OSCAR ವೇದಿಕೆಯಲ್ಲಿ ದೀಪಿಕಾ ಪಡುಕೋಣೆ: ಹಾಡಿ ಹೊಗಳಿದ ಕಂಗನಾ ರಣಾವತ್
ಆಸ್ಕರ್ ಅಂಗಳದಲ್ಲಿ ದೀಪಿಕಾ ಪಡುಕೋಣೆ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಇವರ ನಿರೂಪಣಾ ಶೈಲಿಗೆ ಜಗತ್ತೇ ಮೆಚ್ಚಿಕೊಂಡಿದ್ದು, ನಟಿ ಕಂಗನಾ ರಣಾವತ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅವರು ಏನು ಹೇಳಿದ್ದಾರೆ?
ಜಗತ್ತೇ ಕಾಯುತ್ತಿದ್ದ ಪ್ರತಿಷ್ಠಿತ ಆಸ್ಕರ್ (Oscar) ಪ್ರಶಸ್ತಿಗಳು ಘೋಷಣೆಯಾಗಿದ್ದು, ಭಾರತವನ್ನು ಪ್ರತಿನಿಧಿಸಿದ್ದ ಆರ್‌ಆರ್‌ಆರ್ ಸಿನಿಮಾದ ‘ನಾಟು ನಾಟು’ (Natu Natu) ಹಾಡಿಗೆ (Song) ಆಸ್ಕರ್ ಪ್ರಶಸ್ತಿ ಸಂದಿದೆ. ಇದು ಭಾರತೀಯರಿಗೆ ಒಂದು ಸಂತಸದ ಸುದ್ದಿಯಾದರೆ, ಇನ್ನೊಂದು ಈ ವೇದಿಕೆ ಮೇಲೆ ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವುದು ಮತ್ತೊಂದು ಹೆಮ್ಮೆ. ನಿರೂಪಕಿಯಾಗಿ ಕಾಣಿಸಿಕೊಂಡ ದೀಪಿಕಾ ಅವರ ನಿರೂಪಣೆಗೆ ಜಗತ್ತೇ ಮನಸೋತಿದೆ. 2022ರ ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ದೀಪಿಕಾ ಅವರು ತೀರ್ಪುಗಾರರಾಗಿದ್ದರು. ಈಗ ಆಸ್ಕರ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಆಸ್ಕರ್‌ಗೆ ತೆಲುಗಿನ 'ಆರ್‌ಆರ್‌ಆರ್' ಸಿನಿಮಾದ 'ನಾಟು ನಾಟು..' ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಮುನ್ನ ನಾಟು ನಾಟು ಪ್ರದರ್ಶನವಿತ್ತು. ಆಗಲೇ ಈ ಹಾಡು, ಭಾರತೀಯ ಚಿತ್ರ ಹಾಗೂ ಕಥೆಯ ಕುರಿತು ಅನೌನ್ಸ್‌ಮೆಂಟ್ ಮಾಡಿದ ದೀಪಿಕಾ ಪಡುಕೋಣೆ ಭಾವುಕರಾದರು. ವಜ್ರದ ನೆಕ್ಲೇಸ್, ಬಳೆ ಮತ್ತು ವೆಲ್ವೆಟ್, ಕ್ಲಾಸಿ ಕಪ್ಪು ಗೌನ್‍ನಲ್ಲಿ ಮನಮೋಹಕವಾಗಿ ಕಾಣುತ್ತಿದ್ದ ನಟಿಯ ಸುಂದರ ರೂಪದಷ್ಟೇ ನಿರೂಪಣೆಯೂ ಅಷ್ಟೇ ಸುಂದರವಾಗಿದೆ. ಇವರು ವೇದಿಕೆ ಮೇಲೆ ಬರುತ್ತಿದ್ದಂತೆಯೇ ಎಲ್ಲರೂ ಜೋರಾಗಿ ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು. ವಿದೇಶಿ ವೇದಿಕಯಲ್ಲಿ ಭಾರತೀ ಆ್ಯಕ್ಸೆಂಟ್‌ನಲ್ಲಿ ಮಾತನಾಡಿದ ದೀಪಿಕಾಗೆ ಮೆಚ್ಚುಗೆಯ ಮಾತುಗಳು ಸಾಗರವೇ ಹರಿದು ಬರುತ್ತಿದೆ.
ಇವರ ನಿರೂಪಣೆಯ ಶೈಲಿಗೆ ಜನರು ಮನಸೋತಿದ್ದಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು (Celebrities), ಗಣ್ಯರು ಈಕೆಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಯಾರನ್ನೂ ಸುಲಭವಾಗಿ ಹೊಗಳದ ನಟಿ ಕಂಗನಾ ರಣಾವತ್ ಸಹ (Kangana Ranaut) ದೀಪಿಕಾರನ್ನು ಹಾಡಿ ಹೊಗಳಿದ್ದಾರೆ. ಪಠಾಣ್ ಚಿತ್ರದ ಕುರಿತು ಈ ಹಿಂದೆ ಭಾರಿ ಟೀಕೆ ಮಾಡುವ ಸಮಯದಲ್ಲಿ ದೀಪಿಕಾ ಅವರ ವಿರುದ್ಧವೂ ಮಾತನಾಡಿದ್ದ ನಟಿ ಕಂಗನಾ ಅವರು, ಈಗ ದೀಪಿಕಾ ಅವರ ನಿರೂಪಣಾ ಶೈಲಿಗೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಬರೆದುಕೊಂಡಿರುವ ಅವರು, ಆಸ್ಕರ್ನಂಥ ಪ್ರತಿಷ್ಠಿತ ವೇದಿಕೆಯಲ್ಲಿ ಇಡೀ ರಾಷ್ಟ್ರವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಆದರೆ ದೀಪಿಕಾ ಅದನ್ನು ಮಾಡಿ ತೋರಿಸಿದ್ದಾರೆ ಎಂದಿದ್ದಾರೆ ಕಂಗನಾ.
