ಅಂಡರ್‌ವಲ್ಡ್‌ನಿಂದ ಯಾವುದೇ ಕರೆ ಬಂದರೂ ಸಿನಿಮಾ ಮಂದಿ ನಡುಗುತ್ತಿದ್ದ ಹೊತ್ತಿನಲ್ಲಿ ಧರ್ಮೇಂದ್ರ ಅದಕ್ಕೆಲ್ಲ ಕ್ಯಾರೇ ಅನ್ನುತ್ತಿರಲಿಲ್ಲ. ಒಂದು ಬಾರಿ ಧರ್ಮೇಂದ್ರ ಅವರಿಗೂ ಅಂಡರ್ ವಲ್ಡ್‌ನಿಂದ ಕರೆ ಬಂದಿತ್ತಂತೆ.
1980-90ರ ದಶಕದಲ್ಲಿ ಬಾಲಿವುಡ್ ಅಂಡರ್‌ವಲ್ಡ್ ಕಪಿಮುಷ್ಟಿಯಲ್ಲಿತ್ತು. ಆದರೆ, ಧರ್ಮೇಂದ್ರ ಅವರು ಧೈರ್ಯವಂತ ನಟ. ಅವರು ಅಂಡರ್‌ವಲ್ಡ್ ಸೇರಿ ಯಾರಿಗೂ ಹೆದರುವ ವ್ಯಕ್ತಿ ಆಗಿರಲಿಲ್ಲ. ಅಂಡರ್‌ವಲ್ಡ್‌ನಿಂದ ಯಾವುದೇ ಕರೆ ಬಂದರೂ ಸಿನಿಮಾ ಮಂದಿ ನಡುಗುತ್ತಿದ್ದ ಹೊತ್ತಿನಲ್ಲಿ ಧರ್ಮೇಂದ್ರ ಅದಕ್ಕೆಲ್ಲ ಕ್ಯಾರೇ ಅನ್ನುತ್ತಿರಲಿಲ್ಲ. ಒಂದು ಬಾರಿ ಧರ್ಮೇಂದ್ರ ಅವರಿಗೂ ಅಂಡರ್ ವಲ್ಡ್‌ನಿಂದ ಕರೆ ಬಂದಿತ್ತಂತೆ. ಆಗ ಧರ್ಮೇಂದ್ರ ನಿಮ್ಮ ಬೆದರಿಕೆಯನ್ನೆಲ್ಲ ನನ್ನ ಜತೆ ಇಟ್ಟುಕೊಳ್ಳಬೇಡಿ. ನಿಮ್ಮ ಬಳಿ 10 ಜನ ಇರಬಹುದು. ಆದರೆ ನನ್ನ ಹುಟ್ಟೂರು ಸಹನೆವಾಲ್‌ಗೆ ಒಂದು ಕರೆ ಮಾಡಿದರೂ ಸಾಕು. ಟ್ರಕ್ ಹತ್ತಿ ಇಡೀ ಸೈನ್ಯವೇ ಮುಂಬೈಗೆ ಬರಲಿದೆ ಎಂದು ಎಚ್ಚರಿಸಿದ್ದರಂತೆ. ಆ ಬಳಿಕ ಅವರಿಗೆ ಯಾವುದೇ ಕರೆಬಂದಿಲ್ಲ ಎನ್ನುತ್ತಾರೆ ನಿರ್ದೇಶಕ ಸತ್ಯಜಿತ್ ಪುರಿ.
ಚಾಕು ತಂದಿದ್ದ ಅಭಿಮಾನಿ
ಇನ್ನೊಂದು ಬಾರಿ ಅಭಿಮಾನಿಯೊಬ್ಬ ಧರ್ಮೇಂದ್ರ ಅವರಿಗೆ ಚಾಕು ಹಾಕಲು ಬಂದಿದ್ದನಂತೆ. ಆಗ ಧರ್ಮೇಂದ್ರ ಅವರು ಯಾರನ್ನೂ ನೆರವಿಗೆ ಕರೆಯದೆ ತಾವೇ ಆ ಅಭಿಮಾನಿಯನ್ನು ನಿಯಂತ್ರಿಸಿದರಂತೆ. ಈಗಿನ ನಟರು ಬೌನ್ಸರ್‌ಗಳನ್ನು ಜತೆಗಿಟ್ಟು ಸಾರ್ವಜನಿಕವಾಗಿ ಓಡಾಡುತ್ತಾರೆ. ಆದರೆ, ಧರ್ಮೇಂದ್ರ ಮುಕ್ತವಾಗಿ ಓಡಾಡುತ್ತಿದ್ದರಂತೆ. ಅಷ್ಟರಮಟ್ಟಿಗೆ ಅವರು ಧೈರ್ಯವಂತರಂತೆ.
