ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್ ವಿರುದ್ಧ ಜೂ.ಎನ್ ಟಿ ಆರ್ ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಅಭಿಮಾನಿಗಳಿಗೆ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಆರ್ ಆರ್ ಆರ್ ಇತ್ತೀಚೆಗಷ್ಟೆ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಆಸ್ಕರ್‌ನ ಅಂತಿಮ ರೇಸ್‌ನಲ್ಲಿರುವ ಆರ್ ಆರ್ ಆರ್ ಅಕಾಡೆಮಿ ಅವಾರ್ಡ್‌ಗೂ ಮೊದಲೇ ಮತ್ತೊಂದು ಪ್ರಶಸ್ತಿ ಗೆದ್ದು ಬೀಗಿರುವುದು ತಂಡಕ್ಕೆ ಸಂತಸ ತಂದಿತ್ತು. ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್‌ನಲ್ಲಿ (HCA)ನಲ್ಲಿ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ಪ್ರಶಸ್ತಿ ಜೊತೆಗೆ 4 ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು. ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತು ಆರ್ ಆರ್ ಆರ್ ಸ್ಟಾರ್ ರಾಮ್ ಚರಣ್ ಇಬ್ಬರೂ ಪ್ರಶಸ್ತಿ ಪಡೆದು ಸಂಭ್ರಮಿಸಿದರು.
ರಾಜಮೌಳಿ ಮತ್ತು ಜೂ.ಎನ್ ಟಿ ಆರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರಶಸ್ತಿ ಸಮಾರಂಭಕ್ಕೆ ಜೂ ಎನ್ ಟಿ ಆರ್ ಗೈರಾಗಿದ್ದರು. ಹಾಗಾಗಿ ಜೂ.ಎನ್ ಟಿ ಆರ್‌ಗೆ ಅಹ್ವಾನ ನೀಡಿಲ್ಲ ಎಂದು ಅಭಿಮಾನಿಗಳು ಗರಂ ಆಗಿದ್ದಾರೆ. ಜೂ.ಎನ್ ಟಿ ಆರ್ ಯಾಕೆ ಕಾಣಿಸಿಕೊಂಡಿಲ್ಲ, ಅವರಿಗೆ ಆಹ್ವಾನ ನೀಡಿಲ್ವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೂ ಎನ್ ಟಿ ಆರ್ ಗೈರು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಅಭಿಮಾನಿಗಳ ಅಸಮಾಧಾನ ಹೊರಹಾಕುತ್ತಿದ್ದಂತೆ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಫಿಲ್ಮ್ ಅವಾರ್ಡ್ಸ್ ಸ್ಪಷ್ಟನೆ ನೀಡಿದೆ. ಜೂ.ಎನ್ ಟಿ ಆರ್ ಗೈರಾಗಿದ್ದೇಕೆ ಎಂದು ಬಹಿರಂಗಗ ಪಡಿಸಿದೆ. ಈ ಮೂಲಕ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ ಆಯೋಜಕರು. ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇರುವ ಕಾರಣ ಜೂ ಎನ್ ಟಿ ಆರ್ ಗೈರಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜೂ.ಎನ್ ಟಿ ಆರ್ ಗೈರಾಗಿದ್ದ ಬಗ್ಗೆ ಟ್ವೀಟ್ ಮಾಡಿರುವ ಹಾಲಿವುಡ್ ಕ್ರಿಟಿಕ್ಸ್, 'ಆತ್ಮೀಯ ಆರ್ ಆರ್ ಆರ್ ಅಭಿಮಾನಿಗಳು ಮತ್ತು ಅಭಿಮಾನಿಗಳಿಗೆ, ನಾವು HCA ಸಿನಿಮಾ ಅವಾರ್ಡ್‌ಗೆ ಜೂ. ಎನ್ ಟಿ ಆರ್ ಅವರಿಗೂ ಆಹ್ವಾನ ನೀಡಿದ್ದೇವೆ. ಆದರೆ ಜೂ ಎನ್ ಟಿ ಆರ್ ಹೊಸ ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಸದ್ಯದಲ್ಲೇ ನಮ್ಮಿಂದ ಅವರು ಅವಾರ್ಡ್ ಪಡೆದುಕೊಳ್ಳುತ್ತಾರೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಈ ಮೂಲಕ ಜೂ.ಎನ್ ಟಿ ಆರ್ ಗೈರಾಗಿರುವುದಕ್ಕೆ ಕಾರಣ ಬಿಚ್ಚಿಡುವ ಜೊತೆಗೆ ಹೊಸ ಸಿನಿಮಾದ ಶೂಟಿಂಗ್ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ.
RRR: ಇನ್ನೂ ನಿಂತಿಲ್ಲ ಪ್ರಶಸ್ತಿಗಳ ಬೇಟೆ; ಆಸ್ಕರ್‌ಗೂ ಮೊದಲೇ ರಾಜಮೌಳಿ ಚಿತ್ರಕ್ಕೆ ಮತ್ತೊಂದು ಅವಾರ್ಡ್
'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ' ಪ್ರಶಸ್ತಿ ಜೊತೆಗೆ 'RRR' ಸಿನಿಮಾ HCA ಯಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. 'ಅತ್ಯುತ್ತಮ ಆಕ್ಷನ್ ಚಿತ್ರ', 'ಅತ್ಯುತ್ತಮ ಸಾಹಸ' ಮತ್ತು 'ಅತ್ಯುತ್ತಮ ಮೂಲ ಹಾಡು' ಪ್ರಶಸ್ತಿಯನ್ನು ಗೆದ್ದು ಬೀಗಿದೆ.
ನಾಟು ನಾಟು... ಹಾಡಿಗೆ ಕುಣಿದ ಕೊರಿಯನ್ನರಿಗೆ ಪ್ರಧಾನಿ ಮೋದಿ ಫಿದಾ
ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಚಿತ್ರದಲ್ಲಿ ಜೂನಿಯರ್ ಮತ್ತು ರಾಮ್ ಚರಣ್ ಸ್ವಾತಂತ್ರ್ಯ ಹೋರಾಟಗಾರರಾದ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ನಾಟು ನಾಟು..' ಹಾಡು ಆಸ್ಕರ್ಗೆ ನಾಮಿನೇಷನ್ ಆಗಿದೆ. 95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ. ಗೋಲ್ಡನ್ ಗ್ಲೋಬ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಗೆದ್ದು ಬೀಗಿರುವ ಆರ್ ಆರ್ ಆರ್ ಆಸ್ಕರ್ ಮುಡಿಗೇರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
