ಇಂಗ್ಲಿಷರನ್ನು ಆಡಿಕೊಂಡ ನಾಟು ನಾಟುಗೆ ಜಾಗತಿಕ ಪ್ರಶಸ್ತಿ ಸಿಕ್ಕಿದ್ದು ಭಾರತೀಯರಿಗೆ ಸಂದ ಗೌರವ!
ಚಂದ್ರಮೌಳಿ ನಿರ್ದೇಶನದ ನಾಟು ನಾಟು ಹಾಡು, ಡ್ಯಾನ್ಸ್ ಭಾರತವನ್ನು ಆಳುತ್ತಿದ್ದ ಬ್ರಿಟಿಷರಿಗೆ ಹಾಕಿದ ಸವಾಲಿಗೆ ಕೊಟ್ಟ ಉತ್ತರ ಎನ್ನುವುದು ವಿಶೇಷ. ಇಂಗ್ಲಿಷರನ್ನು ಅಣಕಿಸಿದ ಹಾಡಿಗೆ ಸ್ಪೆಷಲ್ ಅವಾರ್ಡ್ ಸಿಕ್ಕಿದ್ದು ಭಾರತೀಯರ ಆತ್ಮ ಗೌರವಕ್ಕೆ ಸಿಕ್ಕ ಪುರಸ್ಕಾರ.
- ರಾಜೀವ ಹೆಗ್ಡೆ
ಸುಮಾರು ಒಂದು ವರ್ಷದ ಹಿಂದೆ ಈ 'ನಾಟು ನಾಟು' ಹಾಡಿನ ನೃತ್ಯವನ್ನು ದೊಡ್ಡ ಪರದೆಯ ಮೇಲೆ ನೋಡಿದ್ದಾಗ ರೋಮಾಂಚನವಾಗಿತ್ತು. ಆ ನೃತ್ಯಕ್ಕೆ ರಾಜಮೌಳಿ ಉಕ್ರೇನ್‌ನಲ್ಲಿ ಮಾಡಿಸಿದ್ದ ಅಭ್ಯಾಸ ಹಾಗೂ ಆ ಕುರಿತ ಹಠದ ಬಗ್ಗೆ ಓದಿದ್ದೆ. ಕೊನೆಗೆ 'ಆರ್‌ಆರ್‌ಆರ್' ಚಿತ್ರವು ಬೆಳ್ಳಿ ತೆರೆಯ ಮೇಲೆ ಭರ್ಜರಿ ಯಶಸ್ಸು ಕಂಡಿತು. ಸಾವಿರಾರು ಕೋಟಿ ಹಣವನ್ನೂ ಬಾಚಿತು. ರಾಜಮೌಳಿಯ ಸತತ ಯಶಸ್ಸು ನೋಡಿ ಖುಷಿಯಾಗಿತ್ತು.
ಅದಾದ ಬಳಿಕ ಚಿತ್ರ ಪ್ರೇಮಿಗಳು ಕೆಜಿಎಫ್-2, ಕಾಂತಾರಾ, 777 ಚಾರ್ಲಿಯ ಯಶಸ್ಸಿನಲ್ಲಿ ತೇಲಿ ಹೋಗಿದ್ದೆವು. ಇದರ ಮಧ್ಯೆ ಆಗಾಗ ರಾಜಮೌಳಿ-ಮಹೇಶ್ ಬಾಬು ಜೋಡಿಯ ಮುಂದಿನ ಚಿತ್ರದ ಅಂತೆ ಕಂತೆ ಸುದ್ದಿ ಓದಿಕೊಂಡು, ನಿರೀಕ್ಷೆಯ ಬೆಟ್ಟ ಕಟ್ಟುತ್ತಿದ್ದೆವು. ಆದರೆ ರಾಜಮೌಳಿ ಮಾತ್ರ ಒಂದು ಚಿತ್ರೋದ್ಯಮದ ಸಿಇಒ ರೀತಿಯಲ್ಲಿ ವಿದೇಶ ಪ್ರಯಾಣ ಆರಂಭಿಸಿದ್ದರು.