1980ರಲ್ಲಿ ಡ್ರೀಮ್ ಗರ್ಲ್ ಜತೆ 2ನೇ ವಿವಾಹ
ಚಿತ್ರರಂಗದಷ್ಟೇ ನಟ ಧರ್ಮೇಂದ್ರ ಬದುಕು ಕೂಡಾ ವರ್ಣರಂಜಿತವಾಗಿತ್ತು. ತಮ್ಮ 19ರ ಹರೆಯದಲ್ಲೇ ಪ್ರಕಾಶ್ ಕೌರ್‌ರನ್ನು ಮದುವೆಯಾಗಿದ್ದ ಅವರು ಆ ಬಳಿಕ 1980 ಡ್ರೀಮ್ ಗರ್ಲ್ ಹೇಮಾಮಾಲಿನಿ ವರಿಸಿ, ಮತಾಂತರದ ಆರೋಪವನ್ನೂ ಎದುರಿಸಿದ್ದರು. 1954ರಲ್ಲಿ ಪ್ರಕಾಶ್ ಕೌರ್‌ರನ್ನು ವರಿಸಿದ್ದ ಧರ್ಮೇಂದ್ರಗೆ ಸನ್ನಿ ಡಿಯೋಲ್, ಬಾಬಿ ಡಿಯೋಲ್, ವಿಜೇತಾ, ಅಜೀತಾ ಎನ್ನುವ ನಾಲ್ವರು ಮಕ್ಕಳು ಜನಿಸಿದರು. ಮದುವೆ ಬಳಿಕವೇ ಸಿನಿರಂಗಕ್ಕೆ ಕಾಲಿಟ್ಟ ಧರ್ಮೇಂದ್ರ 1960ರಲ್ಲಿ ಅದೃಷ್ಟ ಪರೀಕ್ಷೆಗಿಳಿದರು, ಡ್ರೀಮ್ ಗರ್ಲ್ ಅಂತಲೇ ಕರೆಸಿಕೊಳ್ಳುತ್ತಿದ್ದ ಹೇಮಾಮಾಲಿನಿ ಜತೆ ಪ್ರೀತಿಯಲ್ಲಿ ಬಿದ್ದರು. 1980ರಲ್ಲಿ ಮದುವೆಯಾದರು. ಆದರೆ ಪ್ರಕಾಶ್ ಕೌರ್‌ಗೆ ಡೈವೋರ್ಸ್ ನೀಡಿರಲಿಲ್ಲ. ವಿವಾದಕ್ಕೆ ಕಾರಣವಾಯಿತು. ಮುಸ್ಲಿಂಗೆ ಮತಾಂತರದ ಸುದ್ದಿಯಾಯಿತು. ಇಬ್ಬರೂ ನಿರಾಕರಿಸಿದ್ದರು. ಈ ಇಬ್ಬರ ದಾಂಪತ್ಯಕ್ಕೆ ಇಶಾ ಡಿಯೋಲ್ ಮತ್ತು ಅಹಾನಾ ಡಿಯೋಲ್ ಜನಿಸಿದರು. ಮೊದಲ ಪತ್ನಿ ಜತೆಗಿನ ಸಂಬಂಧವೂ ಉತ್ತಮವಾಗಿತ್ತು.
