13 ದಿನದ ಶಮಿಕಾಳ ಉಸಿರು ನಿಂತಾಗ ನಡೆದಿತ್ತು ಪವಾಡ: ವಿಚಿತ್ರ ಘಟನೆ ನೆನಪಿಸಿದ ರಾಧಿಕಾ ಕುಮಾರಸ್ವಾಮಿ
ನಟಿ ರಾಧಿಕಾ ಕುಮಾರಸ್ವಾಮಿ ತಮ್ಮ ಜೀವನದಲ್ಲಿ ಆದ ಪವಾಡಗಳ ಕುರಿತು ಮಾತನಾಡಿದ್ದಾರೆ. ಮಗಳು 13 ದಿನದವಳು ಇರುವಾಗ ಆದ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.
ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರ ಭೈರಾದೇವಿ ಚಿತ್ರ ಇದೇ ದಸರಾದ ಸಮಯದಲ್ಲಿ ರಿಲೀಸ್ ಆಗಲಿದೆ. ಭೈರಾದೇವಿ ಸಿನಿಮಾ ತಂಡ ಕಳೆದ ಶಿವರಾತ್ರಿಯ ಒಂದು ಟೀಸರ್ ರಿಲೀಸ್ ಮಾಡಿತ್ತು. ಆಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಇದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ಅಘೋರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರ ಇನ್ನಷ್ಟು ಕುತೂಹಲ ಪಡೆದುಕೊಂಡಿದೆ. ನಿಜ ಜೀವನದಲ್ಲಿ ದೇವಿ ಆರಾಧಕಿಯೂ ಆಗಿರುವ ರಾಧಿಕಾ ಅವರು ಈ ಚಿತ್ರದ ಕುರಿತು ಇದಾಗಲೇ ಸಾಕಷ್ಟು ಕುತೂಹಲ, ವಿಚಿತ್ರ ಘಟನೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ಜೀವನದ ಪಯಣ, ಮಗಳ ಬಗ್ಗೆ... ಹೀಗೆ ಹಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ. ಭೈರಾದೇವಿಯಲ್ಲಿ ಸಕಾರಾತ್ಮಕ ಶಕ್ತಿಯ ಜೊತೆಗೆ ನಕಾರಾತ್ಮಕ ಶಕ್ತಿಯೂ ಹೇಗೆ ಕೆಲಸ ಮಾಡುತ್ತದೆ ಎಂಬ ಬಗೆಗಿನ ಘಟನೆಗಳು ಇವೆ.
ಇದರ ಬಗ್ಗೆಯೇ ಮಾತನಾಡಿದ ರಾಧಿಕಾ ಅವರು, ತಮ್ಮ ಜೀವನದಲ್ಲಿ ಆದ ಒಂದು ಭಯಾನಕ ಹಾಗೂ ಅಷ್ಟೇ ಕುತೂಹಲ ಎನ್ನುವ ದೇವಿ ಮಹಿಮೆಯನ್ನು ಸಾರುವ ಘಟನೆಯನ್ನು ವಿವರಿಸಿದ್ದಾರೆ. ರಾಧಿಕಾ ಅವರ ಪುತ್ರಿ ಶಮಿಕಾಗೆ ಈಗ 14 ವರ್ಷ ವಯಸ್ಸು. 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಆದರೆ ರಾಧಿಕಾ ಅವರು ತಮ್ಮ ಪುತ್ರಿ 13ನೇ ದಿನದ ಕೂಸು ಇರುವಾಗಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗ ಮಗಳು ಹುಟ್ಟಿ 13 ದಿನ ಆಗಿತ್ತಷ್ಟೇ. ನಾನು ಮಂಚದ ಮೇಲೆ ಮಲಗಿದ್ದೆ. ನನ್ನ ಮಗಳೆಂದರೆ ನನ್ನ ಅಪ್ಪನಿಗೆ ಪಂಚಪ್ರಾಣ. ಮಗಳನ್ನು ಅವರ ಬಳಿಯೇ ಮಲಗಿಸಿಕೊಂಡಿದ್ದರು. ರಾತ್ರಿ ಇದ್ದಕ್ಕಿದ್ದಂತೆಯೇ ವಿಚಿತ್ರ ಶಬ್ದದಲ್ಲಿ ಗಾಳಿ ಬಂತು. ಅಪ್ಪನಿಗೆ ಎಚ್ಚರವಾದಾಗ ಶಮಿಕಾಳ ಕಣ್ಣು ಗುಡ್ಡೆ ಮೇಲೆ ಹೋಗಿತ್ತು. ಕಣ್ಣಿನ ಕಪ್ಪು ಗುಡ್ಡೆ ಕಾಣಿಸುತ್ತಲೇ ಇರಲಿಲ್ಲ. ಮೈ-ಕೈಯೆಲ್ಲಾ ಸೆಟೆದು ಹೋಗಿತ್ತು. ಉಸಿರು ನಿಂತಂತೆ ಆಗಿಬಿಟ್ಟಿತು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅದನ್ನು ಅಪ್ಪ ನೋಡಿ ಗಾಬರಿಯಾದರು. ಓಡಿ ಬಂದು ನನಗೆ ವಿಷಯ ತಿಳಿಸಿದರು. ನನಗೂ ಶಾಕ್ ಆಗಿ ಏನು ಮಾಡಬೇಕು ಎಂದೇ ತೋಚಲಿಲ್ಲ. ಕೂಡಲೇ ಮಗುವನ್ನು ದೇವರ ಕೋಣೆಗೆ ಕರೆದುಕೊಂಡು ಹೋಗುವಂತೆ ಅಮ್ಮನಿಗೆ ಹೇಳಿದೆ ಎಂದು ಘಟನೆಯನ್ನು ವಿವರಿಸಿದ್ದಾರೆ.
