Asianet Suvarna News Asianet Suvarna News

Salman Khan ಮನೆಗೆ ಫುಲ್‌ ಸೆಕ್ಯುರಿಟಿ: ಎಲ್ಲಾ ಕಾರ್ಯಕ್ರಮ ಸ್ಥಗಿತ!

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್‌ ಅವರಿಗೆ ಲಾರೆನ್ಸ್ ಬಿಷ್ಣೋಯ್‌ ಅವರಿಂದ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಭದ್ರತೆ ವಹಿಸಲಾಗಿದೆ. ಏನಿದು ಕೇಸ್‌?
 

Full security at Salman Khans house All programs cancelled
Author
First Published Mar 21, 2023, 10:40 AM IST

ಕಳೆದ ಕೆಲ ತಿಂಗಳುಗಳಿಂದ ಸಲ್ಮಾನ್ ಖಾನ್ (Salman Khan) ಅವರಿಗೆ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನಿಂದ  ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ. ಕಳೆದ ೨-೩ ದಿನಗಳಿಂದ ಬೆದರಿಕೆ ಬರುವುದು ಹೆಚ್ಚಾಗಿದೆ. ನಿನ್ನೆ ಭಾನುವಾರ ರಾತ್ರಿ ಕೂಡ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್‌ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ಇಮೇಲ್ ಕಳುಹಿಸಿದ್ದಾನೆ. ಸಲ್ಮಾನ್ ಅವರ ಮ್ಯಾನೇಜರ್ ಪ್ರಶಾಂತ್ ಗುಂಜಾಲ್ಕರ್ ಅವರು ಇ-ಮೇಲ್ ಸ್ವೀಕರಿಸಿದ ತಕ್ಷಣ ಪೊಲೀಸ್ ದೂರು ನೀಡಿದ್ದಾರೆ. ಪ್ರಶಾಂತ್ ಅವರ ದೂರಿನ ಮೇರೆಗೆ ಮುಂಬೈ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸಲ್ಮಾನ್‌ ಖಾನ್‌ ಮತ್ತು ಅವರ ಮನೆಯ ಸುತ್ತ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ.  ಬೆದರಿಕೆಯ ಬಗ್ಗೆ ಅವರ ಕುಟುಂಬ ಸದಸ್ಯರು ತುಂಬಾ ಚಿಂತಿತರಾಗಿದ್ದು, ಆತಂಕದಲ್ಲಿ ಸಮಯ ಕಳೆಯುತ್ತಿದ್ದಾರೆ.  ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಸದ್ಯ  ಯಾವುದೇ  ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸಲ್ಮಾನ್‌ ಅವರಿಗೆ ಸೂಚಿಸಲಾಗಿದೆ.  ಮುಂಬೈ ಪೊಲೀಸರು ಬಾಂದ್ರಾದಲ್ಲಿರುವ (Bandra) ಸಲ್ಮಾನ್‌ನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಕೂಲಂಕಷವಾಗಿ ತಪಾಸಣೆ ನಡೆಸುತ್ತಿರುವ ದೃಶ್ಯ ಭಾನುವಾರ ಕಂಡುಬಂತು.  

ಸಲ್ಮಾನ್ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅವರ ವೇಳಾಪಟ್ಟಿಯನ್ನು ಬದಲಾಯಿಸಲು ಪೊಲೀಸರು ಸೂಚಿಸಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.  ಮುಂದಿನ ಕೆಲವು ದಿನಗಳವರೆಗೆ ಯಾವುದೇ ರೀತಿಯ  ಗ್ರೌಂಡ್ ಈವೆಂಟ್ ತಪ್ಪಿಸಲು ಸಲ್ಮಾನ್‌ ಅವರ ತಂಡಗಳಿಗೆ ಪೊಲಿಸರು ಸೂಚಿಸಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ.  ಅದಕ್ಕೆ ತಕ್ಕಂತೆ ಪ್ರಚಾರ ಕಾರ್ಯ ನಡೆಸಬೇಕಿತ್ತು. ಆದರೆ ಅದಕ್ಕೂ ಸದ್ಯ ಬ್ರೇಕ್‌ ಹಾಕುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಸಲ್ಮಾನ್‌ ಅವರು ಸದ್ಯ ಮುಂಬೈನಲ್ಲಿಲ್ಲ ಮತ್ತು ಅವರು ಯಾವಾಗ ಹಿಂದಿರುಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ.

ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ; ಕೊಂದೇ ತೀರುತ್ತೇನೆ ಎಂದ ಗ್ಯಾಂಗ್‌ಸ್ಟರ್

ಸಲ್ಮಾನ್ ಖಾನ್ ತಂಡಕ್ಕೆ ಬೆದರಿಕೆ ಇ-ಮೇಲ್ ಬಂದ ನಂತರ ಮುಂಬೈ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದರೋಡೆಕೋರ ಗೋಲ್ಡಿ ಬ್ರಾರ್ (Goldy Brar) ಸಲ್ಮಾನ್ ಅವರೊಂದಿಗೆ ಮಾತನಾಡಲು ಬಯಸಿದ್ದರು ಮತ್ತು ಅವರ ತಂಡದ ಸಮಯವನ್ನು ನಿಗದಿಪಡಿಸುವಂತೆ ಕೇಳಿಕೊಂಡಿದ್ದರು ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.  ಇಮೇಲ್ ಅನ್ನು ಸಲ್ಮಾನ್ ಖಾನ್ ತಂಡದ ಮ್ಯಾನೇಜರ್ ಪ್ರಶಾಂತ್ ಗುಂಜಾಲ್ಕರ್ ಸ್ವೀಕರಿಸಿದ್ದಾರೆ. ರೋಹಿತ್ ಗಾರ್ಗ್ ಎಂಬುವವರು ಈ ಮೇಲ್ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಅಷ್ಟಕ್ಕೂ ಲಾರೆನ್ಸ್ ಬಿಷ್ಣೋಯ್ ಅವರು ಈ ಕೊಲೆ ಬೆದರಿಕೆ ಹಾಕುತ್ತಿರಲು ಕಾರಣ, ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ (Blackbuck poaching case) ಸಲ್ಮಾನ್ ಖಾನ್ ತಪ್ಪಿತಸ್ಥ ಎಂದು ಸಾಬೀತಾಗಿದ್ದು. ಈ ಪ್ರಕರಣದಲ್ಲಿ ಸಲ್ಮಾನ್​ ಸದ್ಯ ಜಾಮೀನಿನ ಮೇಲೆ ಇದ್ದರೂ, ಬಿಷ್ಣೋಯ್ ಸಮುದಾಯವರು ಮಾತ್ರ ನಟನ ಬೆನ್ನ ಬಿದ್ದಿದ್ದಾರೆ. ಏಕೆಂದರೆ,  ಕೃಷ್ಣಮೃಗಗಳನ್ನು ಬಿಷ್ಣೋಯ್ ಸಮುದಾಯವು ಪವಿತ್ರವೆಂದು ಪರಿಗಣಿಸುತ್ತದೆ. ಅದಕ್ಕಾಗಿಯೇ ಲಾರೆನ್ಸ್ ಬಿಷ್ಣೋಯ್ (Lawrence Bishnoi) ಸಲ್ಮಾನ್ ಖಾನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಅವರನ್ನು ಕೊಲ್ಲುವುದಾಗಿ  ಹಿಂದೆಯೂ ಕೆಲ ಬಾರಿ ಕೊಲೆ ಬೆದರಿಕೆ ಬಂದಿತ್ತು.  ಕೊಲೆ ಬೆದರಿಕೆ ಒಡ್ಡಿರುವ ಆರೋಪ ಹೊತ್ತ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿ ಇದ್ದು, ಈಗ ಪದೇ ಪದೇ  ಮತ್ತೆ ಬೆದರಿಕೆ ಹಾಕುತ್ತಲೇ ಇದ್ದಾರೆ.  ಅಷ್ಟಕ್ಕೂ ಅವರ ಬೇಡಿಕೆ ಎಂದರೆ ಕೃಷ್ಣಮೃಗವನ್ನು ಕೊಂದಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಎನ್ನುವುದು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಭವಿಷ್ಯವನ್ನು ಯಾವುದೇ ನ್ಯಾಯಾಲಯ ನಿರ್ಧರಿಸುವುದಿಲ್ಲ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾರೆ. 

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

ಪೊಲೀಸರ ಮುಂದೆ ನೀಡಿದ ಹೇಳಿಕೆಯಲ್ಲಿ, ಸಲ್ಮಾನ್ ಖಾನ್ ಮತ್ತು ಅವರ ತಂದೆ ಸಲೀಂ ಖಾನ್ ಈ ವಿಷಯದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರೆ (Apology) ತಮ್ಮ ಮನಸ್ಸು ಕೂಡ ಬದಲಾಗಬಹುದು ಎಂದು ಲಾರೆನ್ಸ್ ಬಿಷ್ಣೋಯ್ ಈ ಹಿಂದೆ ಹೇಳಿದ್ದರು. ಇದರ ಹೊರತಾಗಿಯೂ ಸಲ್ಮಾನ್​ ಖಾನ್​ ಕ್ಷಮೆ ಕೋರಿಲ್ಲ ಎನ್ನುವುದು ಅವರಿಗೆ ಇರುವ ಆಕ್ರೋಶ. ಕ್ಷಮೆ ಕೋರದೇ ಹೋದರೆ  ಪರಿಣಾಮ ಎದುರಿಸಲು ಸಿದ್ಧ ಇರಿ ಎಂದು ಗ್ಯಾಂಗ್​ ಎಚ್ಚರಿಕೆ ನೀಡಿದೆ.  ಕ್ಷಮೆ ಕೋರದ ಸಲ್ಮಾನ್ ಅವರ ಅಹಂಕಾರವನ್ನು ಮುರಿಯುತ್ತೇವೆ ಎಂದಿದ್ದಾರೆ.

Follow Us:
Download App:
  • android
  • ios