ಒಂದು ಸ್ಟಾರ್ಟಪ್ ಕಂಪನಿಯ ಮಹತ್ವಾಕಾಂಕ್ಷಿ ಸಿಇಒ, ಬಂಡವಾಳ ಸೆಳೆಯಲು ಜಾಗತಿಕ ಮಾರುಕಟ್ಟೆಯಲ್ಲಿ ಪರ್ಯಟನೆ ಮಾಡುವಂತೆ ರಾಜಮೌಳಿ ಓಡಾಡಲು ಆರಂಭಿಸಿದ್ದರು. ಜಾಗತಿಕ ಮಟ್ಟದ ಚಿತ್ರ ಪ್ರದರ್ಶನ, ಚಿಂತನ-ಮಂಥನಗಳಲ್ಲಿ ಕಾಣಿಸಿಕೊಂಡರು. ಒಂದಿಷ್ಟು ಅಂತಾರಾಷ್ಟ್ರೀಯ ಸಿನೆಮಾ ಪತ್ರಕರ್ತರಿಗೆ ಸಂದರ್ಶನ ನೀಡಿ, ತಮ್ಮ ನನಸಾದ ಕನಸನ್ನು ಬಿತ್ತರಿಸುವ ಕೆಲಸದಲ್ಲಿ ತೊಡಗಿಕೊಂಡರು. ಮಹೇಶ್ ಬಾಬು ರೀತಿಯ ಮಾಸ್ ಸೂಪರ್ ಸ್ಟಾರ್ ಜತೆಗೆ ಚಿತ್ರ ಮಾಡಲು ಹೊರಟ ರಾಜಮೌಳಿ ಏನು ಮಾಡುತ್ತಿದ್ದಾರೆ ಎನ್ನುವ ರೀತಿಯ ಲೇಖನಗಳು ಕೂಡ ಆಗಾಗ ಬರಲು ಆರಂಭಿಸಿದವು. ಆದರೆ ಭಾರತೀಯ ಚಿತ್ರರಂಗದ ಧನಾತ್ಮಕ ಮುಖ ಇರಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭವಿಷ್ಯದ ಕನಸಿನ ಬೀಜ ಬಿತ್ತುವ ಕೆಲಸದಲ್ಲಿ ಅವರು ತೊಡಗಿದ್ದರು ಎನ್ನುವುದು ಈಗ ಗೊತ್ತಾಗುತ್ತಿದೆ.
ಕೆಲವು ತಿಂಗಳ ಹಿಂದೆ ರಾಜಮೌಳಿ ಬಗ್ಗೆ ಒಂದು ಲೇಖನವನ್ನು ಓದಿದ್ದೆ. ಆರ್‌ಆರ್‌ಆರ್ ಹಾಗೂ ಆಸ್ಕರ್ ಅಭಿಯಾನ, ಪಿಆರ್ ಚಟುವಟಿಕೆಗೆ ಕೋಟ್ಯಂತರ ರೂಪಾಯಿಯನ್ನು ಚೆಲ್ಲುತ್ತಿದ್ದಾರೆ ಎಂದು ಬರೆಯಲಾಗಿತ್ತು. ಇದೇ ಸುದ್ದಿ ಇರಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಮೌಳಿ ಪ್ರಶಸ್ತಿ ಖರೀದಿಸಿದರು ಎನ್ನುವ ಮಾತುಗಳು ಕೂಡ ಭವಿಷ್ಯದಲ್ಲಿ ಬರಬಹುದು. ಆದರೆ ರಾಜಮೌಳಿ ಇಂದು ಮಾಡುತ್ತಿರುವ ಈ ಕೆಲಸದ ಫಲವನ್ನು ಭವಿಷ್ಯದಲ್ಲಿ ಇಡೀ ಭಾರತೀಯ ಚಿತ್ರರಂಗ ಉಣ್ಣುವ ಕಾಲ ಬರಲಿದೆ.
