ಬಾಲಿವುಡ್ ನಟ ಡಿನೋ ಮೊರಿಯಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 65 ಕೋಟಿ ಮಿಥಿ ನದಿ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ.

ಬಾಲಿವುಡ್ ನಟ ಡಿನೋ ಮೊರಿಯಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿನೋ ಮೊರಿಯಾ ಅವರ ಮುಂಬೈ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮಿಥಿ ನದಿ ಸ್ವಚ್ಛತೆಗೆ ಸಂಬಂಧಿಸಿದಂತಹ 65 ಕೋಟಿ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಮುಂಬೈನಲ್ಲಿರುವ ನಟನ ನಿವಾಸ ಹಾಗೂ ಕೇರಳ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಈ 65 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದೆ.

ಡಿನೋ ಮೊರಿಯಾ ಜೊತೆಗೆ ಬಿಎಂಸಿಯ ಕೆಲವು ಎಂಜಿನಿಯರ್‌ಗಳು, ಹಲವು ಗುತ್ತಿಗೆದಾರರಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ ವಿರೋಧಿ ಕಾನೂನುಗಳು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಈ ಶೋಧಗಳನ್ನು ನಡೆಸಲಾಗಿದೆ. ಮುಂಬೈನಲ್ಲಿ ಪ್ರವಾಹ ನಿಯಂತ್ರಣ ಮತ್ತು ಒಳಚರಂಡಿ ಕೆಲಸಕ್ಕಾಗಿ ಉದ್ದೇಶಿಸಲಾದ ಸಾರ್ವಜನಿಕ ಹಣದ ದುರುಪಯೋಗವನ್ನು ಪತ್ತೆಹಚ್ಚುವುದು ಈ ದಾಳಿಯ ಉದ್ದೇಶವಾಗಿದೆ. 65ಕೋಟಿಯ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯೂ) ಮೊದಲ ಪ್ರಕರಣ ದಾಖಲಿಸಿದ ನಂತರ ಈ ದಾಳಿ ನಡೆದಿದೆ.

ವರದಿಗಳ ಪ್ರಕಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಬ್ಯಾಂಕ್ ದಾಖಲೆಗಳು, ಡಿಜಿಟಲ್ ಫೈಲ್‌ಗಳು ಮತ್ತು ಇತರ ಹಣಕಾಸಿನ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ನಕಲಿ ದಾಖಲೆಗಳು ಹಾಗೂ ಎಂದಿಗೂ ಮಾಡದ ಕೆಲಸಕ್ಕೆ ಹೆಚ್ಚಿನ ಶುಲ್ಕ ವಿಧಿಸಿ ಹಣ ಕೊಳ್ಳೆ ಹೊಡೆದಿರುವ ಆರೋಪವಿದೆ. ವಿಶೇಷವಾಗಿ 2005 ರ ಪ್ರವಾಹದ ನಂತರ ಮುಂಬೈ ಜನರ ಗಮನ ಸೆಳೆದ ನಗರದ ಪ್ರಮುಖ ಜಲಮಾರ್ಗವಾದ ಮಿಥಿ ನದಿಯ ಶುಚಿಗೊಳಿಸುವಿಕೆಗೆ ಸಂಬಂಧಿಸಿದ ಪ್ರಕರಣವಾಗಿದೆ.

2007 ಮತ್ತು 2021 ರ ನಡುವೆ ಎಂದಿಗೂ ನಡೆಸದಿರುವ ಮಿಥಿ ನದಿ ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂ ಹಣ ಪಾವತಿ ಮಾಡಿ ವಂಚನೆ ಎಸಗಿದ ಬಗ್ಗೆ ಬಿಎಂಸಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿದಂತೆ 13 ವ್ಯಕ್ತಿಗಳ ವಿರುದ್ಧ ಆರ್ಥಿಕ ಅಪರಾಧಗಳ ವಿಭಾಗ ಈ ಹಿಂದೆ ಪ್ರಕರಣ ದಾಖಲಿಸಿತ್ತು. ಮಿಥಿ ನದಿಯನ್ನು ಸ್ವಚ್ಛಗೊಳಿಸಲು ವಿಶೇಷ ಯಂತ್ರಗಳನ್ನು ನೇಮಿಸಿಕೊಳ್ಳುವ ಒಪ್ಪಂದಗಳನ್ನು ಕೆಲವು ಕಂಪನಿಗಳಿಗೆ ಅನುಕೂಲವಾಗುವಂತೆ ಮಾಡಿ ವಂಚನೆ ಮಾಡಲಾಗಿದ್ದು, ಇದರಿಂದ ಬಿಎಂಸಿಗೆ ಕೋಟ್ಯಾಂತರ ಮೊತ್ತದ ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.

ಈ ಮಿಥಿ ನದಿಯೂ ಬೆಂಗಳೂರಿನ ವೃಷಭಾವತಿ ನದಿಯಂತೆ ಮುಂಬೈ ಮಹಾನಗರದ ಮಧ್ಯೆ ಹರಿಯುವ ನದಿಯಾಗಿದ್ದು, ಸಮುದ್ರ ಸೇರುತ್ತದೆ. ಕೊಳಚೆ ನೀರಿನಿಂದಾಗಿ ನದಿಯಲ್ಲಿ ಅತೀಯಾದ ಹೂಳು ತುಂಬಿದ್ದು, ಮಳೆ ಬಂದಾಗಲೆಲ್ಲಾ, ಉಕ್ಕಿ ಹರಿದು ಪ್ರವಾಹ ಸ್ಥಿತಿ ತಂದೊಡ್ಡುತ್ತದೆ.

ಇತ್ತ ಡಿನೋ ಮೊರಿಯಾ ಸಿನಿಮಾಗಳ ಬಗ್ಗೆ ಹೇಳುವುದಾದರೆ ಅವರು ಕೊನೆಯದಾಗಿ ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ 'ದಿ ರಾಯಲ್ಸ್‌'ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಭೂಮಿ ಪೆಡ್ನೇಕರ್ ಮತ್ತು ಇಶಾನ್ ಖಟ್ಟರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಅವರು OG ಫ್ರಾಂಚೈಸ್‌ನ ಹೌಸ್‌ಫುಲ್ 5 ರಲ್ಲೂ ನಟಿಸಿದ್ದಾರೆ, ತರುಣ್ ಮನ್ಸುಖಾನಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ರಿತೇಶ್ ದೇಶಮುಖ್, ಅಭಿಷೇಕ್ ಬಚ್ಚನ್, ಫರ್ದೀನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್, ಸೋನಮ್ ಬಜ್ವಾ, ನರ್ಗಿಸ್ ಫಕ್ರಿ, ಸಂಜಯ್ ದತ್, ಜಾಕಿ ಶ್ರಾಫ್, ನಾನಾ ಪಾಟೇಕರ್, ಚಿತ್ರಾಂಗದಾ ಸಿಂಗ್, ರಂಜಿತ್, ಸೌಂದರ್ಯ ಶರ್ಮಾ ಮತ್ತು ನಿಕಿತಿನ್ ಧೀರ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.