ಖ್ಯಾತ ನಟ ವಿಜಯ್‌ ಅಭಿನಯದ ಬಹುನಿರೀಕ್ಷಿತ ‘ಮಾಸ್ಟರ್‌’ ಚಿತ್ರ ಬುಧವಾರ ತಮಿಳುನಾಡು ಸೇರಿದಂತೆ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಭರ್ಜರಿ ಬಿಡುಗಡೆ ಕಂಡಿದೆ. ಕೋವಿಡ್‌ ಲಾಕ್ಡೌನ್‌ನಿಂದಾಗಿ ಸುಮಾರು 9 ತಿಂಗಳ ಕಾಲ ಮುಂದೂಡಲ್ಪಟ್ಟಿದ್ದ ಚಿತ್ರ ಬಿಡುಗಡೆಯಾಗುತ್ತಲೇ, ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳ ಧಾವಿಸಿದ್ದಾರೆ. ಲಾಕ್ಡೌನ್‌ ನಂತರ ದಕ್ಷಿಣ ಭಾರತದ ಖ್ಯಾತ ನಟರೊಬ್ಬರ ಚಿತ್ರ ಬಿಡುಗಡೆಯಾಗುತ್ತಿರುವ ಮೊದಲ ಉದಾಹರಣೆ ಇದು.

ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲೂ ಭಾರೀ ಬಜೆಟ್ಟಿನ ಚಿತ್ರಗಳ ಬಿಡುಗಡೆಗೆ ಮುನ್ನುಡಿ ಬರೆಯಬಹುದು. ಒಳ್ಳೆಯ ಚಿತ್ರಗಳು ಬಿಡುಗಡೆಯಾದರೆ ಜನ ಥಿಯೇಟರ್‌ಗೆ ಬರಲು ಹಿಂಜರಿಯುವುದಿಲ್ಲ ಎಂಬ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗಿದೆ.

ಕಾರ್ಮಿಕರಿಗೆ ವೇತನ ಪಾವತಿಸದ ರಾಮ್ ಗೋಪಾಲ್ ವರ್ಮಾಗೆ ಲೀಗಲ್‌ ನೋಟಿಸ್‌

ತಮಿಳುನಾಡಲ್ಲಿ ಚಿತ್ರಮಂದಿರಕ್ಕೆ ಆರಂಭಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದರು ಬಹುಬಜೆಟ್ಟಿನ ಚಿತ್ರ ಬಿಡುಗಡೆಗೆ ನಿರ್ಮಾಪಕರು ಹಿಂದುಮುಂದು ನೋಡಿದ್ದರು. ಆದರೆ ಸಂಕ್ರಾತಿ ಹಿನ್ನೆಲೆಯಲ್ಲಿ ‘ಮಾಸ್ಟರ್‌’ ಸೇರಿದಂತೆ ಇನ್ನಿತರೆ ಕೆಲ ಭಾರೀ ಬಜೆಟ್ಟಿನ ಚಿತ್ರ ಬಿಡುಗಡೆಗೆ ನಿರ್ಮಾಪಕರು ಗಟ್ಟಿಮನಸ್ಸು ಮಾಡಿದ್ದು ಇದೀಗ ಫಲಕೊಟ್ಟಿದ್ದು, ಜನ ಕೋವಿಡ್‌ ಭೀತಿ ಮರೆತು ಚಿತ್ರಮಂದಿರಗಳತ್ತ ಮುಕ್ತವಾಗಿ ಆಗಮಿಸಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ಇತರೆ ಕೆಲ ರಾಜ್ಯಗಳಲ್ಲೂ ಚಿತ್ರಕ್ಕೆ ಇದೇ ರೀತಿಯಲ್ಲಿ ಅತ್ಯುತ್ತಮ ಎನ್ನಬಹುದಾದ ಪ್ರತಿಕ್ರಿಯೆ ಸಿಕ್ಕಿದೆ.

ನಿರ್ಮಾಪಕರು ಮತ್ತು ನಟರ ಮನವಿ ಹಿನ್ನೆಲೆಯಲ್ಲಿ ಇತ್ತೀಚೆಗೆ ತಮಿಳುನಾಡು ಸರ್ಕಾರ, ಚಿತ್ರಮಂದಿರದಲ್ಲಿ ಪೂರ್ಣ ಸೀಟು ಭರ್ತಿಗೆ ಅವಕಾಶ ನೀಡಿತ್ತು. ಕೋವಿಡ್‌ ನಿಯಮ ಕಡ್ಡಾಯ ಪಾಲಿಸುವಂತೆ ಕೇಂದ್ರದ ಸೂಚನೆ ಹಿನ್ನೆಲೆಯಲ್ಲಿ ಶೇ.50ರಷ್ಟುಮಾತ್ರ ಸೀಟು ಭರ್ತಿಯ ಹಿಂದಿನ ಆದೇಶ ಮರುಜಾರಿ ಮಾಡಿತ್ತು. ಆದರೆ ಬುಧವಾರ ಈ ನಿಯಮಗಳನ್ನು ಗಾಳಿಗೆ ತೂರಿ ಬಹುತೇಕ ಥಿಯೇಟರ್‌ಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು. ಹೀಗಾಗಿ ಕೆಲ ಥಿಯೇಟರ್‌ಗಳಿಗೆ ಸ್ಥಳೀಯಾಡಳಿತಗಳು ದಂಡ ವಿಧಿಸಿವೆ.

ಮುಂಜಾನೆ 3ಕ್ಕೇ ಹಾಲಿನ ಅಭಿಷೇಕ!

ಬಹುತೇಕ ವರ್ಷದ ನಂತರ ನೆಚ್ಚಿನ ನಟನ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಹಲವು ಥಿಯೇಟರ್‌ಗಳಲ್ಲಿ ಮುಂಜಾನೆ 3ಕ್ಕೆ ಮೊದಲ ಶೋ ಆಯೋಜಿಸಲಾಗಿತ್ತು. ಅದಕ್ಕೂ ಮೊದಲೇ ಸ್ಥಳದಲ್ಲಿ ನೆರೆದಿದ್ದ ವಿಜಯ್‌ ಅಭಿಯಾನಿಗಳು ಭಾರೀ ಗಾತ್ರದ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಸಿಹಿ ಹಂಚಿ, ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ಬಿಡುಗಡೆಗೆ ಮುನ್ನವೇ ಮಾಸ್ಟರ್‌ ಚಿತ್ರ ವಿವಿಧ ಹಕ್ಕುಗಳ ಮಾರಾಟದ ಮೂಲಕ 200 ಕೋಟಿ ರು. ಸಂಗ್ರಹಿಸಿದೆ. ಮೊದಲ ದಿನ ಟಿಕೆಟ್‌ ಮೂಲಕ 20 ಕೋಟಿ ರು.ಗೂ ಹೆಚ್ಚಿನ ಕಲೆಕ್ಷನ್‌ ನಿರೀಕ್ಷೆ ಇದೆ.

ಮಾಸ್ಟರ್‌ ಚಿತ್ರ ಎಲ್ಲಿ ಬಿಡುಗಡೆ?

ತಮಿಳ್ನಾಡಿನಲ್ಲಿ 1000 ಥಿಯೇಟರ್‌ನಲ್ಲಿ ಬಿಡುಗಡೆಯಾದ ಚಿತ್ರ

ದೇಶಾದ್ಯಂತ 3800 ಥಿಯೇಟರ್‌ನಲ್ಲಿ‌ ಬಿಡುಗಡೆ