Natu Natu ಎನ್ನುತ್ತ ದೀಪಿಕಾ ಭಾವುಕ: ಸೋಷಿಯಲ್ ಮೀಡಿಯಾ ತುಂಬಾ ಹಾಡಿನದ್ದೇ ಗುಂಗು
'ದೀಪಿಕಾ ಪಡುಕೋಣೆ (Deepika Padukone) ಎಷ್ಟು ಸುಂದರವಾಗಿ ಕಾಣುತ್ತಾರೆ, ಇಡೀ ರಾಷ್ಟ್ರವನ್ನು ಒಟ್ಟಿಗೆ ಹಿಡಿದುಕೊಂಡು, ಅದರ ಚಿತ್ರಣವನ್ನು, ಖ್ಯಾತಿಯನ್ನು ಆ ಸೂಕ್ಷ್ಮ ಹೆಗಲ ಮೇಲೆ ಹೊತ್ತುಕೊಂಡು ತುಂಬಾ ಸೌಜನ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ. ಇಂಥ ಕಲೆ ಎಲ್ಲರಿಗೂ ಸುಲಭದಲ್ಲಿ ದಕ್ಕುವುದಿಲ್ಲ. ಭಾರತೀಯ ಮಹಿಳೆಯರು ಅತ್ಯುತ್ತಮ ಎಂಬುದಕ್ಕೆ ದೀಪಿಕಾ ಸಾಕ್ಷಿಯಾಗಿ ನಿಂತಿದ್ದಾರೆ. ದೀಪಿಕಾ ಎತ್ತರದ ಸ್ಥಾನದಲ್ಲಿರುವಂತೆ ಭಾಸವಾಗುತ್ತಿದೆ,' ಎಂದು ಕಂಗನಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರ ಈ ನಿರೂಪಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿನಂದನೆಗಳ ಸುರಿಮಳೆಯೇ ಆಗುತ್ತಿದೆ. ಆಸ್ಕರ್ ವೇದಿಕೆಯಲ್ಲಿ ಆಕೆಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅನೇಕರು ಇದನ್ನು 'ಹೆಮ್ಮೆಯ ಕ್ಷಣ' ಎಂದು ಕರೆದಿದ್ದಾರೆ. ಮೊದಲ ಸುತ್ತಿನ ಪ್ರಕಟಣೆಗಳಲ್ಲಿ ದೀಪಿಕಾ ಪಡುಕೋಣೆ ನಿರೂಪಕರಲ್ಲಿ ಒಬ್ಬರು ಎಂದು ಬಹಿರಂಗಪಡಿಸಲಾಯಿತು. ಈ ಲಿಸ್ಟ್ ನಲ್ಲಿ ಡ್ವೇನ್ ಜಾನ್ಸನ್, ಮೈಕಲ್ ಬಿ ಜಾರ್ಡನ್, ರಿಜ್ ಅಹ್ಮದ್, ಎಮಿಲಿ ಬ್ಲಂಟ್, ಗ್ಲೆನ್ ಕ್ಲಾಸ್, ಜೆನಿಫರ್ ಕನೆಲ್ಲಿ, ಸ್ಯಾಮುವೆಲ್ ಎಲ್ ಜಾಕ್ಸನ್, ಮೆಲಿಸ್ಸಾ ಮೆಕಾರ್ತಿ, ಝಾಯ್ ಸಲ್ದಾನ, ಡಾನಿ ಯೆನ್, ಜೊನಾತನ್ ಮೇಜರ್ಸ್, ಟ್ರಾಯ್ ಕೋಚರ್, ಅರಿಯಾನಾ ಡಿಬೋಸ್, ಕ್ವೆಸ್ಟ್ ಲವ್, ಜುನೆಲ್ ಮೊನಿ ಅವರ ಹೆಸರುಗಳಿವೆ. ಅಂದಹಾಗೆ, ದೀಪಿಕಾ ಅವರು ಫ್ರೆಂಚ್ ಬ್ರ್ಯಾಂಡ್ ಲೂಯಿ ವಿಟಾನ್‌ನ ಪ್ರಚಾರ ರಾಯಭಾರಿ ಆಗಿದ್ದು, 2022ರಿಂದಲೂ ಇದರ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈಚೆಗೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಕತಾರ್‌ನಲ್ಲಿ (Katar) ಅನಾವರಣಗೊಳಿಸಿದ್ದು ಕೂಡ ದೀಪಿಕಾ ಪಡುಕೋಣೆ ಅನ್ನೋದು ವಿಶೇಷ.
ಉಕ್ರೇನ್‌ನಲ್ಲಿ ನಡೆದಿತ್ತು 'ನಾಟು ನಾಟು' ಚಿತ್ರೀಕರಣ, ಶ್ರಮವಿತ್ತು ಪೂರ್ಣ