾರೈಸಿದ್ದಾರೆ.







