ಇಂದಿರಾಗಾಂಧಿಯವರು ಹೇರಿದ್ದ ಎಮರ್ಜೆನ್ಸಿಗೆ ಇಂದು 50 ವರ್ಷ. ಈ ಕರಾಳ ದಿನದಂದೇ 'ಎಮರ್ಜೆನ್ಸಿ' ಚಿತ್ರದ ಅಪ್​ಡೇಟ್​ ನೀಡಿದ್ರು ಕಂಗನಾ: ಇದು ನಟಿಯ ಕೊನೆಯ ಚಿತ್ರವೆ? 

ಇಂದು ಅಂದರೆ ಜೂನ್​ 25 ರಾಷ್ಟ್ರೀಯ ತುರ್ತು ಪರಿಸ್ಥಿತಿ( National Emergency) ಕರಾಳ ನೆನಪಿಗೆ 50 ವರ್ಷವಾಗಿದೆ. ಜೂನ್ 25, 1975ರಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತುರ್ತುಪರಿಸ್ಥಿತಿ ಘೋಷಣೆ ಮಾಡಿದ್ದು, 21 ತಿಂಗಳು ಕಾಲ ತುರ್ತು ಪರಿಸ್ಥಿತಿ ಅಸ್ತಿತ್ವದಲ್ಲಿ ಇತ್ತು. 1975, ಜೂನ್ 25ರಂದು ಭಾರತದ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಇಂದು ತುರ್ತು ಪರಿಸ್ಥಿತಿ ಹೇರಿಕೆ ಖಂಡಿಸಿ ದೇಶಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಕರ್ನಾಟಕದಲ್ಲೂ ಕಪ್ಪುಪಟ್ಟಿ ಧರಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ತುರ್ತು ಪರಿಸ್ಥಿತಿ ಕಪ್ಪು ಚುಕ್ಕೆ. ಸಂವಿಧಾನವನ್ನು ತಿರಸ್ಕರಿಸಿ ತುರ್ತು ಪರಿಸ್ಥಿತಿ ಹೇರಲಾಯ್ತು. ಭಾರತದ ಯುವ ಪೀಳಿಗೆ ಇದನ್ನ ಎಂದು ಮರೆಯೋದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅತ್ತ ಹೇಳುತ್ತಿದ್ದರೆ, ಇತ್ತ ನೂತನ ಸಂಸದೆ ಕಂಗನಾ ರಣಾವತ್​ ತಮ್ಮ ಮುಂಬರುವ ಚಿತ್ರ ಎಮರ್ಜೆನ್ಸಿಯ ಡೇಟ್​ ಘೋಷಣೆ ಮಾಡಿದ್ದಾರೆ. 


ಮನಸ್ಸಿಗೆ ಅನ್ನಿಸಿದ್ದನ್ನು ನೇರಾನೇರವಾಗಿ ಹೇಳಿ, ಯಾರಿಗೂ ಹೆದರದೇ ಧೈರ್ಯದಿಂದ ಮುನ್ನುಗ್ಗುತ್ತಲೇ ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವವರು ಬಾಲಿವುಡ್​ ನಟಿ ಕಂಗನಾ ರಣಾವತ್​ ಇದೀಗ ಸಂಸದೆ. ಸದ್ಯ ಯಾಕೋ ಬಾಲಿವುಡ್​ನಲ್ಲಿ ಅವರ ಚಿತ್ರಗಳು ಹಿಟ್​ ಆಗುತ್ತಲೇ ಇಲ್ಲ. ಅವರ ನಸೀಬು ಸದ್ಯ ಸರಿ ಇದ್ದಂತಿಲ್ಲ. ಒಂದರ ಮೇಲೊಂದು ಫ್ಲಾಪ್‌ ಚಿತ್ರಗಳನ್ನು ನೀಡುತ್ತಿದ್ದಾರೆ. ಎಷ್ಟೇ ಕಷ್ಟಪಟ್ಟು, ಶ್ರಮವಹಿಸಿ, ಉತ್ತಮ ನಟನೆ ಮಾಡಿದ್ದರೂ ಇವರ ಚಿತ್ರಗಳು ಶಾಕ್‌ ಮೇಲೆ ಶಾಕ್‌ ನೀಡುತ್ತಿವೆ. ಆದರೆ ಮೊದಲ ಬಾರಿಗೇ ಸಂಸದೆಯಾಗಿ ಲೋಕಸಭೆಗೆ ಎಂಟ್ರಿ ಕೊಟ್ಟಿದ್ದಾರೆ ನಟಿ. ಇಲ್ಲಿ ಅದೃಷ್ಟ ಖುಲಾಯಿಸಿದೆ. ಸದ್ಯ ನಟಿಯ ಕೈಯಲ್ಲಿ ಎಮರ್ಜೆನ್ಸಿ ಚಿತ್ರವಿದೆ. ಅಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರ ನಿರ್ವಹಿಸಿದ್ದಾರೆ. 1975 ರಲ್ಲಿ ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಘಟನೆಗಳನ್ನು ಆಧರಿಸಿದ ಚಿತ್ರವಿದು. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಜೀವನದ ಸುತ್ತ ಸುತ್ತುತ್ತದೆ ಈ ಸಿನಿಮಾ. 1975ರಲ್ಲಿ ತುರ್ತು ಪರಿಸ್ಥಿತಿ ( Emergency) ಘೋಷಣೆ ಮಾಡಿದಾಗ ದೇಶದಲ್ಲಿ ಆಗಿರುವ ಅಲ್ಲೋಲ ಕಲ್ಲೋಲಗಳೇನು? ದೇಶ ಯಾವ ಸ್ಥಿತಿಗೆ ತಲುಪಿತ್ತು ಈ ಕುರಿತು ಎಳೆಎಳೆಯಾಗಿ ಚಿತ್ರ ಬಿಚ್ಚಿಟ್ಟಿರುವುದಾಗಿ ನಟಿ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ತುರ್ತು ಪರಿಸ್ಥಿತಿಯು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ ಎಂದು ಈ ಹಿಂದೆ ನಟಿ ಹೇಳಿದ್ದರು. 

