ದಾಂಪತ್ಯ ಜೀವನ ಸುಖವಾಗಿ ನಡೆಯೋದು ಇದಕ್ಕಂತೆ! ಲಕ್ಷ ಲೈಕ್ಸ್ ಪಡೆದ ಕಂಗನಾ ಮಾತಿಗೆ ಪುರುಷರು ಗರಂ
ದಾಂಪತ್ಯ ಜೀವನ ಸುಖವಾಗಿ ನಡೆಯುತ್ತಿದೆ ಎಂದರೆ ಅಲ್ಲಿ ಖಂಡಿತವಾಗಿಯೂ ಇಂಥದ್ದೊಂದು ಸಮಸ್ಯೆ ಇದೆ ಎಂದಿದ್ದಾರೆ ಕಂಗನಾ. ನಟಿ-ಸಂಸದೆ ಮಾತಿಗೆ ಪುರುಷರು ಕಿಡಿಯಾಗಿದ್ದೇಕೆ?
ಕಂಗನಾ ರಣಾವತ್ ಕಾಂಟ್ರವರ್ಸಿ ಕ್ವೀನ್ ಎಂದೇ ಫೇಮಸ್ಸು, ನಟಿಯಾಗಿ ಇರಲಿ, ಈಗ ಸಂಸದೆಯಾಗಿಯೇ ಇರಲಿ ದಿನಕ್ಕೊಂದರಲ್ಲಿ ಹೇಳಿಕೆ ನೀಡುತ್ತಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಇವರು ಆಡುವ ಮಾತುಗಳಿಗೆ ಒಂದು ವರ್ಗ ಯಾವತ್ತಿದ್ದರೂ ಸಿಕ್ಕಾಪಟ್ಟೆ ಗರಂ ಆಗುವುದು ಇದ್ದೇ ಇದೆ. ಮನಸ್ಸಿಗೆ ಬಂದದ್ದನ್ನು ನೇರಾನೇರವಾಗಿ ಹೇಳುತ್ತಲೇ ಇರುತ್ತಾರೆ ನಟಿ, ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ. ಈಕೆ ಆಡಿದ ಮಾತುಗಳ ಬಗ್ಗೆ ಸದಾ ಎರಡು ಗುಂಪುಗಳು ಇರುತ್ತವೆ. ಒಂದು ಗುಂಪಿನ ಜನರು ಈಕೆ ಅಕ್ಷರಶಃ ನಿಜ ಹೇಳುತ್ತಿದ್ದಾರೆ ಎಂದ್ರೆ ಮತ್ತಷ್ಟು ಮಂದಿ ಕಿಡಿಕಿಡಿಯಾಗುತ್ತಾರೆ. ಸಿನಿಮಾ ಕ್ಷೇತ್ರದಲ್ಲೇ ಆಗಲಿ, ರಾಜಕೀಯದಲ್ಲೇ ಆಗಲಿ ಇಲ್ಲವೇ ನಿಜ ಜೀವನದ ಕುರಿತೇ ಆಗಲಿ ಕಂಗನಾ ಹೇಳುವ ಮಾತುಗಳು ವಿವಾದವನ್ನು ಸೃಷ್ಟಿಸುವುದೇ ಹೆಚ್ಚು.
ಇದೀಗ ಕಂಗನಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ನಟಿ ಸುಖಮಯ ದಾಂಪತ್ಯದ ಕುರಿತು ಹಾಗೂ ಪುರುಷರ ಮನಸ್ಥಿತಿಯ ಕುರಿತು ಹೇಳಿದ ಮಾತುಗಳು ಸಕತ್ ಸೌಂಡ್ ಮಾಡುತ್ತಿದೆ. ಪುರುಷ ವರ್ಗ ಕಂಗನಾ ಮಾತಿಗೆ ಕಿಡಿ ಕಾರುತ್ತಿದ್ದರೆ, ಬಹುತೇಕ ಮಹಿಳೆಯರು ಸಂಸದೆ ಹೇಳಿದ್ದರಲ್ಲಿ ಸ್ವಲ್ಪವೂ ಅತಿಶೋಯಕ್ತಿ ಇಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ಅಂಥದ್ದೇನು ಹೇಳಿದ್ದಾರೆ ಎಂದು ನೋಡುವುದಾದರೆ, ಪುರುಷರು ಎಷ್ಟೇ ಎತ್ತರಕ್ಕೆ ಹೋಗಿರಲಿ, ಎಷ್ಟೇ ಹೆಸರು ಮಾಡಿರಲಿ, ಎಷ್ಟೇ ಪ್ರಖ್ಯಾತಿ ಗಳಿಸಿದರಲಿ, ಅವರಿಗಿಂತ ಒಂದು ಹೆಜ್ಜೆ ಮಹಿಳೆಯರು ಮುಂದೆ ಹೋಗಿಬಿಟ್ಟರು ಎಂದರೆ ಉರಿದು ಹೋಗುತ್ತಾರೆ. ಮಹಿಳೆಯರು ಎಂದಿಗೂ ತಮಗಿಂತ ಮುಂದೆ ಹೋಗುವುದನ್ನು ಪುರುಷರು ಸಹಿಸುವುದೇ ಇಲ್ಲ. ಬೆರಳೆಣಿಕೆ ಪ್ರಕರಣದಲ್ಲಿ ಹೀಗೆ ಆಗದೆ ಇರಬಹುದು. ಅದರೆ ಬಹುತೇಕ ಪುರುಷರ ಮನಸ್ಥಿತಿ ಹೀಗೆಯೇ ಇರುವುದು ಎಂದಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಕಂಗನಾ, ಕೆಲವೊಮ್ಮೆ ಮದುವೆ ಸುಖಮಯವಾಗಿ ಹೇಗೆ ಇರುತ್ತದೆ ಎಂದು ನಾನು ಅಚ್ಚರಿಪಡುತ್ತೇನೆ. ಆಗ ನೋಡಿದ್ರೆ, ಅಲ್ಲಿ ಮಹಿಳೆ ಫೇಲ್ ಆಗಿರುತ್ತಾಳೆ. ವೃತ್ತಿಯಲ್ಲಿ, ಯಶಸ್ಸಿನಲ್ಲಿ ಆಕೆ ಸೋಲನ್ನು ಒಪ್ಪಿಕೊಂಡಿರುತ್ತಾಳೆ. ಅಂಥ ಸಂದರ್ಭಗಳಲ್ಲಿ ಮಾತ್ರ ಪುರುಷರು ಆಕೆಯ ಜೊತೆ ಸುಖಮಯ ಸಂಸಾರ ಮಾಡುತ್ತಾರೆ, ಮದುವೆ ಸುಖಮಯವಾಗಿ ಇರುತ್ತದೆ ಎನ್ನುವ ಮೂಲಕ ಪುರುಷರಿಗೆ ಉರಿ ಹೊತ್ತಿಸಿದ್ದಾರೆ ಕಂಗನಾ ರಣಾವತ್.
ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮೂರು ದಿನಗಳಲ್ಲಿಯೇ ಒಂದು ಲಕ್ಷ ಮಂದಿ ಲೈಕ್ ಮಾಡಿದ್ದು, ನಟಿಯ ಹೇಳಿಕೆಗೆ ಭೇಷ್ ಭೇಷ್ ಎಂದಿದ್ದಾರೆ. ಲೈಕ್ ಮಾಡಿದವರಲ್ಲಿ ಕೆಲವರು ಪುರುಷರೂ ಇದ್ದಾರೆ ಎನ್ನುವುದು ಕುತೂಹಲದ ವಿಷಯ. ಆದರೆ ಹಲವರು ನಟಿಯ ಮಾತಿಗೆ ಕಿಡಿಯಾಗಿದ್ದಾರೆ. ಕೆಲವು ಪುರುಷರು ಹೀಗೆ ಇರಬಹುದು. ಹಾಗೆಂದು ಇಡೀ ಸಮುದಾಯವನ್ನು ಈ ರೀತಿ ಬಿಂಬಿಸುವುದು ಸರಿಯಲ್ಲ ಎಂದಿದ್ದರೆ, ಮತ್ತೆ ಕೆಲವರು, ಎಷ್ಟೋ ಮಹಿಳೆಯರು ಪುರಷರ ಯಶಸ್ಸನ್ನು ಸಹಿಸುವುದಿಲ್ಲ. ಅವರ ಬಗ್ಗೆಯೂ ಸ್ವಲ್ಪ ಹೇಳಿ ಎಂದಿದ್ದಾರೆ. ದಂಪತಿಯ ಮಧ್ಯೆ ಕಿಡಿ ಹೊತ್ತಿಸಲು ಇಂಥ ಹೇಳಿಕೆಗಳು ಯಶಸ್ವಿಯಾಗುತ್ತದೆ, ಇಂಥ ಕ್ರಮ ಖಂಡನೀಯ ಎಂದು ಕೆಲವರು ಕಮೆಂಟ್ ಮೂಲಕ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯ ಸತ್ಯ ಮರೆಮಾಚಲು ಸೆನ್ಸಾರ್ ಮಂಡಳಿಗೇ ಬೆದರಿಕೆ! ಕಂಗನಾ ರಣಾವತ್ ಹೇಳಿದ್ದೇನು?