ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಪಾತ್ರಕ್ಕೆ ಸೀತೆಯ ಹೆಸರೇಕೆ ಬೇಕೆಂದು ಸೆನ್ಸಾರ್ ಬೋರ್ಡ್ 'ಜಾನಕಿ v/s ಸ್ಟೇಟ್ ಆಫ್ ಕೇರಳ' ಚಿತ್ರತಂಡವನ್ನು ಪ್ರಶ್ನಿಸಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಾಧ್ಯತೆ ಇರುವುದರಿಂದ ಸೆನ್ಸಾರ್ ಪ್ರಮಾಣಪತ್ರ ನಿರಾಕರಿಸಲಾಗಿದೆ.
ʼನಿಮ್ಮ ಸಿನಿಮಾದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಲು, ಅದರ ಬಗ್ಗೆ ಪ್ರಶ್ನೆಗಳನ್ನು ಎದುರಿಸಲು ಹಿಂದೂ ಧರ್ಮದ ಪೂಜಿತ ದೇವಿಯಾದ ಸೀತೆಯ ಹೆಸರೇ ಬೇಕಾ?ʼ ಎಂಬುದು ವಿವಾದಿತ ಸಿನಿಮಾ ನಿರ್ಮಾಪಕರಿಗೆ ಕೇಂದ್ರದ ಸೆನ್ಸಾರ್ ಬೋರ್ಡ್ ಅಥವಾ ಸಿಬಿಎಫ್‌ಸಿ ಕೇಳಿದ ಪ್ರಶ್ನೆ. ಕೇರಳದಲ್ಲಿ ನಿರ್ಮಾಣವಾದ ಈ ಸಿನಿಮಾ ಇದೀಗ ತನ್ನ ಕೆಲವು ಸೀನ್‌ಗಳಿಂದಾಗಿ ವಿವಾದ ಸೃಷ್ಟಿಸಿದೆ. ಈ ಸೀನ್‌ಗಳು ಹಾಗೆ ಇದ್ದರೆ ತಾನು ಸೆನ್ಸಾರ್ ಸರ್ಟಿಫಿಕೇಟ್ ಕೊಡುವುದಿಲ್ಲ ಎಂದು ಹೇಳಿದೆ. ಪರಿಣಾಮ, ಸಿನಿಮಾದ ಹೆಸರನ್ನು ಬದಲಾಯಿಸಲು ಇದೀಗ ತಂಡ ಒಪ್ಪಿಕೊಂಡಿದೆ.
ವಿವಾದದ ಪೂರ್ತಿ ವಿವರ ಇಲ್ಲಿದೆ. ʼಜಾನಕಿ v/s ಸ್ಟೇಟ್ ಆಫ್ ಕೇರಳʼ ಎಂಬುದು ಈಗ ವಿವಾದದಲ್ಲಿರುವ ಮಲಯಾಳಂ ಫಿಲಂ. ಸುರೇಶ್ ಗೋಪಿ ಅಭಿನಯದ ಚಿತ್ರವಿದು. ಪ್ರವೀಣ್ ನಾರಾಯಣನ್ ನಿರ್ದೇಶನದ, ಅನುಪಮಾ ಪರಮೇಶ್ವರನ್ ನಟನೆಯ ಫಿಲಂ. ಸದ್ಯ ಕೋರ್ಟ್‌ನಲ್ಲಿದೆ. ಇದಕ್ಕೆ ಸರ್ಟಿಫಿಕೇಟ್ ಕೊಡಲು ಸೆನ್ಸಾರ್ ಬೋರ್ಡ್ ನಿರಾಕರಿಸಿದೆ. ಇದಕ್ಕಾಗಿ ಸಿನಿಮಾ ಟೀಮ್ ಕೋರ್ಟ್‌ಗೆ ಹೋಗಿತ್ತು.
ಕಾರಣ ಏನು? ಇಲ್ಲಿ ಜಾನಕಿ ಎಂಬಾಕೆ ಲೈಂಗಿಕ ಪೀಡನೆಗೆ ಒಳಗಾದ ಹೆಣ್ಣು. ನ್ಯಾಯಕ್ಕಾಗಿ ಹೋರಾಡುತ್ತಿರುವಾಕೆ. ಜಾನಕಿ ಎಂದರೆ ಸೀತೆ, ಸೀತಾದೇವಿಯ ಇನ್ನೊಂದು ಹೆಸರು. ಸಿನಿಮಾದಲ್ಲಿ ಕೋರ್ಟ್‌ನಲ್ಲಿ ಜಾನಕಿಯನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸಲಾಗುತ್ತದೆ. ಹಾಗೆ ಕ್ರಾಸ್ ಎಕ್ಸಾಮಿನೇಷನ್ ಮಾಡುತ್ತಿರುವ ವಕೀಲ ಅನ್ಯ ಧರ್ಮದವನು ಎಂದು ಸಿನಿಮಾ ತೋರಿಸಿದೆ. ಈ ಕ್ರಾಸ್ ಎಕ್ಸಾಮಿನೇಷನ್‌ನಲ್ಲಿ, ಕೆಲವು ಅಶ್ಲೀಲ ಪ್ರಶ್ನೆಗಳನ್ನೂ ಕೇಳುವಂತೆ ತೋರಿಸಲಾಗಿದೆ. ಜಾನಕಿ ಎಂಬುದು ಸೀತಾ ದೇವಿಗೆ ಸಂಬಂಧಿಸಿದ ಹೆಸರಾಗಿದೆ, ಜೊತೆಗೆ ಬೇರೆ ಧರ್ಮೀಯನಿಂದ ಇಂಥ ಪ್ರಶ್ನೆಗಳು ಸಾಮಾಜಿಕ ಸಾಮರಸ್ಯವನ್ನು, ಧಾರ್ಮಿಕ ಭಾವನೆಗಳನ್ನು ಕೆರಳಿಸಬಹುದು ಎಂಬ ಕಾರಣ ನೀಡಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಲನಚಿತ್ರ ಪ್ರಮಾಣೀಕರಣವನ್ನು ನಿರಾಕರಿಸಿತ್ತು.
"ಚಿತ್ರದಲ್ಲಿ, ಸೀತಾ/ಜಾನಕಿಯ ಹೆಸರಿನ ಪ್ರಮುಖ ಪಾತ್ರದ ಮೇಲೆ ಲೈಂಗಿಕ ಕಿರುಕುಳ ನಡೆದಾಗ, ನಿರ್ದಿಷ್ಟ ಧಾರ್ಮಿಕ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಆಕೆಗೆ ಸಹಾಯ ಮಾಡುತ್ತಾನೆ. ಮತ್ತು ಇನ್ನೊಂದು ಧಾರ್ಮಿಕ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಅವಳನ್ನು ಕ್ರಾಸ್ ಎಕ್ಸಾಮಿನ್ ಮಾಡಿ, ನೋವುಂಟುಮಾಡುವ ಪ್ರಶ್ನೆಗಳನ್ನು ಕೇಳುತ್ತಾನೆ ಸೀತಾ ದೇವಿಯ ಪವಿತ್ರ ಹೆಸರನ್ನು ಹೊಂದಿರುವ ಪಾತ್ರ ಸೃಷ್ಟಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಧ್ಯತೆಯಿದೆ. ಧಾರ್ಮಿಕ ಗುಂಪುಗಳ ನಡುವೆ ವಿಭಜನೆ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಭಾರತದಾದ್ಯಂತ ಸೀತಾ ದೇವಿಗೆ ಅಪಾರ ಗೌರವ ನೀಡಲಾಗುತ್ತದೆ" ಎಂದು ಸಿಬಿಎಫ್‌ಸಿ ಸಿಇಒ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಜಾನಕಿ ಅವಳು ಅಶ್ಲೀಲ ಚಿತ್ರಗಳನ್ನು ನೋಡುತ್ತಾಳೆಯೇ? ಸಂತೋಷವನ್ನು ಹೆಚ್ಚಿಸಲು ಮಾದಕ ದ್ರವ್ಯಗಳನ್ನು ಬಳಸುತ್ತಾಳೆಯೇ? ಅವಳಿಗೆ ಬಾಯ್ ಫ್ರೆಂಡ್ ಇದಾನಾ? ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮೊದಲು ಅವಳು ಗರ್ಭಿಣಿಯಾಗಿದ್ದಳಾ? ಮೊದಲಾದ ಪ್ರಶ್ನೆಗಳನ್ನು ದೃಶ್ಯದಲ್ಲಿ ಕೇಳಲಾಗಿತ್ತು. ಇನ್ನೊಂದು ಸನ್ನಿವೇಶದಲ್ಲಿ, ಈಕೆಯನ್ನು ಅನ್ಯಧರ್ಮೀಯನೊಬ್ಬ ರಕ್ಷಿಸುವಂತೆ ತೋರಿಸಲಾಗುತ್ತದೆ.
