ಸ್ಟ್ರೀಟ್ ಫುಡ್‌ನಿಂದ ರಾಯಲ್ ಫುಡ್ ತನಕ, ಅನಂತ್ ಅಂಬಾನಿ ಮದ್ವೇಲಿ ಭಾರತೀಯ ಆಹಾರದ ಅನಾವರಣ!
ಅನಂತ್ ಅಂಬಾನಿ- ರಾಧಿಕಾ ಮದುವೆ ಮುಗಿದ್ರು ಅದ್ರ ಘಮ ಕಡಿಮೆ ಅಗಿಲ್ಲ. ಅತಿಥಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಮದುವೆ ಬಗ್ಗೆ ಈಗ್ಲೂ ಮಾತನಾಡ್ತಿದ್ದಾರೆ. ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಮೆನು ಬಗ್ಗೆ ನಟಿ ಕೂಡ ತಮ್ಮ ಅನುಭವ ಹೇಳಿದ್ದಾರೆ.
ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ – ರಾಧಿಕಾ ಮದುವೆ ಸಮಾರಂಭದಲ್ಲಿ ಉಡುಗೆಯಿಂದ ಹಿಡಿದು ಅಡುಗೆವರೆಗೆ ಎಲ್ಲವೂ ಸುದ್ದಿ ಮಾಡಿವೆ. ಜುಲೈ 12ರಂದು ಅನಂತ್, ರಾಧಿಕಾ ಮದುವೆ ನಡೆದಿದ್ದು, ಮದುವೆ ಮೆನು ಎಲ್ಲರ ಗಮನ ಸೆಳೆದಿದೆ. ಮುಖೇಶ್ ಅಂಬಾನಿ ತಮ್ಮ ಕೊನೆ ಮಗನ ಮದುವೆಯಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ವೆರೈಟಿ ಖಾದ್ಯವನ್ನು ಅತಿಥಿಗಳಿಗೆ ಉಣಬಡಿಸಿದ್ರು. ಈ ಆಹಾರ ಮೆನು ರಾಯಲ್ ಗಿಂತ ಕಡಿಮೆ ಏನಿರಲಿಲ್ಲ. ಇದನ್ನು ನಟಿ, ಅಹ್ಸಾಸ್ ಚನ್ನಾ ಕೂಡ ಮೆಲುಕು ಹಾಕಿದ್ದಾರೆ.
ಕೋಟಾ ಫ್ಯಾಕ್ಟರಿ (Kota Factory) ನಟಿ ಅಹ್ಸಾಸ್ ಚನ್ನಾ (Ahsaas Channa) , ಅನಂತ್ ಮದುವೆಯಲ್ಲಿ ಗೋಲ್ಡನ್ ಡ್ರೆಸ್ ನಲ್ಲಿ ಮಿಂಚಿದ್ದರು. ಮಾಧ್ಯಮಗಳ ಜೊತೆ ಅನಂತ್ ಮದುವೆ ಮೆನು ಬಗ್ಗೆ ಮಾತನಾಡಿದ ಅಹ್ಸಾನ್ ಚನ್ನಾ, ಇಡೀ ಒಂದು ಹಾಲ್ ಸಿಹಿ ತಿಂಡಿಗಳಿಂದ ತುಂಬಿತ್ತು. ಮೊದಲು ನಾವು ಆ ಹಾಲ್‌ಗೆ ಹೋದ್ವಿ. ಅಲ್ಲಿ ಹೋಗಿ ನೋಡಿದ್ರೆ ಸಿಹಿ ತಿಂಡಿಯ ದೊಡ್ಡ ಪಟ್ಟಿಯೇ ಇತ್ತು. ಅತಿಥಿಗಳು ಕ್ರೀಂ ರಬ್ರಿ, ರಿಫ್ರೆಶಿಂಗ್ ಲಸ್ಸಿಯನ್ನು ಎಂಜಾಯ್ ಮಾಡ್ತಿದ್ದರು ಎಂದಿದ್ದಾರೆ. ಅಂಬಾನಿ ಕುಟುಂಬದ ಮದುವೆಗೆ ನನಗೆ ಆಹ್ವಾನ ಬಂದಿದ್ದು ಖುಷಿ ನೀಡಿದೆ ಎಂದೂ ನಟಿ ಇದೇ ಸಮಯದಲ್ಲಿ ಹೇಳಿದ್ದಾರೆ.
ಅನಂತ್ ಅಂಬಾನಿ (Ambani) ಮದುವೆಯ ಮೆನು : ಅಂಬಾನಿ ಕುಟುಂಬ ತಮ್ಮ ಗೌರವಾನ್ವಿತ ಅತಿಥಿಗಳಿಗೆ ರಾಜಮನೆತನಕ್ಕೆ ಯೋಗ್ಯವಾದ ಔತಣವನ್ನು ಉಣಬಡಿಸಿದೆ. ಸಾಂಪ್ರದಾಯಿಕ ಭಾರತೀಯ ಆಹಾರದ (Traditional Indian Food) ಜೊತೆ ವಿದೇಶಿ ಪಾಕಪದ್ಧತಿಗಳ ರುಚಿ ಸವಿಯುವ ಅವಕಾಶ ಅತಿಥಿಗಳಿಗೆ ದೊರಕಿತ್ತು.25 ಸಾವಿರಕ್ಕೂ ಹೆಚ್ಚು ವೆರೈಟಿ ಖಾದ್ಯಗಳನ್ನು ಇಲ್ಲಿ ಬಡಿಸಲಾಯ್ತು.
