ಭಾರತದಲ್ಲಿ ಒಂದೇ ಸಮನೆ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿರುವ ರಾಮಾಯಣ ಸಿನಿಮಾಕ್ಕೆ ಅಮೆರಿಕಾದಲ್ಲಿ ಹಿನ್ನಡೆಯಾಗಿದೆ. ಅಮೆರಿಕಾದಲ್ಲಿ ನಡೆದ ಘಟನೆ ಸಿನಿಮಾ ತಂಡಕ್ಕೆ ಶಾಕ್ ನೀಡಿದೆ.

ರಾಮಾಯಣ ಸಿನಿಮಾ ಬಿಡುಗಡೆಯಾಗಿ 18 ದಿನ ಕಳೆದಿದ್ರೂ ಭಾರತದಲ್ಲಿ ಅದ್ರ ಜೋಶ್‌ ಹಾಗೇ ಇದೆ. ದಿನ ದಿನಕ್ಕೂ ಸಿನಿಮಾದ ಗಳಿಕೆ ಹೆಚ್ಚಾಗ್ತಿದೆ. ಶೀಘ್ರದಲ್ಲೇ ಸಿನಿಮಾ ಹೊಸ ದಾಖಲೆ ಬರೆಯಲಿದೆ. ಆದ್ರೆ ಅಮೆರಿಕಾದಲ್ಲಿ ಮಾತ್ರ ರಾಮಾಯಣ ಸಿನಿಮಾಕ್ಕೆ ಭಾರೀ ಹಿನ್ನಡೆಯಾಗಿದೆ.

800ಕ್ಕೂ ಹೆಚ್ಚು ಥಿಯೇಟರ್ಗಳಿಂದ ರಾಮಾಯಣ ಔಟ್

ಸೋನಿ ಸಂಸ್ಥೆಯ ವಿತರಣೆಯಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಿರುವ ರಾಮಾಯಣ ಸಿನಿಮಾ ಆರಂಭದಲ್ಲಿ 1,400ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡಿತ್ತು. ಆದರೆ, ಕಾಲೈಡರ್ ವರದಿಯ ಪ್ರಕಾರ, ಎರಡನೇ ವಾರದಲ್ಲೇ 300ಕ್ಕೂ ಹೆಚ್ಚು ಸ್ಕ್ರೀನ್ಗಳಿಂದ ಚಿತ್ರವನ್ನು ತೆಗೆದುಹಾಕಲಾಗಿತ್ತು. ಇದೀಗ ಶುಕ್ರವಾರದಿಂದ ಚಿತ್ರ ಪ್ರದರ್ಶನಗೊಳ್ಳುವ ಥಿಯೇಟರ್ಗಳ ಸಂಖ್ಯೆ 681ಕ್ಕೆ ಇಳಿಕೆಯಾಗಿದೆ. ಚಿತ್ರದ ಟಿಕೆಟ್ ಮಾರಾಟದಲ್ಲಿ ನಿರಂತರ ಕುಸಿತ ಕಂಡುಬರುತ್ತಿದ್ದು, ಪ್ರದರ್ಶನಗೊಳ್ಳುತ್ತಿರುವ ಸ್ಕ್ರೀನ್ಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಮೂರನೇ ವಾರದಲ್ಲಿ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಭಾರಿ ಇಳಿಕೆಯಾಗಿದೆ. ಟಿಕೆಟ್ ಮಾರಾಟದಲ್ಲಿ ಕಂಡುಬಂದಿರುವ ಕುಸಿತವೇ, ಸಿನಿಮಾ ಥಿಯೇಟರ್‌ ನಿಂದ ಹೊರಗೆ ಹೋಗಲು ಕಾರಣವಾಗಿದೆ.