Naatu Naatu; ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ RRR ತಂಡಕ್ಕೆ ಪಿಎಂ ನರೇಂದ್ರ ಮೋದಿ ಅಭಿನಂದನೆ
ಭಾರತಕ್ಕೆ ಆಸ್ಕರ್ ಬಂದಾಗ:
ಕೆಲವು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳೋಣ. ಮುಂಬೈನ ಸ್ಲಂ, ಭಾರತದ ಹೊಲಸನ್ನು ತೋರಿಸಿಕೊಂಡು ಆಸ್ಕರ್ ಪಡೆದಿದ್ದ ಚಿತ್ರಕ್ಕೆ ನಾವು ಖುಷಿ ಪಟ್ಟಿದ್ದೆವು. ಭಾರತದ ಹಸಿವು ತೋರಿಸಿಕೊಂಡು ನೋಬೆಲ್ ಶಾಂತಿ ಪಡೆದವರೂ ಇದ್ದಾರೆ. ಭಾರತವು ಹಾವಾಡಿಗರ ದೇಶವೆಂದು ಆಡಿಕೊಳ್ಳಲು ಕೆಲವರು ಅವಕಾಶವನ್ನೂ ನೀಡಿದ್ದರು. ಆದರೆ ಇಂದು ಭಾರತದ ಹಿರಿಮೆ ತೋರಿಸಿಕೊಂಡು, ಇಂಗ್ಲಿಷರನ್ನು ತಕ್ಕ ಮಟ್ಟಿಗೆ ಆಡಿಕೊಂಡ 'ನಾಟು ನಾಟು' ಹಾಡಿಗೆ ಜಾಗತಿಕ ಪ್ರಶಸ್ತಿ ಪಡೆಯುವುದು ಸಣ್ಣ ಸಾಹಸವಲ್ಲ.
ಆದರೆ ಬಾಹುಬಲಿ ಚಿತ್ರದಿಂದ ದೊರೆತ ನಂಬಿಕೆ ಹಾಗೂ ಆರ್‌ಆರ್‌ಆರ್‌ನಿಂದ ಬಂದ ಹಣದಲ್ಲಿ ಅಂತಾರಾಷ್ಟ್ರೀಯ ವೇದಿಕೆಗೆ ರಾಜಮೌಳಿ ನುಗ್ಗಿದರು. ತೆಲುಗು ಹಾಡೊಂದು ಇಷ್ಟೊಂದು ಸುದ್ದಿಯಾಗಲು ಕಾರಣರಾದರು. ಇದರಿಂದ ಆಸ್ಕರ್ ವೇದಿಕೆಯಲ್ಲೂ ಖಂಡಿತವಾಗಿ ಈ ಚಿತ್ರ, ಈ ಹಾಡು ಹಾಗೂ ಈ ಚಿತ್ರೋದ್ಯಮ ಚರ್ಚೆಯ ವಿಷಯವಂತೂ ಆಗಲಿದೆ. ಇದರಿಂದ ಯಾವ ಪ್ರಶಸ್ತಿ ಬರಲಿ, ಬರದಿರಲಿ ಅಂತಾರಾಷ್ಟ್ರೀಯ ಚಿತ್ರರಂಗವು ಭಾರತದ ಚಿತ್ರೋದ್ಯಮದತ್ತ ಒಮ್ಮೆಯಾದರೂ ತಿರುಗಿ ನೋಡುವ ಸಂದರ್ಭ ನಿರ್ಮಾಣ ಆದಂತಾಗುತ್ತದೆ.
ಇಂದು ಕಾಂತಾರ, ತಕ್ಕ ಮಟ್ಟಿಗೆ ವಿಕ್ರಾಂತ ರೋಣ, 777 ಚಾರ್ಲಿ ಯಶಸ್ಸು ಗಳಿಸಿದ್ದರೆ ಕೆಜಿಎಫ್ ಹಾಕಿಕೊಟ್ಟ ವೇದಿಕೆ ಕಾರಣವಾಗಿದೆ. ಮಾರುಕಟ್ಟೆಯ ಬಾಗಿಲನ್ನು ತೆಗೆದಿದ್ದು ಕೆಜಿಎಫ್. ಹಾಗೆಯೇ ಬಾಹುಬಲಿ ಮೂಲಕ ಇಂತಹ ಅವಕಾಶವನ್ನು ಭಾರತೀಯ ಚಿತ್ರರಂಗದಲ್ಲಿ (Indian Cine Industry) ತೆರೆದಿಟ್ಟಿದ್ದ ರಾಜಮೌಳಿ, ಈಗ ಆರ್‌ಆರ್‌ಆರ್ ಕುರಿತ ಪ್ರಚಾರ (Promotion) ಕಾರ್ಯದ ಮೂಲಕ ಅಂತಾರಾಷ್ಟ್ರೀಯ ಚಿತ್ರರಂಗಕ್ಕೆ ಭಾರತವು ಪ್ರವೇಶಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ಆಸ್ಕರ್ ತಂದಾಗ ದಯವಿಟ್ಟು ನನಗೂ ಸ್ವಲ್ಪ ಮುಟ್ಟಲು ಕೊಡಿ; RRR ಸ್ಟಾರ್ ರಾಮ್ ಚರಣ್‌ಗೆ ಶಾರುಖ್ ವಿಶೇಷ ಮನವಿ
