Asianet Suvarna News Asianet Suvarna News

ಸಿದ್ದಗಂಗಾ ಶ್ರೀಗಳ ಬಗ್ಗೆ ಬರ್ತಿದೆ ಮಿನಿ ಸೀರಿಸ್; ಶಿವಕುಮಾರ ಸ್ವಾಮೀಜಿ ಪಾತ್ರದಲ್ಲಿ ಅಮಿತಾಬ್?

ಸಿದ್ದಗಂಗಾ ಶ್ರೀಗಳ ಬಗ್ಗೆ ಮಿನಿ ಸೀರಿಸ್ ತಯಾರಾಗುತ್ತಿದೆ. ಹಂಸಲೇಖ ಸಾರಥ್ಯದಲ್ಲಿ ಬರ್ತಿರುವ ಈ ಮಿನಿ ಸೀರಿಸ್ ಅನ್ನು ಕೇಂದ್ರ ಮಂತ್ರಿ ಅಮಿತ್ ಷಾ ಉದ್ಘಾಟನೆ ಮಾಡುತ್ತಿದ್ದಾರೆ. ಶ್ರೀಗಳ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Kannada directors approached to Amitabh Bachchan for the role of siddaganga sri
Author
Bengaluru, First Published Mar 30, 2022, 11:04 AM IST

ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ (Siddaganga Shivakumara Swamiji) ಮಾಡಿದ ಸಾಮಾಜಿಕ ಕೆಲಸಗಳು ಅಪಾರ. ಸಾವಿರಾರು ಮಕ್ಕಳ ಬದುಕಿಗೆ ದಾರಿದೀಪವಾದ ಮಹಾಗುರು. ಸಿದ್ದಗಂಗಾ ಶ್ರೀಗಳೆಂದರೆ ಎಲ್ಲರಿಗೂ ಅಪಾರ ಭಕ್ತಿ ಮತ್ತು ಗೌರವ. ಇದೀಗ ಅವರ ಕುರಿತು ಮಿನಿ ಸೀರಿಸ್ (Mini Series) ತಯಾರಾಗುತ್ತಿದೆ. ಈಗಾಗಲೇ ಈ ಬಗ್ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಇದರ ಮತ್ತೊಂದು ವಿಶೇಷ ಎಂದರೆ ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅವರು ನಟಿಸಬೇಕು ಎಂಬುದು ಚಿತ್ರತಂಡದ ಆಸೆ. ಹಾಗಾಗಿ ಅಮಿತಾಬ್ ಕಾಲಿ ಶೀಟ್ ಗಾಗಿ ಸಿನಿಮಾತಂಡ ಕಾಯುತ್ತಿದೆ.

ಈಗಾಗಲೇ ಅಮಿತಾಬ್ ಬಳಿ ಈ ವಿಚಾರದ ಬಗ್ಗೆ ಮಾತುಕತೆ ಕೂಡ ನಡೆಸಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ಒಂದು ವೇಳೆ ಬಿಗ್ ಬಿ ಶ್ರೀಗಳ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡರೆ ಪೂರ್ಣಪ್ರಮಾಣದಲ್ಲಿ ಕನ್ನಡದಲ್ಲಿ ನಟಿಸಿದಂತೆ ಆಗಲಿದೆ. ಅಂದಹಾಗೆ ಅಮಿತಾಬ್ ಈಗಾಗಲೇ ಕನ್ನಡದ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಮೃತಧಾರೆ ಸಿನಿಮಾದಲ್ಲಿ ಅಮಿತಾಭ್​ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಅಂದಹಾಗೆ ಸಿದ್ದಗಂಗಾ ಶ್ರೀಗಳ ಬಗ್ಗೆ ಮಿನಿ ಸೀರಿಸ್ ಮಾಡುವ ಜವಾಬ್ದಾರಿಯನ್ನು ನಾದಬ್ರಹ್ಮ ಹಂಸಲೇಖ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಂಸಲೇಖ, 'ಅಮಿತಾಭ್ ಬಚ್ಚನ್ ಅವರು ಸಿದ್ದಗಂಗಾ ಶ್ರೀಗಳ ಪಾತ್ರ ಮಾಡಲು ಈಗಾಗಲೇ ಅಪ್ರೋಚ್ ಮಾಡಲಾಗಿದೆ. ಅವರು ಕಥೆಯನ್ನು ಕೇಳಿದ್ದಾರೆ. ಆದರೆ, ಸದ್ಯ ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರೋ ಕಾರಣ ಗ್ರೀನ್ ಸಿಗ್ನಲ್ ಗೆ ಕಾಯುತ್ತಿದ್ದೇವೆ' ಎಂದು ಹೇಳಿದ್ದಾರೆ.

Tumkauru: ಶಿವಕುಮಾರ ಶ್ರೀ ಪ್ರಶಸ್ತಿ ಮೀರಿದವರು, ಭಾರತ ರತ್ನ ಕೇಳೋಲ್ಲ: ಸಿದ್ಧಗಂಗಾಶ್ರೀ

ಏಪ್ರಿಲ್ 1 ಸಿದ್ದಗಂಗಾ ಶ್ರೀಗಳ 115 ಜಯಂತೋತ್ಸವದ ಪ್ರಯುಕ್ತ ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. ಡಾ. ಹಂಸಲೇಖ ಅವರ ಸಾರಥ್ಯದಲ್ಲಿ ಒಟ್ಟು 52 ಎಪಿಸೋಡ್​ ಗಳನ್ನು ಒಳಗೊಂಡ ಈ ಮಿನಿ ಸಿರೀಸ್ ಮಾಡಲಾಗುತ್ತಿದೆ. ಇದು ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲೂ ತಯಾರಾಗುತ್ತಿದೆ. ದೊಡ್ಡ ಬಜೆಟ್ ನಲ್ಲಿ ಈ ಸೀರಿಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲಿಷ್​ ಹಾಗೂ ಸಂಸ್ಕೃತ ಭಾಷೆಗಳಲ್ಲಿ ಈ ಸೀರಿಸ್ ಸಿದ್ಧವಾಗುತ್ತಿದೆ. ಏಳಕ್ಕೂ ಹೆಚ್ಚು ತಂಡಗಳಲ್ಲಿ, 300 ಅಧಿಕ ತಂತ್ರಜ್ಞರು ಈ ಮಿನಿ ಸೀರಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಏ.1ರಂದು ಶಿವಕುಮಾರ ಸ್ವಾಮೀಜಿಗಳ 115ನೇ ಜನ್ಮದಿನ, ಅಮಿತ್ ಷಾ ಮುಖ್ಯ ಅತಿಥಿ!

ಶ್ರೀಗಳ ಬಗ್ಗೆ ಬರ್ತಿರುವ ಸೀರಿಸ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟನೆ ಮಾಡುತ್ತಿದ್ದಾರೆ. ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅಮಿತ್ ಷಾ ಅವತ್ತೇ ಮಿನಿ ಸೀರಿಸ್ ಅನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ 115 ಜನ ಗಾಯಕರು ಹಂಸಲೇಖ ಅವರ ಸಾರಥ್ಯದಲ್ಲಿ 6 ಹಾಡುಗಳನ್ನ ಹಾಡಲಿದ್ದಾರೆ. ಅಮಿತ್ ಷಾ ಜೊತೆಗೆ ರಾಜ್ಯದ ನಾಯಕರು ಇರಲಿದ್ದಾರೆ. ಈಗಾಗಲೇ ಕುತೂಹಲ ಮೂಡಿಸಿರುವ ಈ ಸೀರಿಸ್ ಹೇಗೆ ಮೂಡಿಬರಲಿ, ಅಮಿತಾಬ್ ಬಚ್ಚನ್ ಶ್ರೀಗಳಾಗಿ ಕಾಣಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.

Follow Us:
Download App:
  • android
  • ios