ಶಮಿಕಾ ಭೈರಾದೇವಿಗೆ ಕೊಟ್ಟ ಆಡಿಷನ್ ನೋಡಿ ಅತ್ತುಬಿಟ್ಟೆ... ಸಿನಿಮಾಕ್ಕೆ ಪುತ್ರಿ ಎಂಟ್ರಿಗೆ ರಾಧಿಕಾ ಹೇಳಿದ್ದೇನು?
ಮಗು ಹುಟ್ಟಿ ಇನ್ನೂ 13 ದಿನವಷ್ಟೇ ಆಗಿದ್ದರಿಂದ ಸೂತಕ ಇನ್ನೂ ಕಳೆದಿರಲಿಲ್ಲ. ಅಮ್ಮ ದೇವರ ಮನೆಗೆ ಹೋಗುವುದು ಸರಿಯಲ್ಲ ಎಂದರು. ಆದರೆ ನಾನು ನಂಬಿರುವ ಕಟಿಲು ದುರ್ಗಾ ಪರಮೇಶ್ವರಿ, ಮೈಸೂರಿನ ಚಾಮುಂಡೇಶ್ವರಿ ತಾಯಿ ಮತ್ತು ರಾಜರಾಜೇಶ್ವರಿ ಅಮ್ಮ ನನ್ನ ಕೈಬಿಡಲ್ಲ ಎಂಬ ಬಲವಾದ ನಂಬಿಕೆ ಇತ್ತು. ಇಂಥ ಸಮಯದಲ್ಲಿ ಸೂತಕ ಅದೂ ಇದೂ ಎಂದೆಲ್ಲಾ ನೋಡುತ್ತಾ ಕುಳಿತರೆ ಆಗುವುದಿಲ್ಲ. ಕೂಡಲೇ ಮಗುವನ್ನು ದೇವರ ಕೋಣೆಗೆ ಕರ್ಕೊಂಡು ಹೋಗುವಂತೆ ಹೇಳಿದಾಗ ಅಮ್ಮ ಕರೆದುಕೊಂಡು ಹೋದರು ಎಂದು ನಂತರ ನಡೆದ ಪವಾಡವನ್ನು ನಟಿ ವಿವರಿಸಿದ್ದಾರೆ.
ದೇವರಿಗೆ ಮಾಡಿದ್ದ ಅರ್ಚನೆಯ ಕುಂಕುಮವನ್ನು ಮಗುವಿನ ಹಣೆಗೆ ಅಮ್ಮ ಇಟ್ಟರು. ಅಷ್ಟೇ ಮಗಳ ಕಣ್ಣುಗುಡ್ಡೆ ಸರಿಯಾಯಿತು. ಸೆಟೆದುಕೊಂಡಿದ್ದ ಕೈ-ಕಾಲುಗಳು ಸರಿಯಾದವು. ಬಾಡಿ ರಿಲೀಸ್ ಆಯ್ತು, ಉಸಿರಾಟವೂ ಸರಿಯಾಯ್ತು. ಇದು ದೇವಿ ಮಹಿಮೆ ಎಂದ ನಟಿ ಪಾಸಿಟಿವ್ ಎನರ್ಜಿ ಇರುವಂತೆಯೇ ನೆಗೆಟಿವ್ ಕೂಡ ಇರುತ್ತದೆ. ಇದೊಂದು ಘಟನೆಯಲ್ಲ, ನನ್ನ ಜೀವನದಲ್ಲಿ ಇಂಥ ಘಟನೆಗಳು ಹಲವು ನಡೆದಿವೆ. ಆದರೆ ದೈವ ಶಕ್ತಿ ನನ್ನನ್ನು ಕಾಪಾಡಿಕೊಂಡು ಬಂದಿದೆ. ಅದೇ ಶಕ್ತಿಯಿಂದ ಇಲ್ಲಿಯವರೆಗೆ ಬಂದು ನಿಂತಿದ್ದೇನೆ ಎಂದು ರಾಧಿಕಾ ಹೇಳಿದ್ದಾರೆ.
ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಧಿಕಾ ಕುಮಾರಸ್ವಾಮಿ? ಜಾತಕದ ಬಗ್ಗೆ ನಟಿ ಹೇಳಿದ್ದೇನು?