ನಮ್ಮನ್ನು ನಾವು ಜಗತ್ತಿಗೆ ತೆರೆದುಕೊಳ್ಳುವುದು ಅನಿವಾರ್ಯ:
ನಾವು ಈ ವಿದೇಶಿ ಪ್ರಶಸ್ತಿ ಪಡೆಯಲು ಇಷ್ಟೊಂದು ಹೋರಾಡಬೇಕೇ ಅಥವಾ ಸಂಭ್ರಮಿಸಬೇಕೆ ಎಂದೆಲ್ಲ ವಾದ ಮಾಡಬಹುದು. ಆದರೆ ಜಾಗತಿಕ ಮಾರುಕಟ್ಟೆಗೆ (Global Market) ನಮ್ಮನ್ನು ನಾವು ತೆರೆದುಕೊಳ್ಳಲು ಇಂತಹ ಪಿಆರ್ ಸಾಹಸಗಳು ಅನಿವಾರ್ಯ. ಇದೇ ಕೆಲಸವನ್ನು ರಾಜಮೌಳಿ ನಿಷ್ಠೆಯಿಂದ ಮಾಡುತ್ತಿದ್ದಾರೆ. ಇಂಗ್ಲಿಷ್ ಚಿತ್ರೋದ್ಯಮದ ಬಾಂಡ್, ಸ್ಪೈಡರ್‌ಮ್ಯಾನ್, ಅವತಾರ್ ಸೇರಿ ಇತರ ಸಿನೆಮಾಗಳು ಒಂದು ಬ್ರಾಂಡ್ ಆಗಿ ಸುಖಾಸುಮ್ಮನೇ ಬೆಳೆದಿಲ್ಲ. ಇಂಗ್ಲಿಷ್ ಅರ್ಥವಾಗದಿದ್ದರೂ ದೃಶ್ಯ ವೈಭವಕ್ಕಾಗಿ, ಸಾಹಸಕ್ಕಾಗಿ ಇಂತಹ ಚಿತ್ರ ನೋಡುವ ಪ್ರೇಕ್ಷಕರು ರಾತ್ರಿ ಬೆಳಗಾಗುವುದರೊಳಗೆ ಸೃಷ್ಟಿಯಾಗಿಲ್ಲ. ನಮ್ಮ ಮಾರುಕಟ್ಟೆ ಸಣ್ಣದು ಎಂದು ಗೊಣಗಿಕೊಂಡು ಕೂರಲಾಗದು. ಅದನ್ನು ಮೀರಿ ಬೆಳೆಯಬೇಕೆಂದರೆ ರಾಜಮೌಳಿ, ಯಶ್ ರೀತಿಯ ಕನಸು ಅನಿವಾರ್ಯ.
ಇಂದು ರಾಜಮೌಳಿ ಬಿತ್ತುತ್ತಿರುವ ಬೀಜದಿಂದ ಭವಿಷ್ಯದಲ್ಲಿ ಭಾರತೀಯ ಸಿನೆಮಾಗಳು ಕೂಡ ಇಂಗ್ಲಿಷ್‌ಗೆ ಡಬ್ ಆಗಿ ಸದ್ದು ಮಾಡಬಹುದು. ಸ್ಲಂ ಡಾಗ್ ಮಿಲೇನಿಯರ್ ರೀತಿಯ ಚಿತ್ರದ ಬದಲಾಗಿ ಭಾರತೀಯತೆಯ ಶ್ರೀಮಂತಿಕೆಯನ್ನು ಜಗತ್ತಿಗೆ ತಿಳಿಸುವ ಚಿತ್ರಗಳು ಇಂಗ್ಲಿಷ್‌ನಲ್ಲಿ, ಜಗತ್ತಿನ ಇತರ ಭಾಷೆಗಳಲ್ಲಿ ಕಾಣಬಹುದು. ಬಾಂಡ್ ರೀತಿಯಲ್ಲಿ ಕೆಜಿಎಫ್ ಕೂಡ ಒಂದು ಬ್ರಾಂಡ್ ಆಗಿ ಬೆಳೆದು ಸಾಹಸ ಚಿತ್ರಕ್ಕೆ ಹೊಂಬಾಳೆಯತ್ತ ಜಗತ್ತು ಮುಖ ಮಾಡಿ ನೋಡುವ ದಿನಗಳು ಬರಬಹುದು. ಭಾರತೀಯ ನೆಲದ ಕಥೆಗಳಷ್ಟು ರೋಚಕತೆ, ವೈವಿಧ್ಯತೆ, ದೃಶ್ಯ ವೈಭವವನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತರಲು ಅಂತಾರಾಷ್ಟ್ರೀಯ ಮಾರುಕಟ್ಟೆಯ ಅತ್ಯಗತ್ಯವಿದೆ.
