ಜನಪ್ರಿಯ ನಟಿ ತಾನಿಯಾ ತಂದೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿರುವ ತಾನಿಯಾ ತಂದೆ ಕ್ಲಿನಿಕ್‌ನಲ್ಲಿರುವಾಗ ಈ ಘಟನೆ ನಡೆದಿದೆ. ತಂದೆ ಮೇಲೆ ಗುಂಡಿನ ದಾಳಿಯಿಂದ ನಟಿ ತಾನಿಯಾ ಆಘಾತಗೊಂಡಿದ್ದಾರೆ.
ಮೊಗ (ಜು.05) ಸನ್ ಆಫ್ ಮಂಜೀತ್ ಸಿಂಗ್, ಕಿಸ್ಮತ್ ಸೇರಿದಂತೆ ಪ್ರಮುಖ ಸಿನಿಮಾಗಳಲ್ಲಿ ಅಭಿಮಾನಿಗಳ ಮನ ಗೆದ್ದಿರುವ ನಟಿ ತಾನಿಯಾ ಹಾಗೂ ಆಕೆ ಕುಟುಂಬ ತೀವ್ರ ಆಘಾತಕ್ಕೀಡಾಗಿದೆ. ಪಂಜಾಬಿ ನಟಿ ತಾನಿಯಾ ತಂದೆ ಡಾ. ಅನಿಲ್ ಜಿತ್ ಸಿಂಗ್ ಕಾಂಬೊಜ್ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ವೃತ್ತಿಯಲ್ಲಿ ವೈದ್ಯನಾಗಿರುವ ಅನಿಲ್ ಜಿತ್ ಸಿಂಗ್ ಮೇಲೆ ಇಬ್ಬರು ಅಪರಿಚಿತರು ಕ್ಲಿನಿಕ್‌ಗೆ ಆಗಮಿಸಿ ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅನಿತ್ ಜಿತ್ ಸಿಂಗ್‌ನನ್ನು ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ಅನಿಲ್ ಜಿತ್ ಸಿಂಗ್ ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಅನಾರೋಗ್ಯದ ನಾಟಕವಾಡಿ ಅಪರಿಚಿತರಿಂದ ದಾಳಿ
ಪಂಜಾಬ್‌ನ ಮೊಗ ಜಿಲ್ಲೆಯಲ್ಲಿ ಹರ್ಬನ್ಸ್ ನರ್ಸಿಂಗ್ ಹೋಮ್‌ನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಜಿತ್ ಸಿಂಗ್ ಮೇಲೆ ದಾಳಿಯಾಗಿದೆ. ಬೈಕ್‌ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಅನಾರೋಗ್ಯದ ನಾಟಕವಾಡಿದ್ದಾರೆ. ಬಳಿಕ ವೈದ್ಯ ಅನಿಲ್ ಜಿತ್ ಸಿಂಗ್ ಭೇಟಿಯಾಗಿದ್ದಾರೆ. ಅನಿಲ್ ಜಿತ್ ಸಿಂಗ್ ಇಬ್ಬರ ಆರೋಗ್ಯ ತಪಾಸಣೆ ಮಾಡಲು ಆರಂಭಿಸುತ್ತಿದ್ದಂತೆ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವೈದ್ಯ ಅನಿಲ್ ಜಿತ್ ಸಿಂಗ್ ದೇಹಕ್ಕೆ ಎರು ಗುಂಡುಗಳು ಹೊಕ್ಕಿವೆ. ಗಂಭೀರ ಪರಿಸ್ಥಿತಿಯಲ್ಲಿರುವ ಅನಿಲ್ ಜಿತ್ ಸಿಂಗ್ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಜನಪ್ರಿಯ ವೈದ್ಯರಾಗಿರುವ ಡಾ.ಅನಿಲ್ ಜಿತ್ ಸಿಂಗ್‌ಗೆ ಇತ್ತು ಬೆದರಿಕೆ
ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಜಿತ್ ಸಿಂಗ್‌ಗೆ ಕಳೆದ ಹಲವು ತಿಂಗಳಿನಿಂದ ಬೆದರಿಕೆಗೆಗಳು ಬರುತ್ತಿದ್ದವು. ನರ್ಸಿಂಗ್ ಹೋಮ್ ಮೂಲಕ ಉತ್ತಮ ಆದಾಯಗಳಿಸುತ್ತಿದ್ದ ಅನಿಲ್ ಜಿತ್ ಸಿಂಗ್ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟು ಹಲವು ಬೆದರಿಕೆ ಕರೆಗಳು ಬರುತ್ತಿದ್ದವು. ಆದರೆ ಅನಿಲ್ ಜಿತ್ ಸಿಂಗ್ ಈ ಕರೆಗಳನ್ನು ಸಂದೇಶಗಳನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಷ್ಟೇ ಅಲ್ಲ ದೂರು ಕೂಡ ದಾಖಲಿಸಿಲ್ಲ. ಸದ್ಯ ಫೊರೆನ್ಸಿಕ್ ತಂಡ ಸ್ಥಳಕ್ಕೆ ಆಗಮಿಸಿ ಹಲವು ಮಾಹಿತಿ ಕಲೆ ಹಾಕಿದೆ.