ವಿಶೇಷವೆಂದರೆ, ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ 150 ಮಿಲಿಯನ್ ಅಮೆರಿಕನ್ ಡಾಲರ್ಗೂ ಹೆಚ್ಚು ಗಳಿಕೆ ಮಾಡಿರುವ ನಡುವೆಯೇ ಚಿತ್ರಕ್ಕೆ ಅಮೆರಿಕದಲ್ಲಿ ಈ ಹಿನ್ನಡೆಯಾಗಿದೆ. ಈ ಗಳಿಕೆಯೊಂದಿಗೆ 2023ರ ಆರ್ಆರ್ಆರ್ ಹಾಗೂ ಈ ವರ್ಷದ ಹಾಲಿವುಡ್ ಸಿನಿಮಾಗಳಾದ ಸೂಪರ್ಗರ್ಲ್ ಮತ್ತು ಮಾರ್ಟಲ್ ಕಾಂಬ್ಯಾಟ್ II ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ.

ರಾಮಾಯಣ ಚಿತ್ರದ ಬಜೆಟ್ ಎಷ್ಟು?

ರಾಮಾಯಣ ಚಿತ್ರದ ನಿರ್ಮಾಣ ವೆಚ್ಚ ಬರೋಬ್ಬರಿ 200 ಮಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಲಾಗುತ್ತಿದೆ. ಅಂದರೆ, ಚಿತ್ರದ ವೆಚ್ಚವನ್ನು ಮರಳಿ ಪಡೆಯಲು ಇನ್ನೂ ಸಾಕಷ್ಟು ಗಳಿಕೆ ಮಾಡಬೇಕಿದೆ. ಚಿತ್ರರಂಗದ ತಜ್ಞರ ಪ್ರಕಾರ, ಇಷ್ಟು ದೊಡ್ಡ ಬಜೆಟ್ನ ಸಿನಿಮಾ ಬ್ರೇಕ್ ಈವನ್ ಹಂತ ತಲುಪಲು ಸಾಮಾನ್ಯವಾಗಿ ತನ್ನ ನಿರ್ಮಾಣ ವೆಚ್ಚದ ದುಪ್ಪಟ್ಟು ಗಳಿಕೆ ಮಾಡಬೇಕಾಗುತ್ತದೆ.

ಅಮೆರಿಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ?

ಅಮೆರಿಕದ ಬಾಕ್ಸ್ ಆಫೀಸ್ನಲ್ಲಿ ರಾಮಾಯಣ ಸಿನಿಮಾ 28 ಮಿಲಿಯನ್ ಅಮೆರಿಕನ್ ಡಾಲರ್ ಗಳಿಕೆ ಮಾಡುವ ನಿರೀಕ್ಷೆಯಿದೆ. ಈ ವಾರಾಂತ್ಯದ ವೇಳೆಗೆ ಧುರಂಧರ್: ದಿ ರಿವೆಂಜ್ ಚಿತ್ರದ ಒಟ್ಟು ಗಳಿಕೆಯನ್ನು ಹಿಂದಿಕ್ಕಿ, ಅಮೆರಿಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ದಾಖಲೆ ಬರೆಯುವ ಸಾಧ್ಯತೆಯಿದೆ.

ಇನ್ನು ಭಾರತದ ಬಾಕ್ಸ್ ಆಫೀಸ್ನಲ್ಲೂ ಸಿನಿಮಾ ಉತ್ತಮ ಪ್ರದರ್ಶನ ನೀಡುತ್ತಿದೆ. ಬಿಡುಗಡೆಯಾಗಿ 18 ದಿನಗಳಲ್ಲಿ ಬರೋಬ್ಬರಿ 942.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೀಗ 1,000 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಮುನ್ನಡೆಯುತ್ತಿದೆ. ಇನ್ನು ಕೇವಲ 58 ಕೋಟಿ ರೂಪಾಯಿ ಗಳಿಸಿದರೆ ಈ ಮೈಲಿಗಲ್ಲು ತಲುಪಲಿದೆ. ಒಂದು ವೇಳೆ 1,000 ಕೋಟಿ ರೂಪಾಯಿ ಗಳಿಸಿದರೆ, ಧುರಂಧರ್ 2 ಬಳಿಕ ಈ ಸಾಧನೆ ಮಾಡಿದ ಎರಡನೇ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ರಾಮಾಯಣ ಪಾತ್ರವಾಗಲಿದೆ.