ಗುಜರಾತ್, ಪಂಜಾಬ್ ಮತ್ತು ಕಾಶ್ಮೀರದಂತಹ ವಿವಿಧ ರಾಜ್ಯಗಳ ಭಾರತೀಯ ಪಾಕಪದ್ಧತಿ ಮತ್ತು ಇಂಡೋನೇಷಿಯನ್ ಮತ್ತು ಇಟಾಲಿಯನ್ ಪಾಕಪದ್ಧತಿಗಳನ್ನು ಇಲ್ಲಿ ಅತಿಥಿಗಳು ಸವಿದಿದ್ದಾರೆ. ಪ್ರತಿ ಆಹಾರ ತಯಾರಿಸಲು ಪರಿಣಿತ ಬಾಣಸಿಗರನ್ನೇ ಕರೆಸಲಾಗಿದೆ. ದೇಶ – ವಿದೇಶದಿಂದ ಪ್ರಸಿದ್ಧ ಬಾಣಸಿಗರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮದುವೆಯಲ್ಲಿ ವಾರಣಾಸಿಯ ಅತ್ಯಂತ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ ಕಾಶಿ ಚಾಟ್ ಭಂಡಾರ್ ನ ಆಲೂ ಟಿಕ್ಕಿ, ಟೊಮೆಟೊ ಚಾಟ್, ಚನಾ ಕಚೋರಿ, ಪಾಲಕ್ ಚಾಟ್ ಮತ್ತು ಕುಲ್ಫಿಯಂತಹ ಕೆಲವು ಸಹಿ ಭಕ್ಷ್ಯಗಳನ್ನು ಉಣಬಡಿಸಲಾಯ್ತು. ಕಾಶಿಗೆ ಹೋಗಿ ಅಲ್ಲಿನ ಚಾಟ್ ರುಚಿ ನೋಡಿ ಬಂದ ನಂತ್ರ ನೀತಾ ಅಂಬಾನಿ ಈ ಚಾಟ್ ಗಳನ್ನು ತಮ್ಮ ಮೆನುವಿನಲ್ಲಿ ಸೇರಿಸಿದ್ದರು.
ಮದುವೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಮತ್ತೊಂದು ಚಾಟ್ ಇಂದೋರ್‌ನ ಗರಡು ಚಾಟ್. ಇದು ಮಸಾಲೆಯುಕ್ತ ಮತ್ತು ಕಟುವಾದ ಚಾಟ್ ಆಗಿದ್ದು, ಇಂದೋರ್ ನಲ್ಲಿ ಪ್ರಸಿದ್ಧಿ ಪಡೆದಿದೆ.
ಅಂತರಾಷ್ಟ್ರೀಯ ಅತಿಥಿಗಳಿಗಾಗಿ ಮುಖೇಶ್ ಅಂಬಾನಿ ಇಂಡೋನೇಷಿಯಾದ ಕಂಪನಿಯ ಸೇವೆಯನ್ನು ತೆಗೆದುಕೊಂಡಿದ್ದರು. ವಿದೇಶಿ ಅತಿಥಿಗಳಿಗೆ ಅಗತ್ಯವಿರುವ ಆಹಾರವನ್ನು ಅವರು ತಯಾರಿಸಿದ್ದರು. ತೆಂಗಿನಕಾಯಿಯಿಂದ ಮಾಡಿದ 100ಕ್ಕೂ ಹೆಚ್ಚು ಖಾದ್ಯಗಳನ್ನೂ ಮದುವೆಯಲ್ಲಿ ತಯಾರಿಸಲಾಗಿತ್ತು. ಅತಿಥಿಗಳಿಗಾಗಿ ಚೀಸ್ ವೀಲ್ ಪಾಸ್ತಾ ಲಭ್ಯವಿತ್ತು.
ಮೆನುವಿನಲ್ಲಿ ಮತ್ತೊಂದು ಗಮನಾರ್ಹ ಸೇರ್ಪಡೆಯೆಂದರೆ ಮದ್ರಾಸ್‌ನ ಪ್ರಸಿದ್ಧ ಫಿಲ್ಟರ್ ಕಾಫಿ. ಇದನ್ನು ಮದ್ರಾಸ್ ಕಾಫಿ, ಕುಂಭಕೋಣಂ ಕಾಫಿ, ಮೈಲಾಪುರ ಕಾಫಿ ಮತ್ತು ಮೈಸೂರು ಫಿಲ್ಟರ್ ಕಾಫಿ ಎಂದೂ ಕರೆಯಲಾಗುತ್ತದೆ. ಊಟದ ಜೊತೆ ಬನಾರಸಿ ಪಾನ್ (Banarasi Pan) ವ್ಯವಸ್ಥೆ ಕೂಡ ಮಾಡಲಾಗಿತ್ತು. ಮದುವೆಯಲ್ಲಿ ಯಾವುದೇ ಆಲ್ಕೋಹಾಲ್ (Alochohol) ಸೇವೆ ಇರಲಿಲ್ಲ. ಅತಿಥಿಗಳಿಗೆ ಏಳನೀರು, ಜ್ಯೂಸ್, ಕ್ಯಾಂಪಾ ಕೋಲಾ, ಲಸ್ಸಿ, ಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು.