Asianet Suvarna News Asianet Suvarna News

ಡಾ.ರಾಜ್‌ಕುಮಾರ್‌‌ ಬಗ್ಗೆ ನಿಮಗೆ ಗೊತ್ತಿರದ ಇಂಟರೆಸ್ಟಿಂಗ್‌ ಸಂಗತಿಗಳು

ಡಾ.ರಾಜ್‌ಕುಮಾರ್‌ ಅಂದರೆ ನಟ ಸಾರ್ವಭೌಮ, ಕನ್ನಡ ಕಂಠೀರವ, ಗಾನಗಂಧರ್ವ, ರಸಿಕರ ರಾಜ. ಏಪ್ರಿಲ್‌ ೨೪ ಬಂತೆಂದರೆ ಕನ್ನಡಿಗರಿಗೆ ಈ ಕಣ್ಮಣಿಯ ನೆನಪಿನ ಹಬ್ಬ.

Much more interesting facts of Sandalwood icon Dr Rajkumar
Author
Bengaluru, First Published Apr 24, 2020, 5:28 PM IST

- ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ಅವರದು ದೇವರು ಮಾಡಿದ ದಾಂಪತ್ಯ. ಅಂದರೆ ಇವರಿಬ್ಬರ ಕುಟುಂಬದವರೂ ಇವರಿಬ್ಬರೂ ಗಂಡಹೆಂಡತಿ ಎಂದು ಇವರು ಚಿಕ್ಕವರಿದ್ದಾಗಲೇ ನಿರ್ಧರಿಸಿಬಿಟ್ಟಿದ್ದರಂತೆ. ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋಗುವುದು ಸದಾ ಇತ್ತು. ಆಗ ಪಾರ್ವತಮ್ಮ ಇನ್ನೂ ಪುಟ್ಟ ಕೂಸು. ಆಡಿಸಲು ರಾಜ್‌ಕುಮಾರ್‌ ಕೈಯಲ್ಲೇ ಕೊಡುತ್ತಿದ್ದರಂತೆ. ತಗೊಳ್ಳಪ್ಪಾ ನಿನ್ನ ಭಾವಿ ಪತ್ನೀನ ನೀನೇ ನೋಡ್ಕೋ ಅಂತ! ಮುತ್ತುರಾಜ್‌ ಅವರು ಆಕೆಯನ್ನು ಆಡಿಸುವಷ್ಟು ಆಡಿಸಿ, ಕೊನೆಗೆ ಪಾರ್ವತಿಯ ನಿದ್ದೆ ಮಾಡದೆ ಸುಮ್ಮನೆ ತರಲೆ ಮಾಡುತ್ತಾ ಇದ್ದರೆ ಆಕೆಯನ್ನು ಜೋರಾಗಿ ಚಿವುಟಿ ಅಲ್ಲಿಂದ ಓಡಿಹೋಗುತ್ತಿದ್ದರಂತೆ!

- ಮುತ್ತುರಾಜ್‌ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರದು ಆಗಿನ ರಂಗಭೂಮಿ ಬಲುದೊಡ್ಡ ಹೆಸರು. ''ನನ್ನ ತಂದೆ ರಂಗದ ಮೇಲೆ ಹುರಿ ಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು" ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲುಪ್ರಿಯವಾಗಿತ್ತು. "ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ" ಎಂದು ಹೇಳಿದ್ದರು.

ಮುತ್ತರಾಜ್ ಅವರ ಮುತ್ತಿನಂಥ ಮಾತುಗಳಿವು...

- ಭಕ್ತ ಅಂಬರೀಶ್ ಎಂಬ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲವನ್ನು ರಾಜ್ ಹಲವಾರು ಬಾರಿ ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ಬೆಳ್ಳಿತೆರೆಯ ಮೇಲೆ ಡಾ. ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‌ಕುಮಾರ್‌ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ.

- ರಾಜ್‌ಕುಮಾರ್‌ ಅವರು ಯಾರಿಗೂ ತಮ್ಮ ಅಭಿನಯದ ಚಿತ್ರ ನೋಡಿ ಎಂದು ಹೇಳುತ್ತಲೇ ಇರಲಿಲ್ಲವಂತೆ. ತಾವು ಅಭಿನಯಿಸಿದ ಚಿತ್ರವನ್ನು ಮರಳಿ ನೋಡುತ್ತಲೂ ಇರಲಿಲ್ಲ. ಅದಕ್ಕೆ ಕಾರಣ, ಅವರಿಗೆ ತಮ್ಮ ಅಭಿನಯದಲ್ಲಿ ಕಾಣಿಸುತ್ತಿದ್ದ ಲೋಪ ದೋಷಗಳು. ತಪ್ಪೇ ಕಾಣಿಸುತ್ತದಲ್ಲ, ನಾನು ನೋಡಿ ಏನ್ಮಾಡ್ಲಿ ಎಂದು ಅವರು ಕೇಳುತ್ತಿದ್ದರು. ಶ್ರೀ ರಾಘವೇಂದ್ರ ವೈಭವ ಸಿನಿಮಾವನ್ನು ಮಾತ್ರ ಕೆಲವರಿಗೆ ಶಿಫಾರಸು ಮಾಡುತ್ತಿದ್ದರು. ಅದಕ್ಕೆ ಕಾರಣ, ಶ್ರೀ ರಾಘವೇಂದ್ರರ ಪಾತ್ರದಲ್ಲಿ ತಾನು ಸುಮಾರು ತಾದಾತ್ಮ್ಯ ಸಾಧಿಸಿದ್ದೇನೆ ಎಂದು ಅವರಿಗೆ ಅನಿಸಿತ್ತು.

- ಊಟದ ವಿಷಯದಲ್ಲಿ ಹೀಗೆಯೇ ಆಗಬೇಕು ಎಂಬ ಕಟ್ಟುನಿಟ್ಟು ಎಂದೂ ರಾಜ್‌ ಅವರಿಗೆ ಇರಲಿಲ್ಲ. ಪಂಚತಾರಾ ಹೋಟೆಲ್‌ನಲ್ಲಿ ಹೇಗೋ ಹಾಗೇ ರಸ್ತೆ ಬದಿಯ ಗೂಡಂಗಡಿಯಲ್ಲೂ ಬಾಳೆಲೆ ಮೇಲೆ ಸಿಂಪಲ್‌ ಊಟ ಮಾಡುತ್ತಿದ್ದರು. ಸೆಟ್‌ನಲ್ಲಿ ಯಾರಾದರೂ ಮನೆಯಿಂದ ತಂದ ಊಟ ಪ್ರೀತಿಯಿಂದ ಕೊಟ್ಟರೆ ಉಣ್ಣುತ್ತಿದ್ದರು. ಆದರೆ ಉಂಡ ಬಾಳೆಯಲ್ಲಿ ಮಾತ್ರ ಒಂದು ಅಗುಳೂ ಉಳಿಸದಂತೆ ಕ್ಲೀನ್‌ ಮಾಡುತ್ತಿದ್ದರು, ಗುರುವಾರ ಮಾಂಸ ಸೇವನೆ ಮಾಡುತ್ತಿರಲಿಲ್ಲ. ಇದು ಶ್ರೀ ಗುರು ರಾಘವೇಂದ್ರರ ಮೇಲಿನ ಭಕ್ತಿಯಿಂದ.

ಡಾ.ರಾಜ್‌ ಹುಟ್ಟುಹಬ್ಬ; ಅಣ್ಣಾವ್ರೇಕೆ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ! ...

- ರಾಜ್‌ ಅವರ ಅಭಿನಯದ ಚಿತ್ರಗಳ ಹೆಚ್ಚಿನ ಹಿನ್ನೆಲೆ ಗಾಯನ ಮಾಡುತ್ತಿದ್ದವರು ಪಿಬಿ ಶ್ರೀನಿವಾಸ್‌. ರಾಜ್‌ ಶರೀರ, ಪಿಬಿಎಸ್‌ ಶಾರೀರ ಎಂಬ ಮಾತೇ ಚಾಕ್ತಿಯಲ್ಲಿತ್ತು. ತಾವೇ ಸ್ವತಃ ಅದ್ಭುತವಾಗಿ ಹಾಡಬಲ್ಲವರಾದರೂ, ಇನ್ನೊಬ್ಬರ ಅವಕಾಶ ಕಸಿದುಕೊಳ್ಳಬಾರದು ಎಂಬ ಉದಾತ್ತ ಧ್ಯೇಯದಿಂದಾಗಿ ಅವರು ಬಹುಕಾಲ ಹಾಡಲೇ ಇಲ್ಲ. ೧೯೭೪ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್‌ ಚಿತ್ರದ ಯಾರೇ ಕೂಗಾಡಲಿ ಊರೇ ಹೋರಾಡಲಿ ಪದ್ಯವನ್ನು ತಾವೇ ಹಾಡಿದರು, ಇದು ಅವರ ಮೊದಲ ಚಿತ್ರಗೀತೆ ಗಾಯನ.

ಚಿ ।। ಸೌ ।। ಪಾರ್ವತಿ & ಚಿ ।। ರಾ ।। ಮುತ್ತುರಾಜ್ ವಿವಾಹದ ಆಹ್ವಾನ ಪತ್ರಿಕೆ ನೋಡಿದ್ರಾ ? ...

- ಮೊದಲು ಪುಟ್ಟದೊಂದು ಹೋರಾಟವಾಗಿದ್ದ ಗೋಕಾಕ್‌ ಚಳವಳಿ, ಡಾ.ರಾಜ್‌ ಅವರು ಅದಕ್ಕೆ ಸೇರಿಕೊಂಡ ಬಳಿಕ ಹೊತ್ತಿ ಉರಿದು ಇಡೀ ರಾಜ್ಯ ವ್ಯಾಪಿಸಿ ಗೆದ್ದದ್ದು ಇತಿಹಾಸಕ್ಕೆ ಸಂದ ಮಾತು. ಅದು ರಾಜ್‌ ಜನಪ್ರೇಮಕ್ಕೆ ಸಾಕ್ಷಿ.

Follow Us:
Download App:
  • android
  • ios