ಆಗ ನಾವು ಕೆಜಿಎಫ್‌ನ 'ಸಿಇಒ....ಇಂಡಿಯಾ' ಡೈಲಾಗ್‌ನ್ನು ರಾಜಮೌಳಿಗೆ ಅರ್ಪಿಸಲೇಬೇಕು.
ಕೊನೆಯದಾಗಿ: ರಾಜಮೌಳಿ ಎನ್ನುವ ಚಿತ್ರ ಮಾಂತ್ರಿಕ ಖಂಡಿತ ಅಧ್ಯಯನ ಯೋಗ್ಯ ವ್ಯಕ್ತಿ. ಚಿತ್ರ ನಿರ್ಮಾಣ ಮುಗಿಯುವರೆಗೆ ಜಗತ್ತಿನ ಕಣ್ಣಿಗೆ ಕಾಣಿಸಿಕೊಳ್ಳುವುದಿಲ್ಲ. ಚಿತ್ರ ಮುಗಿದ ಮೇಲೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲೆಡೆ ಓಡಾಡುತ್ತಾರೆ. ತನ್ನ ಚಿತ್ರ, ತನ್ನ ಕನಸಿನ ಹೊರತಾಗಿ ಒಂದಕ್ಷರವೂ ಆ ಕಡೆ, ಈ ಕಡೆ ಮಾತನಾಡುವುದಿಲ್ಲ. ನಮಗೆ ಒಂದಷ್ಟು ಯಶಸ್ಸು (Success) ಬಂದರೆ ಜಗತ್ತಿನ ಎಲ್ಲ ವಿಚಾರಗಳ ಬಗೆಗೂ ನಮ್ಮ ಕಾಮೆಂಟ್ ಮಾಡುತ್ತೇವೆ. ಆದರೆ ಈ ವ್ಯಕ್ತಿ ತನ್ನ ಚಿತ್ರ ಬದುಕಿನ ಪರಿಧಿ ಬಿಟ್ಟು ಹೊರಗಡೇ ತಲೆಯೇ ಹಾಕುವುದಿಲ್ಲ. ತನ್ನ ಚಿತ್ರದ ವಿಚಾರಕ್ಕೆ ಬಂದರೆ ಎಲ್ಲಿಲ್ಲದ ನಿಷ್ಠೆ, ಶಿಸ್ತನ್ನು ತೋರಿಸುತ್ತಾರೆ. ತಾನು ದುಡಿದ ಹಣವನ್ನು ಖರ್ಚು ಮಾಡಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭವಿಷ್ಯದ ಬಂಡವಾಳ ಆಕರ್ಷಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎನಿಸುತ್ತದೆ. ಇದೇ ಕಾರಣಕ್ಕಾಗಿ ರಾಜಮೌಳಿಯು ಇಂದು ಭಾರತೀಯ ಚಿತ್ರರಂಗದ ಬ್ರಾಂಡ್ ಆಗಿ ಬೆಳೆಯುತ್ತಿದ್ದಾರೆ. ಜೇಮ್ಸ್ ಕ್ಯಾಮರೂನ್ ರೀತಿಯ ಮಾಂತ್ರಿಕರು ನಮ್ಮಲ್ಲೂ ಹುಟ್ಟುವಂತಾಗಲಿ. ತೆರೆಮರೆಯಲ್ಲಿರುವವರು ಬೆಳಗುವಂತಾಗಲಿ.