'ವೀಕೆಂಡ್' ವಿರುದ್ಧ ಅಸಮಾಧಾನ ಹೊರಹಾಕಿದ ಸಂಸದೆ ಕಂಗನಾ ಖಡಕ್​ ಮಾತೀಗ ವೈರಲ್​

ನವೆಂಬರ್ 24, 2023 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಇದೀಗ ಬರುವ ಜೂನ್‌ 14ರಂದು ಚಿತ್ರ ರಿಲೀಸ್‌ ಆಗಲಿದೆ ಎನ್ನಲಾಗಿತ್ತು. ಕಂಗನಾ ಥೇಟ್​ ಇಂದಿರಾ ಗಾಂಧಿಯವರಂತೆ ಮೇಕಪ್​ ಮಾಡಿಕೊಂಡು, ಅವರಂತೆಯೇ ಟ್ರೇಲರ್​ ಕಳೆದ ವರ್ಷವೇ ಬಿಡುಗಡೆಯಾಗಿತ್ತು. ಕಂಗನಾ ಅವರ ಈ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ ಯಾಕೋ ಈ ಚಿತ್ರಕ್ಕೆ ಇನ್ನೂ ಮುಹೂರ್ತ ಕೂಡಿ ಬರುತ್ತಲೇ ಇರಲಿಲ್ಲ. ಇದೀಗ ಬಿಜೆಪಿಯ ಸಂಸದೆ ಆದ ಮೇಲೆ ನಟಿಯ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮನೆ ಮಾಡಿದೆ. ಇದೀಗ ನಟಿ ಸೆಪ್ಟೆಂಬರ್​ 6ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದಾರೆ. ಇನ್ನಷ್ಟು ವಿಳಂಬ ಮಾಡದೇ ಚಿತ್ರ ಬೇಗ ರಿಲೀಸ್​ ಮಾಡಿ ಸತ್ಯವನ್ನು ಜನರ ಮುಂದಿಡಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಈ ಮಧ್ಯೆ, ನಟಿಯ ಈ ಹಿಂದಿನ ವಿಡಿಯೋ ಒಂದು ವೈರಲ್​ ಆಗುತ್ತಿದೆ. ರಾಜಕೀಯಕ್ಕೆ ಕಂಗನಾ ಬರಲಿದ್ದಾರೆ ಎಂದು ಸುಳಿವು ಸಿಕ್ಕ ಸಂದರ್ಭದಲ್ಲಿ, ಇಂದಿರಾಗಾಂಧಿ ರೋಲ್‌ನಲ್ಲಿ ಮಿಂಚುತ್ತಿರುವುದಾಗ, ಅವರಿಗೆ ಪ್ರಶ್ನೆಯೊಂದು ಎದರುರಾಗಿತ್ತು. ಈ ಪ್ರಶ್ನೆಯನ್ನು ತೆಲುಗು ಚಿತ್ರ ರಜಾಕರ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕೇಳಲಾಗಿದೆ. ‘ನೀವು ದೇಶದ ಪ್ರಧಾನಿಯಾಗಲು ಇಷ್ಟಪಡುತ್ತೀರಾ?’ ಎಂಬ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟಿ ಜೋರಾಗಿ ನಗುತ್ತಲೇ, ಉತ್ತರ ನೀಡಿದ್ದಾರೆ. ಇತ್ತೀಚೆಗಷ್ಟೇ ಎಮರ್ಜೆನ್ಸಿ ಸಿನಿಮಾದಲ್ಲಿ ಇಂದಿರಾಗಾಂಧಿ ರೋಲ್‌ ಮಾಡಿದ್ದೇನೆ. ಇನ್ನೇನು ಅದು ಬಿಡುಗಡೆಯಾಗಲಿದೆ. ಅದನ್ನು ನೋಡಿದ ನಂತರ ನಾನು ಪ್ರಧಾನಿಯಾಗುವುದು ಯಾರಿಗೂ ಇಷ್ಟವಾಗುವುದಿಲ್ಲ ಎಂದು ತಮಾಷೆಯಾಗಿ ಹೇಳುತ್ತಲೇ ಜೋರಾಗಿ ನಕ್ಕಿದ್ದಾರೆ. ಇನ್ನು ಕಂಗನಾ ಅವರು ತಾವು ಗೆಲುವು ಸಾಧಿಸಿದರೆ, ನಟನೆಯಿಂದ ದೂರ ಇರುವುದಾಗಿ ಹೇಳಿದ್ದರು. ಆದ್ದರಿಂದ ಎಮರ್ಜೆನ್ಸಿ ಇವರ ಕೊನೆಯ ಚಿತ್ರವಾಗಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ನಟನೆ ಬಿಡಬೇಡಿ ಎಂದೂ ಅಭಿಮಾನಿಗಳು ಹೇಳುತ್ತಿದ್ದಾರೆ. 

ಸಂಸದೆಯಾದ್ರೆ ನಟನೆಗೆ ಗುಡ್​​ಬೈ ಹೇಳ್ತಾರಾ ಕಂಗನಾ? ನಟಿಯ ಹೇಳಿಕೆಗೆ ಅಭಿಮಾನಿಗಳು ಏನಂತಿದ್ದಾರೆ?