"ಜಾನಕಿ ದೇವಿ ಭಾರತದ ಜನಸಾಮಾನ್ಯರ ಸಾಮೂಹಿಕ ಪ್ರಜ್ಞೆಯಲ್ಲಿ ಗಾಢವಾದ ಭಕ್ತಿಯನ್ನು ಹೊಂದಿದ್ದಾಳೆ ಎಂದು ನಿರ್ಮಾಪಕರಿಗೆ ತಿಳಿದಿದೆ. ಆದ್ದರಿಂದಲೇ ಆಕೆಯ ಧಾರ್ಮಿಕ ಮಹತ್ವದಿಂದ ದುರ್ಲಾಭ ಮಾಡಿಕೊಳ್ಳಲು ಉದ್ದೇಶಪೂರ್ವಕವಾಗಿ ಈ ಶೀರ್ಷಿಕೆಯನ್ನು ಆಯ್ಕೆ ಮಾಡಿದ್ದಾರೆ" ಎಂದು ನಿರ್ಮಾಪಕರ ಬಗ್ಗೆ ಸೆನ್ಸಾರ್ ಬೋರ್ಡ್ ಆರೋಪಿಸಿದೆ.
ಪವನ್ ಸಿನಿಮಾ ರಿಜೆಕ್ಟ್ ಮಾಡಿದ ಮಹೇಶ್ ಬಾಬು ಪತ್ನಿ ನಮ್ರತಾ.. ಒಂದು ಸೂಪರ್ ಹಿಟ್, ಇನ್ನೊಂದು?
ಬುಧವಾರ ಸೆನ್ಸಾರ್ ಮಂಡಳಿ ಕಡೆಯಿಂದ ಬಂದ ಒತ್ತಡದ ನಂತರ ನಿರ್ದೇಶಕರು ಒಂದು ಒಪ್ಪಂದಕ್ಕೆ ಬಂದಿರುವಂತೆ ಕಾಣುತ್ತದೆ. ಚಿತ್ರದ ನಿರ್ಮಾಪಕರು, ಚಿತ್ರದ ಶೀರ್ಷಿಕೆಯನ್ನು 'ವಿ ಜಾನಕಿ v/s ಕೇರಳ ರಾಜ್ಯ' ಎಂದು ಬದಲಾಯಿಸಲು ಮತ್ತು 'ಜಾನಕಿ' ಹೆಸರನ್ನು ಎರಡು ಸಂದರ್ಭಗಳಲ್ಲಿ ಮ್ಯೂಟ್ ಮಾಡಲು ಸಿದ್ಧರಿದ್ದೇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನಿರ್ಮಾಪಕರು 'ಜಾನಕಿ' ಶೀರ್ಷಿಕೆಯನ್ನು 'ವಿ ಜಾನಕಿ' ಎಂದು ಬದಲಾಯಿಸಲು ಒಪ್ಪಿದರೆ ಚಿತ್ರಕ್ಕೆ ಸ್ಕ್ರೀನಿಂಗ್ ಪ್ರಮಾಣಪತ್ರ ನೀಡಲು ಸಿದ್ಧ ಎಂದು ಸಿಬಿಎಫ್‌ಸಿ ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯಾಯಪೀಠ ಜುಲೈ 16ರಂದು ಈ ವಿಷಯವನ್ನು ಮತ್ತೆ ವಿಚಾರಣೆ ನಡೆಸಲಿದೆ. ಜೂನ್ 27ರಂದೇ ಇದು ಬಿಡುಗಡೆಯಾಗಬೇಕಿತ್ತು. ಚಿತ್ರ ಈಗಾಗಲೇ ವಿಳಂಬವಾಗಿದೆ.
ಕಣ್ಣಪ್ಪ ಶಿವನ ಪಾತ್ರಕ್ಕೆ ಅಕ್ಷಯ್ ಕುಮಾರ್ ಟ್ರೋಲ್: ಡೈಲಾಗ್ ಕಲಿಯಲು ಆಗಲ್ವಾ ಎಂದ ನೆಟ್ಟಿಗರು!