ಖಾಸಗಿ ಸಮಯ ನೀಡಿ ಎಂದು ತಾನಿಯಾ ಮನವಿ
ತಂದೆ ಮೇಲೆ ಗುಂಡಿನ ದಾಳಿಯಿಂದ ನಟಿ ತಾನಿಯಾ ಆಘಾತಗೊಂಡಿದ್ದಾರೆ. ಇಷ್ಟೇ ಅಲ್ಲ ಇಡೀ ಕುಟುಂಬ ಆಘಾತಗೊಂಡಿದೆ. ಸದ್ಯ ಇಡೀ ಕುಟುಂಬ ಆಸ್ಪತ್ರೆಯಲ್ಲಿದೆ. ಕ್ಷಣಕ್ಷಣದ ಮಾಹಿತಿ ಪಡೆಯುತ್ತಾ, ಕುಟುಂಬಸ್ಥರಿಗೆ ತಿಳಿಸುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆ ದಾಖಲಿಸುವ ಕುರಿತು ಚರ್ಚೆನಡೆಸುತ್ತಿದ್ದಾರೆ. ಇದೇ ವೇಳೆ ನಟಿ ತಾನಿಯಾ ಮಹತ್ವದ ಮನವಿ ಮಾಡಿದ್ದಾರೆ. ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಈ ಸಂದರ್ಭ ಎದುರಿಸುವುದೇ ಅತ್ಯಂತ ಸವಾಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಖಾಸಗೀತನಕ್ಕೆ ಅವಕಾಶ ನೀಡಿ ಎಂದು ಮಾಧ್ಯಮಗಳಲ್ಲಿ ವಿನಂತಿಸಿದ್ದಾರೆ. ಅತ್ಯಂತ ಕಠಿಣ ಹಾಗೂ ಭಾವನಾತ್ಮಕ ಪರಿಸ್ಥಿತಿ ಇದಾಗಿದೆ. ಹೀಗಾಗಿ ಮಾಧ್ಯಮಗಳು ತಾನಿಯಾ ಕುಟುಂಬ ಖಾಸಗಿತನ ಗೌರವಿಸಬೇಕು. ಇದೇ ವೇಳೆ ಎಲ್ಲರೂ ಸೂಕ್ಷ್ಮ ಪರಿಸ್ಥಿತಿಯನ್ನು ಅರಿತಿದಿದ್ದೀರಿ ಎಂದು ಭಾವಿಸುತ್ತೇನೆ ಎಂದು ತಾನಿಯಾ ಮನವಿ ಮಾಡಿಕೊಂಡಿದ್ದಾರೆ.
ತಾನಿಯಾ ಪಂಜಾಬಿ ಸಿನಿಮಾದಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ಬಜ್ರೆ ದಾ ಸಿತ್ತಾ, ಸುಫ್ನಾ, ರಬ್ ದಾ ರೇಡಿಯೋ 2, ಗುಡಿಯಾ ಪಟೋಲೆ, ಒಯ್ ಮಖಾನ ಸೇರದಂತೆ ಹಲವು ಸೂಪರ್ ಹಿಟ್ ಪಂಜಾಬಿ ಸಿನಿಮಾಗಳಲ್ಲಿ ತಾನಿಯಾ ನಾಯಕಿಯಾಗಿ ಭಾರಿ ಜನಮನ್ನಣೆ ಗಳಿಸಿದ್ದಾರೆ. ಪಂಜಾಬಿಗರ ನೆಚ್ಚಿನ ನಟಿಯಾಗಿ ತಾನಿಯಾ ಗುರುತಿಸಿಕೊಂಡಿದ್ದಾರೆ.