₹450 ಕೋಟಿ ಆಸ್ತಿ ಒಡೆಯ
ದಶಕಗಳ ಕಾಲ ಚಿತ್ರರಂಗದಲ್ಲಿ ಮಿಂಚಿದ್ದ ಧಮೇಂದ್ರ ಅವರ ಒಟ್ಟು ಆಸ್ತಿ ಅಂದಾಜು 450 ಕೋಟಿ ರು.ಇದ್ದರೆ, ಕುಟುಂಬದ ಒಟ್ಟು ಆಸ್ತಿ 1000 ಕೋಟಿ ರು. ಎನ್ನಲಾಗಿದೆ. ಸಂಪಾದನೆಯ ಹಣವನ್ನು ನಟ, ರಿಯಲ್ ಎಸ್ಟೇಟ್, ಹೋಟೆಲ್ ಉದ್ಯಮದಲ್ಲಿ ಹೂಡಿದ್ದರು. ಘರಂ-ಧರಂ-ಢಾಬಾ ಮತ್ತು ಹೀ-ಮ್ಯಾನ್ ಎಂಬ ಹೋಟೆಲ್ ಸ್ಥಾಪಿಸುವ ಮೂಲಕ ಯಶಸ್ಸುಗಳಿಸಿದ್ದರು. ಜೊತೆಗೆ ಮಹಾರಾಷ್ಟ್ರದ ಲೋನಾವಾಲಾದಲ್ಲಿ 100 ಎಕರೆಯ ತೋಟದ ಮನೆಯನ್ನು ಹೊಂದಿರುವ ಧರ್ಮೇಂದ್ರ, ತಮ್ಮ ಬಿಡುವಿನ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು. ಜೊತೆಗೆ ಧರ್ಮೇಂದ್ರ ಅವರು ಕಾರುಗಳ ಸಂಗ್ರಹವೂ ಜೋರಾಗಿಯೇ ಇದೆ. ಅತ್ಯಾಧುನಿಕ ರೇಂಜ್ ರೋವರ್ ಇವೋಕ್, ಮರ್ಸಿಡಿಸ್ ಬೆಂಜ್‌ನ ಎಸ್‌ಎಲ್500 ಮತ್ತು ಹಳೆಯ ಫಿಯಟ್ ಸೇರಿ ಹಲವು ಕಾರುಗಳನ್ನು ಇವರು ಹೊಂದಿದ್ದಾರೆ.
ಹೇಮಾ ಜತೆಗೆ ಕೊನೆ ಪೋಟೋ ಪೋಸ್ಟ್
ಅನಾರೋಗ್ಯದಿಂದ ನಿಧನರಾದ ನಟ ಧರ್ಮೇಂದ್ರ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕಡೆಯದಾಗಿ ಪತ್ನಿ ಹೇಮಾಮಾಲಿನಿ ಅವರೊಂದಿಗೆ ತೆಗೆದಿದ್ದ ಕಪ್ಪು ಬಿಳುಪಿನ ಹಳೆಯ ಫೋಟೋವನ್ನು ಹಂಚಿಕೊಂಡಿದ್ದರು. ಈ ವರ್ಷದ ಮಾ.23ರಂದು ಇದನ್ನು ಅಪ್ಲೋಡ್ ಮಾಡಿದ್ದರು. ಇದೇ ಜಾಲತಾಣದಲ್ಲಿ ಅವರ ಕೊನೆಯ ಫೋಟೋ ಪೋಸ್ಟ್ ಆಗಿತ್ತು.
ಬಿಜೆಪಿಯಿಂದ ಸಂಸದರಾಗಿದ್ದ ಧರ್ಮೇಂದ್ರ
ನಟರಾಗಿ ತೆರೆ ಮೇಲೆ ಮಿಂಚಿದ್ದ ನಟ ಧರ್ಮೇಂದ್ರ ರಾಜಕೀಯದಲ್ಲಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. 2004 - 2009ರ ಅವಧಿಗೆ ಸಂಸದರಾಗಿದ್ದರು. ಆ ಬಳಿಕ ರಾಜಕೀಯದಿಂದ ದೂರವೇ ಉಳಿದು ಬಿಟ್ಟರು. ರಾಜಸ್ಥಾನದ ಬಿಕಾನೇರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ನಿಂತಿದ್ದ ಧರ್ಮೇಂದ್ರ ಅವರು ಚೊಚ್ಚಲ ಚುನಾವಣೆಯಲ್ಲಿಯೇ ಬರೋಬ್ಬರಿ 60000 ಮತಗಳ ಅಂತರದಲ್ಲಿ ಗೆದ್ದು ಬೀಗಿದರು. ಆದರೆ ಅಲ್ಪಸಮಯದಲ್ಲಿಯೇ ಅವರಿಗೆ ರಾಜಕೀಯ ಬೇಸರ ತರಿಸಿತ್ತು. ‘ರಾಜಕೀಯಕ್ಕೆ ಬರುವುದು ತಪ್ಪಲ್ಲ. ಆದರೆ ನಟ ಎಂದಿಗೂ ರಾಜಕೀಯಕ್ಕೆ ಬರಬಾರದು’ ಎಂಬ ಮಾತುಗಳನ್ನಾಡಿದ್ದರು. ಆ ಬಳಿಕ ಅವರು ತಮ್ಮ 5 ವರ್ಷಗಳ ಅವಧಿಗೆ ಮುಗಿದ ಬಳಿಕ 2009ರಿಂದ ರಾಜಕೀಯದಿಂದ ದೂರವೇ ಉಳಿದರು.


