ನವದೆಹಲಿ (ಜ. 21): ನಟಿ ದೀಪಿಕಾ ಪಡುಕೋಣೆ ಸಿನಿಮಾ ಮಾತ್ರವಲ್ಲ, ಸಾಮಾಜಿಕ ಆಗು ಹೋಗುಗಳಿಗೂ ಸ್ಪಂದಿಸುತ್ತಾರೆ. ಇತ್ತೀಚಿಗೆ ದೆಹಲಿಯ ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಇದಕ್ಕೆ ಸಾಕ್ಷಿ. 

ಕೆಲದಿನಗಳ ಹಿಂದೆ ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ವಿರೋಧಿ ಪ್ರತಿಭಟನೆಯಲ್ಲಿ ದೀಪಿಕಾ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿದರು. ಇದು ಭಾರೀ ಚರ್ಚೆಗೆ ಕಾರಣವಾಯಿತು. ಪರ- ವಿರೋಧ ಚರ್ಚೆ ಶುರುವಾಯಿತು. ಅವರ ಬಹುನಿರೀಕ್ಷಿತ 'ಛಪಕ್' ಚಿತ್ರವನ್ನು ಬ್ಯಾನ್ ಮಾಡುತ್ತೇವೆ ಎಂಬ ಧ್ವನಿ ಎದ್ದಿತು.

JNU ಹೋರಾಟಕ್ಕೆ ದೀಪಿಕಾ ಪಡುಕೋಣೆ ಬೆಂಬಲ!

ದೀಪಿಕಾ ಜೆಎನ್‌ಯು ಭೇಟಿ ಬಗ್ಗೆ ನಟಿ ಕಂಗನಾ ರಾಣಾವತ್ ತಡವಾಗಿ ಪ್ರತಿಕ್ರಿಯಿಸಿದ್ದಾರೆ. 'ನನ್ನನ್ನೇ ಕೇಳುವುದಾದರೆ ನಾನು ಟುಕ್ಡೆ ಟುಕ್ಡೆ ಗ್ಯಾಂಗ್‌ನವರಿಗೆ ಬೆಂಬಲ ಸೂಚಿಸುವುದಿಲ್ಲ. ಅವರು ದೇಶವನ್ನು ಯಾಕಾಗಿ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ.  ನಮ್ಮ ಸೈನಿಕರು ಹುತಾತ್ಮರಾಗುವುದನ್ನು ಅವರ್ಯಾಕೆ ಸಂಭ್ರಮಿಸುತ್ತಾರೆ ಅರ್ಥವಾಗದ ವಿಷಯ. ನನಗೆ ಅವರು ಹಿಡಿಸುವುದಿಲ್ಲ. ಅವರು ಸರಿಯಾದ ಮಾರ್ಗದಲ್ಲಿದ್ದಾರೆ ಎಂದು ನನಗನಿಸುವುದಿಲ್ಲ' ಎಂದಿದ್ದಾರೆ. 

 

ಇನ್ನು ದೀಪಿಕಾ ವಿಚಾರಕ್ಕೆ ಬರುವುದಾದರೆ , ಅವರ ಭೇಟಿ ಬಗ್ಗೆ, ಸರಿ, ತಪ್ಪುಗಳ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಅವರೇನು ಮಾಡಬೇಕು ಎಂದು ಅವರಿಗೆ ಗೊತ್ತಿದೆ. ಪರಿಣಾಮಗಳನ್ನು ಅವರು ಎದುರಿಸಲು ಸಿದ್ಧರಾಗಿದ್ದಾರೆ. ನಾವ್ಯಾಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕು? ಪ್ರಜಾಪ್ರಭುತ್ವದ ಮಿತಿಯೊಳಗೆ ಅವರಿದ್ದಾರೆ' ಎಂದು ಹೇಳಿದ್ದಾರೆ. 

ಕಂಗನಾ ಸದ್ಯ ತಲೈವಿ ಹಾಗೂ ಪಾಂಗಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪಾಂಗಾ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಪ್ರಮೋಶನ್ ಕೆಲಸ ಭರದಿಂದ ಸಾಗುತ್ತಿದೆ.