ಮದುವೆ ಭರವಸೆಗೆ ತನು, ಮನ, ದೇಹ ನೀಡಿದ ಮಹಿಳೆಗೆ ಮೋಸ, , 10 ವರ್ಷ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ. ಇದೀಗ ನಟ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 

ಮುಂಬೈ (ಜ.26) ಬಾಲಿವುಡ್ ಸಿನಿಮಾ ಧುರಂದರ್ ದೇಶ ವಿದೇಶಗಳಲ್ಲಿ ಭಾರಿ ಜನಪ್ರಿಯತೆ ಪಡೆದು ದಾಖಲೆ ಬರೆದಿದೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಗಳಿಕೆ ಮೂಲಕ ರಣವೀರ್ ಸಿಂಗ್ ಸಿನಿಮಾಗೆ ಭಾರಿ ಮನ್ನಣೆ ಸಿಕ್ಕಿದೆ. ಧುರಂಧರ್ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಈ ಸಿನಿಮಾದಲ್ಲಿ ನಟಿಸಿದ ನಟ ನದೀಮ್ ಖಾನ್‌ಗೆ ಸಂಕಷ್ಟ ಶುರುವಾಗಿದೆ. ಇದೀಗ ಅತ್ಯಾ***ರ ಆರೋಪದಡಿ ನಟ ನದೀಮ್ ಖಾನ್ ಅರೆಸ್ಟ್ ಆಗಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ನದೀಮ್ ಖಾನ್ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

10 ವರ್ಷಗಳಿಂದ ನಿರಂತರ ದೈಹಿಕ ಸಂಪರ್ಕ

ನದೀಮ್ ಖಾನ್ ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಮನೆಕೆಲಸದಾಕೆ ಜೊತೆ ಶುರುವಾದ ಸಲುಗೆ ದೈಹಿಕ ಸಂಪರ್ಕದವರೆಗೆ ಹೋಗಿದೆ. ಪ್ರೀತಿಸುತ್ತಿರುವುದಾಗಿ ಹೇಳಿದ್ದ ನದೀಮ್ ಖಾನ್ ಬಳಿಕ ಮದುವೆಯಾಗೋದಾಗಿ ಭರವಸೆ ನೀಡಿದ್ದಾರೆ. ಮದುವೆ ಭರವಸೆ ಸಿಕ್ಕ ಬೆನ್ನಲ್ಲೇ ಮನೆಕೆಲಸದಾಕೆ ತನು, ಮನ, ದೇಹ ನದೀಮ್ ಖಾನ್‌ಗೆ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ನದೀಮ್ ಖಾನ್ ತನ್ನನ್ನು ನಿರಂತರವಾಗಿ ಬಳಸಿಕೊಂಡಿದ್ದಾನೆ. ಮದುವೆ ಮುಂದೂಡುತ್ತಲೇ ಬಂದಿರುವ ನದೀಮ್ ಖಾನ್ ತನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಲಾಡ್ ಮಲ್ವಾನಿ ಪೊಲೀಸ್ ಠಾಣೆಗೆ ಪ್ರಕರಣ

ಮದುವೆಯಾಗೋದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಇದೀಗ ಮೋಸ ಮಾಡಿದ್ದಾನೆ ಎಂದು ಮಹಿಳೆ ಮಲ್ವಾನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಮೊಬೈಲ್ ಫೋನ್‌ನಲ್ಲಿರುವ ಕೆಲ ದಾಖಲೆಗಳನ್ನು ಪೊಲೀಸರಿಗೆ ಮಹಿಳೆ ನೀಡಿದ್ದಾರೆ. ಲಭ್ಯವಿರುವ ಸಾಕ್ಷ್ಯ, ದೂರಿನ ಆಧಾರದ ಮೇಲೆ ಪೊಲೀಸರು ನಟ ನದೀಮ್ ಖಾನ್ ಬಂಧಿಸಿದ್ದಾರೆ.

ಗಂಭೀರ ಸ್ವರೂಪ ಪಡೆದ ಪ್ರಕರಣ

ನದೀಮ್ ಖಾನ್ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಪ್ರಮುಖವಾಗಿ ನದೀಮ್ ಖಾನ್ ಮಹಿಳೆಗೆ ಮೋಸ ಮಾಡಿದ್ದಾರೆ. ನದೀಮ್ ಖಾನ್‌ಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದೇ ವೇಳೆ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸಬೇಕು. ನದೀಮ್ ಖಾನ್ ನಿಜಕ್ಕೂ ಮೋಸ ಮಾಡಿದ್ದರೆ ಶಿಕ್ಷೆಯಾಗಬೇಕು ಎಂದಿದ್ದಾರೆ. ಇದೇ ವೇಳೆ ನದೀಮ್ ಖಾನ್ ಧುರಂಧರ್ ಸಿನಿಮಾ ಮೂಲಕ ಜನಪ್ರಿಯರಾಗಿದ್ದಾರೆ. ಇದೇ ಕಾರಣದಿಂದ ಹಣಕ್ಕಾಗಿ ಈ ರೀತಿ ಆರೋಪ ಮಾಡಿದ್ದಾರೋ? ಕಳೆದ 10 ವರ್ಷಗಳಿಂದ ದುರ್ಬಳಕೆಯಾಗಿದ್ದಾರೆ ಮೌನವಾಗಿದ್ದಿದ್ದು ಯಾಕೆ ಎಂದು ಹಲವರು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸಿದ್ದಾರೆ.

ಯಾರು ಈ ನದೀಮ್ ಖಾನ್

ಧುರಂಧರ್ ಸಿನಿಮಾದಲ್ಲಿ ರಹಮಾನ್ ಡಕಾಯಿತ್ (ಅಕ್ಷಯ್ ಖನ್ನ ಪಾತ್ರ) ಅಡುಗೆ ಕೆಲಸದವನಾಗಿ ಪಾತ್ರ ಮಾಡಿದ್ದಾರೆ. ಧುರಂಧರ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮಹತ್ವದ ಮಾಹಿತಿಗಳನ್ನು ಲೀಕ್ ಮಾಡುತ್ತಿದ್ದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದಕ್ಕೂ ಮೊದಲು ಅಭಿಷೇಕ್ ಬಚ್ಚನ್, ಸಂಜಯ್ ಮಿಶ್ರಾ, ಆದಿಲ್ ಹುಸೈನ್ ಸೇರಿದಂತೆ ಹಲವು ಪ್ರಮುಖ ನಟರ ಜೊತೆಗೂ ಕೆಲಸ ಮಾಡಿದ್ದಾರೆ.

ಸೂಚನೆ: ಯಾವುದೇ ರೀತಿಯ ಕಿರುಕಳ, ಮಾನಸಿಕ ಹಿಂಸೆ ಸೇರಿದಂತೆ ಸಮಸ್ಯೆ ಅನುಭವಿಸುತ್ತಿದ್ದರೆ, ತಕ್ಷಣವೇ ಪೊಲೀಸ್ ಅಥವಾ ಮಾನಸಿಕ ಆರೋಗ್ಯ ಕೇಂದ್ರಗಳ ನೆರವು ಪಡೆಯಿರಿ.