pushpa: 'ಏ ಮಗಾ ಇದು ನನ್ನ ಜಾಗ' ಎಂದು ಅಬ್ಬರಿಸಿದ ಅಲ್ಲು ಅರ್ಜುನ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಬಹುನಿರೀಕ್ಷಿತ ಪುಷ್ಪ ಚಿತ್ರದ ಏ ಮಗಾ ಇದು ನನ್ನ ಜಾಗ ಹಾಡು ಇಂದು ಬಿಡುಗಡೆಯಾಗಿದೆ.
ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun), ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಸುಕುಮಾರ್ (Sukumar) ನಿರ್ದೇಶನದ ಬಹುನಿರೀಕ್ಷಿತ 'ಪುಷ್ಪ' ಚಿತ್ರದ ನಾಲ್ಕನೇ ಹಾಡು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿದೆ. 'ಏ ಮಗಾ ಇದು ನನ್ನ ಜಾಗ' ಎಂಬ ಈ ಹಾಡನ್ನು ಕನ್ನಡದಲ್ಲಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ವಿಭಿನ್ನವಾಗಿ ಮೂಡಿಬಂದಿದೆ. 'ಪುಷ್ಪ' ಚಿತ್ರದಲ್ಲಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್‌ರ ಲುಕ್ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಈ ಹಾಡಿನಲ್ಲಿ ನಾಯಕ ಪುಷ್ಪರಾಜ್ 'ಏ ಮಗಾ ಇದು ನನ್ನ ಜಾಗ' ಎಂದು ಹೇಳುತ್ತಾ ತೋಳುಗಳನ್ನು ತಟ್ಟುತ್ತಾ ಜಂಗಿ ಕುಸ್ತಿಗೆ ಆಹ್ವಾನಿಸುವ ಪೈಲ್ವಾನನಂತೆ ಅಬ್ಬರಿಸಿದ್ದಾನೆ. ಆ ಪಕ್ಕ, ಈ ಪಕ್ಕ, ಆಕಾಶದ ತಾರೆ ಚುಕ್ಕೆಗಳೆಲ್ಲ ನಂದೆ ಎಂದು ಕುಣಿಯುತ್ತ ಪುಷ್ಪನ ಪ್ರಪಂಚಕ್ಕೆ ತಾನೇ ದೊರೆ ಎಂದು ಪುಷ್ಪರಾಜ್ ಘೋಷಿಸಿರುವ ಹಾಗಿದೆ ಈ ಹಾಡು. 'ಪುಷ್ಪ' ಚಿತ್ರದ ಮೊದಲ ಹಾಡು 'ಜೋಕೆ ಜೋಕೆ', ಎರಡನೇ ಹಾಡು 'ಶ್ರೀವಲ್ಲಿ' ಹಾಗೂ ಮೂರನೇ ಹಾಡು 'ಸಾಮಿ ಸಾಮಿ' ಪಂಚ ಭಾಷೆಗಳಲ್ಲಿ ಈಗಾಗಲೇ 250 ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ. ಅದೇ ರೀತಿ ಈ ಹಾಡು ಸಹ ಧೂಳೆಬ್ಬಿಸುವ ನಿರೀಕ್ಷೆಯಿದೆ.
Pushpa: ಮಾಸ್ ಅವತಾರದ ಪೋಸ್ಟರ್ ಹಂಚಿಕೊಂಡ ನಟ ಅಲ್ಲು ಅರ್ಜುನ್
'ಪುಷ್ಪ' ಚಿತ್ರದ ಹಾಡುಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವುದರಿಂದ ಸಂತಸಗೊಂಡಿರುವ ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ (Devi Sri Prasad) 2021ನೇ ವರ್ಷ ತನಗೆ ಯಶಸ್ವಿ ವರ್ಷವಾಗಿದೆ ಎಂದಿದ್ದಾರೆ. ಇದೇ ವೇಳೆ ಹಿಂದಿಯ 'ರಾಧೆ' (Radhe) ಚಿತ್ರದ ಸಿಟಿಮಾರ್, ತೆಲುಗಿನ 'ಉಪ್ಪೆನ' (Uppena) ಚಿತ್ರದ ಹಾಡುಗಳನ್ನು ಸಹ ಮೆಚ್ಚಿದ ಎಲ್ಲಾ ವೀಕ್ಷಕರಿಗೆ ಇತ್ತೀಚೆಗೆ ಧನ್ಯವಾದಗಳನ್ನು ತಿಳಿಸಿದ್ದರು. ವಿಶೇಷವಾಗಿ ಈ ಚಿತ್ರದಲ್ಲಿ ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದು, ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ (Anasuya Bharadwaj) ಅಭಿನಯಿಸುತ್ತಿದ್ದಾರೆ. ಮಲಯಾಳಂ ನಟ ಫಾಹದ್ ಫಾಸಿಲ್ (Fahadh Faasil) ಮುಖ್ಯ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ
ಇನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ಸುನೀಲ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. 'ಪುಷ್ಪ: ದಿ ರೈಸ್' (Pushpa: The Rise) ಎಂಬ ಶೀರ್ಷಿಕೆಯ ಮೊದಲ ಭಾಗವು ಡಿಸೆಂಬರ್ 17ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.